Shivarajkumar: ನಟ ಶಿವರಾಜ್ ಕುಮಾರ್ ಮನೆಗೆ ಸಿದ್ದರಾಮಯ್ಯ ಭೇಟಿ
ಬೆಂಗಳೂರು, ಜನವರಿ 27: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಖ್ಯಾತ ನಟ ಶಿವರಾಜ್ ಕುಮಾರ್ ಅವರ ನಾಗವಾರದಲ್ಲಿನ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ಕಳೆದ 2024 ಡಿಸೇಂಬರ್ 18ರಂದು ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದ್ದ ಶಿವರಾಜ್‌ಕುಮಾರ್ ಅವರಿಗೆ ಚಿಕಿತ್ಸೆ ಯಶಸ್ವಿಯಾಗಿದೆ.
ನಟ ಶಿವರಾಜ್ ಕುಮಾರ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಶಿವರಾಜ್ ಕುಮಾರ್ ಅವರ ಶಸ್ತ್ರಚಿಕಿತ್ಸೆಯ ನಂತರ ಹಿಂತಿರುಗಿ ಬಂದ ನಂತರ ಅವರ ಆರೋಗ್ಯವನ್ನು ವಿಚಾರಿಸಲು ಇಂದು ಭೇಟಿ ಮಾಡಿದ್ದೇನೆ. ಅವರ ಶಸ್ತ್ರ ಚಿಕಿತ್ಸೆಯ ಮರುದಿನವೇ ಅವರಿಗೆ ಕರೆಯಾಡಿ ಆರೋಗ್ಯ ವಿಚಾರಿಸಿದಾಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ತೊಂದರೆ ಇಲ್ಲ ಎಂದು ತಿಳಿಸಿದ್ದರು.ಮುಂದಿನ ತಿಂಗಳಿನಿಂದ ಚಿತ್ರೀಕರಣಕ್ಕೆ ತೆರಳುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಮಾತನಾಡಿ, ನಟ ಶಿವರಾಜ್ ಕುಮಾರ್ ಅವರು ಬದುಕಿನ ಯುದ್ಧ ಗೆದ್ದು ಬಂದಿರುವುದು ನಮಗೆಲ್ಲಾ ಸಂಭ್ರಮದ ಕ್ಷಣ ಎಂದು ಶ್ರೀ ರಾಘವೇಂದ್ರ ಚಿತ್ರವಾಣಿಯ 49ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಿನಿಮಾ ಕ್ಷೇತ್ರದ ಸಾಧಕರಿಗೆ 24ನೇ ವರ್ಷದ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಮಾತನಾಡಿದರು.
ಬಾಕಿ ಉಳಿದಿರುವ ಐದೂ ವರ್ಷಗಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಇದೇ ವರ್ಷ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಭರವಸೆ ನೀಡಿದರು. "ಸೊಸೆ ತಂದ ಸೌಭಾಗ್ಯ" ಸಿನಿಮಾದಿಂದ ಪಿಆರ್ ಒ ಕ್ಷೇತ್ರಕ್ಕೆ ಆಗಮಿಸಿದ ರಾಘವೇಂದ್ರ ಚಿತ್ರವಾಣಿ ಈಗ ಕನ್ನಡ ಚಿತ್ರರಂಗದ ಸೌಭಾಗ್ಯ ಆಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಈ ವಾರ ಸಿನಿಮಾ ಜಗತ್ತಿಗೆ ಸಂಭ್ರಮದ ವಾರ. 2019 ನೇ ಸಾಲಿನ ರಾಜ್ಯ ಸಿನಿಮಾ ಪ್ರಶಸ್ತಿಗಳು ಹಾಗೂ ನೆನ್ನೆ ಅನಂತನಾಗ್ ಅವರೂ ಸೇರಿ ಸಿನಿಮಾ ಕ್ಷೇತ್ರದ ದಿಗ್ಗಜರಿಗೆ ಪದ್ಮ ಪ್ರಶಸ್ತಿಗಳು ಲಭಿಸಿವೆ. ಇದು ಸಂಭ್ರಮದ ವಾರ ಎಂದರು.
ಐದು ವರ್ಷಗಳಿಂದ ರಾಜ್ಯ ಸಿನಿಮಾ ಪ್ರಶಸ್ತಿಗಳು ಸ್ಥಗಿತಗೊಂಡಿದ್ದವು. ನಾವು ಈಗಗಲೇ 2019 ರ ಪ್ರಶಸ್ತಿ ಘೋಷಣೆಯಾಗಿದ್ದು ಬಾಕಿ ಇರುವ ಐದೂ ವರ್ಷಗಳ ಪ್ರಶಸ್ತಿಯನ್ನೂ ಇದೇ ವರ್ಷ ನೀಡಿ ಗೌರವಿಸಲಾಗುವುದು ಎಂದು ಘೋಷಿಸಿದರು. ಸಿನಿಮಾ PRO ಗಳಿಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ದೇಶಕರನ್ನಾಗಿಸಲು ಮತ್ತು ಸರ್ಕಾರದ ಸಿನಿಮಾ ಪ್ರಶಸ್ತಿಗೆ ಪರಿಗಣಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ನಟಿ ಜಯಂತಿ ಅವರ ಹೆಸರಿನ ಪ್ರಶಸ್ತಿ ಸ್ಥಾಪಿಸಲು ಈಗಾಗಲೇ ಸರ್ಕಾರಿ ಆದೇಶ ಆಗಿದೆ ಎಂದು ತಿಳಿಸಿದರು. ಇನ್ನು, ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು, ಹಿರಿಯ ಪತ್ರಕರ್ತೆ ವಿಜಯಮ್ಮ, ಹಿರಿಯ ಪತ್ರಕರ್ತರಾದ ಸದಾಶಿವ ಶೆಣೈ, ನಿರ್ದೇಶಕರಾದ ಇಂದ್ರಜಿತ್ ಲಂಕೇಶ್, ನಟಿ ರಾಗಿಣಿ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಉಮೇಶ್ ಬಣಕಾರ್, ಸಂಜಯ್ ಗೌಡ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.












Click it and Unblock the Notifications