ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಎಂ ಭರವಸೆ
ಬೆಂಗಳೂರು,ಏಪ್ರಿಲ್ 16: ರಾಜ್ಯದ ಸಾರಿಗೆ ಸಂಸ್ಥೆ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಸಿಬ್ಬಂದಿಗೆ 2024ರ ಜನವರಿ 1 ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಸೇರಿ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.
KSRTC ನೌಕರ ಸಂಘಟನೆಗಳ ಪ್ರಮುಖರೊಂದಿಗೆ ಸಭೆ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸಾರಿಗೆ ನೌಕರರಿಗೆ ಸಮಾನ ವೇತನ ಜಾರಿ ಸೇರಿ ಎಲ್ಲಬೇಡಿಕೆಗಳ ಕುರಿತು ಪರಿಶೀಲಿಸಲಾಗುವುದು. ಬೇಡಿಕೆಗಳ ಈಡೇರಿಕೆಗಾಗಿ ಮತ್ತೊಮ್ಮೆ ಕಾರ್ಮಿಕಸಂಘಟನೆಗಳೊಂ ದಿಗೆ ಸಭೆ ನಡೆಸುತ್ತೇನೆ. ಆ ಸಂದರ್ಭದಲ್ಲಿ ಕೂಲಂಕಷವಾಗಿ ಚರ್ಚೆ ನಡೆಸಿ ಬೇಡಿಕೆಅನುಷ್ಠಾನಕ್ಕೆಮುಂದಾಗಲಾಗುವುದು ಎಂದು ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಬೇಡಿಕೆ ಕುರಿತು ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಯಾವತ್ತೂ ದುಡಿಯುವ ವರ್ಗದ ಪರವಾಗಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು. ಹಿಂದಿನ ಸರ್ಕಾರ ಸುಮಾರು 40 ಸಾವಿರ ಕೋಟಿ ರೂ. ಬಾಕಿ ಬಿಲ್ಲುಗಳನ್ನು ಉಳಿಸಿ ಹೋಗಿದೆ. ಇದು ಸರ್ಕಾರದ ಮೇಲೆ ಆರ್ಥಿಕ ಹೊರೆ ಉಂಟು ಮಾಡಿದೆ. ಸರ್ಕಾರದ ಇತಿಮಿತಿಯ ಒಳಗಾಗಿ ಬೇಡಿಕೆಗಳನ್ನು ಪರಿಶೀಲಿಸಲಾಗುವುದು.
ಸಾರಿಗೆ ನೌಕರರಿಗೆ ಸಮಾನ ವೇತನ ಜಾರಿ ಸೇರಿದಂತೆ ಎಲ್ಲಾ ಬೇಡಿಕೆಗಳ ಕುರಿತು ಪರಿಶೀಲನೆ ನಡೆಸಲಾಗುವುದು. ಬೇಡಿಕೆಗಳ ಈಡೇರಿಕೆ ಕುರಿತಾಗಿ ಇನ್ನೊಮ್ಮೆ ಕಾರ್ಮಿಕ ಸಂಘಟನೆಗಳೊಂದಿಗೆ ಸಭೆಯನ್ನು ಆದಷ್ಟು ಬೇಗನೆ ಕರೆಯಲಾಗುವುದು ಎಂದು ಹೇಳಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಂಸ್ಥೆಗೆ ರೂ. 4ಸಾವಿರ ಕೋಟಿಯಷ್ಟು ಮೊತ್ತವನ್ನು ಹಿಂದಿನ ಸರ್ಕಾರ ಬಾಕಿ ಉಳಿಸಿ ಹೋಗಿತ್ತು. ಸಂಸ್ಥೆಯನ್ನು ಬಲಪಡಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ನೌಕರರಿಗೆ ನಗದು ರಹಿತ ಚಿಕಿತ್ಸೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ.
ಈ ವರ್ಷದ ಬಜೆಟ್ನಲ್ಲಿ 350 ಕೋಟಿ ಸಾಲವನ್ನು ಪಡೆಯಲು ಸಂಸ್ಥೆಗೆ ಅನುಮತಿ ನೀಡಲಾಗಿದೆ. ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಲು 2ಸಾವಿರ ಬಸ್ಗಳನ್ನು ಹೊಸದಾಗಿ ಖರೀದಿ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾಹಿತಿ ನೀಡಿದರು. ಚಾಲಕ ಮತ್ತು ನಿರ್ವಾಹಕರ ಮಾದರಿಯಲ್ಲಿ ಮೆಕ್ಯಾನಿಕ್ಗಳ ನೇಮಕಾತಿಗೆ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ದಿನಾಂಕ 01/01/24 ರಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳ ಮತ್ತು ನೌಕರರ ವೇತನ ಪರಿಷ್ಕರಣೆ ಮಾಡಬೇಕು. ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನವನ್ನು ಸಾರಿಗೆ ನೌಕರರಿಗೂ ಜಾರಿಗೊಳಿಸಬೇಕು. 01.01.20ರಿಂದ ಜಾರಿಯಾಗಬೇಕಾದ ವೇತನ ಪರಿಷ್ಕರಣೆ 01.03.23ರಿಂದ ಅನುಷ್ಠಾನಕ್ಕೆ ಬಂದಿದ್ದು, 38 ತಿಂಗಳ ಬಾಕಿ ಹಣವನ್ನು ಪಾವತಿಸಬೇಕು. ಈ ಹಿಂದೆ 2020 ಮತ್ತು 2021ರ ಸಾರಿಗೆ ಮುಷ್ಕರ ಸಂದರ್ಭದಲ್ಲಿ ನೌಕರರ ಮೇಲೆ ಹಾಕಲಾಗಿರುವ ಎಲ್ಲಾ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಬೇಕು. ಸಾರಿಗೆ ನಿಗಮದ ವಿದ್ಯುತ್ ಬಸ್ಗಳಲ್ಲಿ ಸಂಸ್ಥೆಯ ಚಾಲಕರನ್ನೇ ಚಾಲನಾ ಕೆಲಸಕ್ಕೆ ನಿಯೋಜಿಸಬೇಕು. ಸದರಿ ಬಸ್ಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುವ ಪದ್ದತಿಯನ್ನು ಕೈಬಿಡಬೇಕು ಎಂದು ಕಾರ್ಮಿಕ ಸಮಿತಿಗಳ ಪ್ರತಿನಿಧಿಗಳು ಮನವಿ ಮಾಡಿದರು.












Click it and Unblock the Notifications