ಹತ್ತು ಅಮಿತ್ ಶಾ ಬರ್ಲಿ, ಸಿದ್ದು ಒಬ್ಬರೇ ಎದುರಿಸುತ್ತಾರೆ
ಬೆಂಗಳೂರು, ಜ 17: ಇತ್ತೀಚೆಗೆ ರಾಜ್ಯಕ್ಕೆ ಬಂದು ರಾಜ್ಯ ಬಿಜೆಪಿ ಘಟಕಕ್ಕೆ ಮತ್ತಷ್ಟು ಶಕ್ತಿ ತುಂಬಿ ಹೋಗಿದ್ದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಗ್ಗೆ ರಾಜ್ಯ ಆರೋಗ್ಯ ಸಚಿವರು ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನಮಗಾಗಲಿ ಅಥವಾ ನಮ್ಮ ಪಕ್ಷಕ್ಕಾಗಲಿ ಅಮಿತ್ ಶಾ ಬಗ್ಗೆ ಹೆದರಿಕೆಯಿಲ್ಲ. ಅಮಿತ್ ಶಾ ಅವರಂತಹ ಹತ್ತು ಜನ ಬಂದರೂ ನಮ್ಮ ಸಿಎಂ ಸಿದ್ದರಾಮಯ್ಯ ಒಬ್ಬರೇ ಎದುರಿಸಬಲ್ಲರು ಎಂದು ಆರೋಗ್ಯ ಸಚಿವ ಯು ಟಿ ಖಾದರ್ ಲೇವಡಿ ಮಾಡಿದ್ದಾರೆ.
ನಾವು ರಾಜ್ಯದಲ್ಲಿ ಉತ್ತಮ ಸರಕಾರ ನೀಡುತ್ತಿದ್ದೇವೆ. ದಿನದಿಂದ ದಿನಕ್ಕೆ ನಮ್ಮ ಕಾರ್ಯಕ್ರಮಗಳು ಜನಪ್ರಿಯಗೊಳ್ಳುತ್ತಿವೆ. ಇದನ್ನು ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಖಾದರ್ ಹೇಳಿದ್ದಾರೆ. (ಖಾದರ್ ಇತರರಿಗೆ ಮಾದರಿಯಾಗಲಿ)

ರಾಜ್ಯದಲ್ಲಿ ಕಳೆಗುಂದಿದ್ದ ಬಿಜೆಪಿಗೆ ಪುನಶ್ಚೇತನ ನೀಡಲು ರಾಜ್ಯದ ಬಿಜೆಪಿ ಘಟಕ ಅಮಿತ್ ಶಾ ಅವರನ್ನು ಇಲ್ಲಿಗೆ ಕರೆತಂದಿತ್ತು. ಸಿದ್ದರಾಮಯ್ಯ ಸರಕಾರ ಮೇಲೆ ಬಿಜೆಪಿ ವಿನಾಕಾರಣ ಆರೋಪ ಮಾಡುತ್ತಿದೆ ಎಂದು ಖಾದರ್, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದಲ್ಲಿ ಶನಿವಾರ (ಜ 17) ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಖಾದರ್, ರಾಜ್ಯದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಅರೆ ವೈದ್ಯಕೀಯ ಸಿಬ್ಬಂದಿ ಕೊರತೆಯಿದ್ದು ಅವುಗಳ ನೇಮಕ ಪ್ರಕ್ರಿಯೆ ಸದ್ಯದಲ್ಲೇ ನಡೆಯಲಿದೆ ಎಂದಿದ್ದಾರೆ.
ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ವಿಶೇಷ ಪ್ರೋತ್ಸಾಹ ನೀಡಲಾಗುವುದು. ಹಿಂದಿನ ಸರಕಾರ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿತ್ತು. ಆದರೆ ವೈದ್ಯರ ನೇಮಕಾತಿ ಮಾತ್ರ ಮಾಡಲಿಲ್ಲ ಎಂದು ಹಿಂದಿನ ಬಿಜೆಪಿ ಸರಕಾರದ ಆಡಳಿತವನ್ನು ಖಂಡಿಸಿದ್ದಾರೆ.












Click it and Unblock the Notifications