ಸಿಎಂ ಗದ್ದುಗೆ ಗುದ್ದಾಟ: 32 ಸಚಿವರ ಫೈಕಿ 16 ಮಂತ್ರಿಗಳ ಜೊತೆ ಸಿದ್ದರಾಮಯ್ಯ ಮೀಟಿಂಗ್! ಗೈರಾದವರ್ಯಾರು?
ಬೆಂಗಳೂರು, ನವೆಂಬರ್ 04: ರಾಜ್ಯದಲ್ಲಿ ಭರ್ಜರಿ ಬಹುಮತದೊಂದಿದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಸಿಎಂ ಗದ್ದುಗೆ ಗುದ್ದಾಟ ತಾರಕ್ಕೇರಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಸಚಿವರನ್ನ ಬ್ರೇಕ್ ಫಾಸ್ಟ್ ಮೀಟಿಂಗ್ ಏರ್ಪಡಿಸಿದ್ದಾರೆ.
ಹೌದು, ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಮುಂದಿನ ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಇದೀಗ ತಮ್ಮ ಸರ್ಕಾರಿ ನಿವಾಸ ಕಾವೇರಿಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಸಂಪುಟ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್ ಏರ್ಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ 32 ಸಚಿವರ ಪೈಕಿ 16 ಮಂದಿ ಸಚಿವರು ಉಪಹಾರ ಕೂಟದಲ್ಲಿ ಇಂದು ಭಾಗಿಯಾಗಲಿದ್ದಾರೆ. ಉಳಿದ 16 ಮಂದಿ ಸಚಿವರಿಗೆ ಮುಂದಿನ ಶನಿವಾರ ಉಪಹಾರ ಮೀಟಿಂಗ್ ನಿಗದಿ ಮಾಡಲಾಗಿದೆ ಎಂದು ಹೇಳಲಾಗಿದೆ. ಇನ್ನೂ ಸಿಎಂ ಗದ್ದುಗೆ ಗುದ್ದಾಟದ ವಿಚಾರ ಸಾಕಷ್ಟು ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಸಚಿವರೊಂದಿಗೆ ಮೀಟಿಂಗ್ ಏರ್ಪಡಿಸಿರುವುದು ಬಾರೀ ಕುತೂಹಲ ಮೂಡಿಸಿದೆ.
ಜನ ನನ್ನ ಐದು ವರ್ಷಕ್ಕೆ ಆಯ್ಕೆ ಮಾಡಿದ್ದಾರೆ. ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಉಂಟಾದ ಗೊಂದಲ ನಿವಾರಣೆ ಸೇರಿದಂತೆ ಶಾಸಕರು ಹಾಗೂ ಸಚಿವರ ನಡುವಿನ ಸಮನ್ವಯತೆ ಹಾಗೂ ಲೋಕಸಭಾ ಚುನಾವಣಾ ತಯಾರಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.
ಇನ್ನೂ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಗೃಹ ಸಚಿವ ಡಾ. ಜಿ ಪರಮೇಶ್ವರ್, ಸಚಿವರಾದ ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಖಾನ್ ಎಂ ಬಿ ಪಾಟೀಲ್, ಹೆಚ್ ಸಿ ಮಹದೇವಪ್ಪ, ಈಶ್ವರ್ ಖಂಡ್ರೆ, ಬೈರತಿ ಸುರೇಶ್, ಪ್ರಿಯಾಂಕ್ ಖರ್ಗೆ, ರಾಮಲಿಂಗ ರೆಡ್ಡಿ ಮತ್ತು ಸಂತೋಷ್ ಲಾಡ್ , ಕೆ.ಎನ್ ರಾಜಣ್ಣ ದಿನೇಶ್ ಗುಂಡೂರಾವ್ ಮತ್ತು ಕೆ.ಜೆ. ಜಾರ್ಜ್ ಸಚಿವ ಎನ್ ಎಸ್ ಬೋಸರಾಜು ಅವರು ಪಾಲ್ಗೊಂಡಿದ್ದಾರೆ. ಇನ್ನೂ ಪಕ್ಷದಲ್ಲಿನ ಕೆಲ ನಾಯಕರ ವಿರುದ್ಧ ಬೇಸರಗೊಂಡಿರುವ ಸಚಿವ ಸತೀಶ್ ಜಾರಕಿಹೊಳಿಯವರು ಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ಗೈರಾಗಿದ್ದಾರೆ.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಕುರಿತು ಉಂಟಾಗಿರುವ ಗೊಂದಲಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದು, ಬಹಿರಂಗ ಹೇಳಿಕೆಯನ್ನ ನೀಡದಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಅಲ್ಲದೇ 2024 ರ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆ ಸಂಬಂಧ ಕೆಪಿಸಿಸಿ ಅಧ್ಯಕ್ಷರು ನೀಡಿದ್ದ ಜವಾಬ್ದಾರಿಯನ್ನೂ ಸರಿಯಾಗಿ ಎಲ್ಲಾ ಸಚಿವರು ನಿರ್ವಹಿಸಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು. ಕಾಟಾಚಾರಕ್ಕೆ ಸಮೀಕ್ಷೆ ನಡೆಸಿ ಆಕಾಂಕ್ಷಿತ ಅಭ್ಯರ್ಥಿಗಳ ವರದಿ ನೀಡಿದ್ದರು ಎಂಬ ಕೂಗು ಇದೆ. ಈ ಕುರಿತಾಗಿಯೂ ಸಹ ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಹೈಕಮಾಂಡ್ ನೀಡಿರುವ ಗುರಿಯನ್ನ ತಲುಪುವತ್ತ ಕಾರ್ಯನಿರ್ವಹಿಸಿ ಎಂದು ಸಭೆಯಲ್ಲಿ ಸಚಿವರುಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಮತ್ತೊಮ್ಮೆ ಕ್ಷೇತ್ರದ ಶಾಸಕರು, ಜಿಲ್ಲಾಧ್ಯಕ್ಷರು, ಮಾಜಿ ಶಾಸಕರು, ಪ್ರಮುಖ ನಾಯಕರು, ಪದಾಧಿಕಾರಿಗಳ ಸಭೆ ನಡೆಸಿ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ಇನ್ನೂ ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಕಾರ್ಯತಂತ್ರ, ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications