Siddaramaiah: ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು
ಬೆಂಗಳೂರು, ಫೆಬ್ರವರಿ 02: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾನುವಾರದ ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದ್ದು, ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಕುರಿತು ನಿಗಾವಹಿಸಿದೆ. ನಿಗದಿತ ಕಾರ್ಯಕ್ರಮದಂತೆ ಸಿದ್ದರಾಮಯ್ಯ ಇಂದು ಚಿಕ್ಕಬಳ್ಳಾಪುರ, ಚನ್ನಪಟ್ಟಣ ಪ್ರವಾಸ ಕೈಗೊಳ್ಳಬೇಕಿತ್ತು, ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು.
ಉನ್ನತ ಶಿಕ್ಷಣ ಖಾತೆ ಸಚಿವ ಡಾ. ಎಂ. ಸಿ. ಸುಧಾಕರ್ ಮುಖ್ಯಮಂತ್ರಿಗಳು ಆಸ್ಪತ್ರೆಗೆ ದಾಖಲಾದ ಕುರಿತು ಮಾಹಿತಿ ನೀಡಿದ್ದಾರೆ. ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲಾದ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಅವರು ಪಾಲ್ಗೊಳ್ಳಬೇಕಿದ್ದ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

76 ವರ್ಷ ವಯಸ್ಸಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮೊಣಕಾಲು ನೋವಿನ ಹಿನ್ನಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ತಜ್ಞ ವೈದ್ಯರ ತಂಡ ಅವರ ಆರೋಗ್ಯ ತಪಾಸಣೆಯನ್ನು ಮಾಡಿ, ಚಿಕಿತ್ಸೆಯನ್ನು ನೀಡಲಿದೆ.
ಮುಖ್ಯಮಂತ್ರಿಗಳು ಆಸ್ಪತ್ರೆಗೆ ದಾಖಲಾಗಿರುವ ಕುರಿತು ಆಸ್ಪತ್ರೆ ಯಾವುದೇ ಹೆಲ್ತ್ ಬುಲೆಟಿನ್ ಅನ್ನು ಇಲ್ಲಿಯ ತನಕ ಬಿಡುಗಡೆ ಮಾಡಿಲ್ಲ. ಭಾನುವಾರದ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿ ಸಿದ್ದರಾಮಯ್ಯ ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಚಿಕ್ಕಬಳ್ಳಾಪುರ ಭೇಟಿ ರದ್ದು: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮಕ್ಕೆ ಭೇಟಿ ನೀಡಬೇಕಿತ್ತು. ಆದರೆ ಮುಂಜಾನೆ ಉಪಹಾರ ಸೇವನೆ ಬಳಿಕ ಅವರ ಕಾಲು ನೋವು ಹೆಚ್ಚಾಗಿದ್ದು, ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗೌರಿಬಿದನೂರು ಮತ್ತು ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾನವಾರ ಪಾಲ್ಗೊಳ್ಳಬೇಕಿತ್ತು. 2024ರ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ. ಯೋಗೇಶ್ವರ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಚನ್ನಪಟ್ಟಣದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿತ್ತು.
ಚನ್ನಪಟ್ಟಣದ ಸಮಾವೇಶಕ್ಕೆ ಸಹ ಆಗಮಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ ಕಾಲು ನೋವಿನ ಹಿನ್ನಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದಾರೆ.
ಶುಕ್ರವಾರ ಸಿದ್ದರಾಮಯ್ಯ ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಶನಿವಾರ ಸಿದ್ದರಾಮಯ್ಯ ಮೈಸೂರು ಪ್ರವಾಸದಲ್ಲಿದ್ದರು, ಅಗ್ರಹಾರದ ಮೈಲಾರಿ ದೋಸೆ ಹೋಟೆಲ್‌ಗೆ ಆಗಮಿಸಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಜೊತೆ ದೋಸೆ ಸವಿದಿದ್ದರು.
ಬಳಿಕ ಸಿದ್ದರಾಮಯ್ಯ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಗುತ್ತಿಗೆ ನೌಕರರ ಸಂಘ, ಮೈಸೂರು ಇವರು ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಸಮುದಾಯ ಆರೋಗ್ಯ ಅಧಿಕಾರಿಗಳ ಸಂರಕ್ಷಣಾ ಸಮಾವೇಶವನ್ನು ಉದ್ಘಾಟಿಸಿದ್ದರು.
ಕೇಂದ್ರ ಬಜೆಟ್ 2025-26ರ ಕುರಿತು ಸಿದ್ದರಾಮಯ್ಯ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದರು. ಭಾನುವಾರ ಚಿಕ್ಕಬಳ್ಳಾಪುರ, ಚನ್ನಪಟ್ಟಣದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಬೆಂಗಳೂರು ನಗರಕ್ಕೆ ಆಗಮಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಲಿದ್ದಾರೆಯೇ? ಅಥವ ವೈದ್ಯರ ಸೂಚನೆಯಂತೆ ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆಯೇ? ಎಂಬ ಕುರಿತು ಇನ್ನೂ ಮಾಹಿತಿ ಸಿಕ್ಕಿಲ್ಲ. ಮುಖ್ಯಮಂತ್ರಿಗಳ ಕಛೇರಿ ಸಹ ಈ ಕುರಿತು ಯಾವುದೇ ಪ್ರಕಟಣೆ ಬಿಡುಗಡೆ ಮಾಡಿಲ್ಲ.












Click it and Unblock the Notifications