ಜಾತಿ + ಪ್ರಾದೇಶಿಕ + ಯಂಗ್ ಬ್ಲಡ್ = ಬೊಮ್ಮಾಯಿ ಕ್ಯಾಬಿನೆಟ್ ಎಂಟ್ರಿ!
ಬೆಂಗಳೂರು, ಮಾ. 29: ಕೇಂದ್ರ ಬಿಜೆಪಿ ವರಿಷ್ಠ ನಾಯಕ ಅಮಿತ್ ಶಾ ರಾಜ್ಯಕ್ಕೆ ಎಂಟ್ರಿ ಕೊಡುತ್ತಿರುವುದು ಬಿಜೆಪಿ ಸಚಿವರಲ್ಲಿ ತಳಮಳ ಸೃಷ್ಟಿಸಿದೆ. ಆದರೆ ಸಚಿವ ಸ್ಥಾನ ಆಕಾಂಕ್ಷಿ ಶಾಸಕರಲ್ಲಿ ಸಂತಸ ಮೂಡಿಸಿದೆ. ಮುಂದಿನ ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ಬೊಮ್ಮಾಯಿ ಸರ್ಕಾರದ ಕ್ಯಾಬಿನೆಟ್‌ಗೆ ಮೇಜರ್ ಸರ್ಜರಿಯಾಗಲಿದ್ದು, ಸಚಿವರು ಯಾರು ಆಗ್ತಾರೆ ಎನ್ನುವ ಹೊಸ ಲೆಕ್ಕಾಚಾರ ಶುರುವಾಗಿದೆ.
ಭ್ರಷ್ಟಾಚಾರ ಅರೋಪಗಳಿಂದ ರೋಸಿ ಹೋಗಿದ್ದ ಕೇಂದ್ರ ನಾಯಕರು ಕಳೆದ ಜುಲೈನಲ್ಲಿ ಬಿಜೆಪಿ ಪವರ್ ಪುಲ್ ನಾಯಕ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದರು. ಬಸವರಾಜ ಬೊಮ್ಮಾಯಿ ಅವರು ನೂತನ ಸಿಎಂ ಆಗಿ ನೇಮಕಗೊಂಡರು. ಸಿಎಂ ಬದಲಾವಣೆ ಹಿನ್ನೆಲೆಯಲ್ಲಿ ಸಚಿವರ ಸ್ಥಾನಗಳು ಬದಲಾವಣೆ ಆಯಿತಾದರೂ ಸಚಿವರು ಬದಲಾಗಲಿಲ್ಲ.
ಬೊಮ್ಮಾಯಿ ಸರ್ಕಾರದ ಆಡಳಿತ ಬಗ್ಗೆ ಇಟ್ಟಿದ್ದ ನಿರೀಕ್ಷೆ ಈಡೇರಿಲ್ಲ. ಇದೀಗ ಮುಂದಿನ ವರ್ಷ ಚುನಾವಣೆ ಎದುರಾಗಲಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಗುಡ್ ಗವರ್ನೆನ್ಸ್ ನೀಡಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ. ಮೂರು ಮಾನದಂಡ ಇಟ್ಟುಕೊಂಡು ಹೊಸ ಕ್ಯಾಬಿನೆಟ್ ರಚಿಸಲು ಕೇಂದ್ರ ವರಿಷ್ಠರು ತೀರ್ಮಾನಿಸಿದ್ದಾರೆ.

ಅಮಿತ್ ಶಾ ಎಂಟ್ರಿ:
ಬಿಜೆಪಿ ಕಾರ್ಯಕಾರಿಣಿ ಸಭೆ ಹೆಸರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಏ.1 ಕ್ಕೆ ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸಹಜವಾಗಿಯೇ ಇದು ಕೆಲವು ಶಾಸಕರಲ್ಲಿ ಸಂತಸ ಮೂಡಿಸಿದ್ದರೆ, ಕೆಲವು . ಸಚಿವರ ಎದೆಯಲ್ಲಿ ನಡುಕ ಶುರುವಾಗಿದೆ. ಕ್ಯಾಬಿನೆಟ್ ಪುನರ್ ರಚನೆಯಾದರೆ ಕೆಲವು ಹಿರಿಯ ತಲೆಗಳು ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ. ಹೊಸ ಪ್ರತಿಭೆಗಳಿಗೆ ಆದ್ಯತೆ ನೀಡಲು ಕೇಂದ್ರ ವರಿಷ್ಠರು ಚಿಂತನೆ ನಡಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಈಗಿರುವ ಸಚಿವರ ಕಾರ್ಯಶೈಲಿ ಕೇಂದ್ರ ವರಿಷ್ಠರಿಗೆ ಸಂತೃಪ್ತಿ ತಂದಿಲ್ಲ. ಪ್ರಾದೇಶಿಕತೆ, ಪ್ರತಿಭೆ, ಜಾತಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಯಡಿಯೂರಪ್ಪ ಎಡವಿದ್ದರು. ಬೊಮ್ಮಾಯಿ ಸರ್ಕಾರ ರಚನೆಯಾಗಿ ಕ್ಯಾಬಿನೆಟ್ ಪುನರ್ ರಚನೆಯಾದರೂ ಖಾತೆಗಳು ಬದಲಾಯಿತೇ ವಿನಃ ಸಚಿವರು ಬದಲಾಗಲಿಲ್ಲ. ಇದೀಗ ಪ್ರಾದೇಶಿಕವಾರು ಆದ್ಯತೆ, ಜಾತಿ ಮತ್ತು ಯುವ ಪ್ರತಿಭೆಗಳಿಗೆ ಸಚಿವ ಸ್ಥಾನ ನೀಡಿ ಸರ್ಕಾರಕ್ಕೆ ವೇಗ ನೀಡಲು ವರಿಷ್ಠರು ಚಿಂತನೆ ನಡೆಸಿದ್ದಾರೆ. ಕೇಂದ್ರ ವರಿಷ್ಠ ನಾಯಕ ಅಮಿತ್ ಶಾ ಅವರು ಕಾರ್ಯಕಾರಿಣಿ ಸಭೆ ಬಳಿಕ ಸಚಿವರ ಪಟ್ಟಿ ಫೈನಲ್ ಆಗಲಿದೆ ಎಂದೇ ಹೇಳಲಾಗುತ್ತಿದೆ.

ಇಷ್ಟು ದಿನ ಸಚಿವರಾಗಿ ಅಧಿಕಾರ ಅನುಭವಿಸಿದವರಿಗೆ ಮುಂದಿನ ಚುನಾವಣೆಗಾಗಿ ಪಕ್ಷ ಸಂಘಟನೆ ಹೊಣೆ ನೀಡಲಿದ್ದಾರೆ. ಹೊಸಬರಿಗೆ ಸಚಿವ ಸ್ಥಾನ ಕೊಟ್ಟು ಉತ್ತಮ ಅಡಳಿತ ನೀಡುವ ಮೂಲಕ ಜನ ಮನ್ನಣೆ ಮುಂದಿಟ್ಟುಕೊಂಡು ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲು ಬಿಜೆಪಿ ನಾಯಕರು ಪ್ಲಾನ್ ರೂಪಿಸಿದ್ದಾರೆ. ಅದರಂತೆ ಅತಿ ಶೀಘ್ರದಲ್ಲಿಯೇ ಕ್ಯಾಬಿನೆಟ್ ಪುನರ್ ರಚನೆಯಾಗಲಿದ್ದು, ಸಚಿವ ಸ್ಥಾನ ಯಾರು ಕಳೆದುಕೊಳ್ಳಲಿದ್ದಾರೆ. ಯಾರು ಸಚಿವರಾಗಿ ನೇಮಕವಾಗುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.












Click it and Unblock the Notifications