ಬಿಜೆಪಿ ಟಿಕೆಟ್ ಆಕಾಂಕ್ಷಿಗೆ ವಂಚನೆ; ಮತ್ತೊಬ್ಬ ಆರೋಪಿ ಬಂಧಿಸಿದ ಸಿಸಿಬಿ
ಬೆಂಗಳೂರು, ಸೆಪ್ಟೆಂಬರ್ 15; ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಲಾಗಿದೆ ಎಂಬ ಪ್ರಕರಣ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿದಂತೆ ಹಲವರನ್ನು ಬಂಧಿಸಲಾಗಿದ್ದು, ಎಲ್ಲರನ್ನು ಸೆಪ್ಟೆಂಬರ್ 23ರ ತನಕ ಸಿಸಿಬಿ ಪೊಲೀಸರ ಕಸ್ಟಡಿಗೆ ಕೋರ್ಟ್ ನೀಡಿದೆ.
ಚೈತ್ರಾ ಕುಂದಾಪುರ ಸೇರಿದಂತೆ ಇತರ ಆರೋಪಿಗಳ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ಎಫ್ಐಆರ್‌ನಲ್ಲಿ 5ನೇ ಆರೋಪಿಯಾಗಿರುವ ಬಿ. ಎಲ್. ಚನ್ನ ನಾಯ್ಕ ಬಂಧಿತ ಆರೋಪಿ.

ಬೆಂಗಳೂರು ನಗರದ ಹೊರವಲಯದಲ್ಲಿ ಗುರುವಾರ ಪೊಲೀಸರು ಬಿ. ಎಲ್. ಚನ್ನ ನಾಯ್ಕ ಬಂಧಿಸಿದ್ದಾರೆ. ಶುಕ್ರವಾರ ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಚುನಾವಣಾ ಸಮಿತಿ ಸದಸ್ಯ; 5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಮತ್ತು ಇತರರು ಕಟ್ಟಿದ್ದ ಕಥೆಯಲ್ಲಿ ಬಿ. ಎಲ್. ಚನ್ನ ನಾಯ್ಕ ದೆಹಲಿಯಲ್ಲಿ ಚುನಾವಣಾ ಸಮಿತಿ ಸದಸ್ಯ ಎಂದು ತಿಳಿಸಲಾಗಿತ್ತು. ಕುಮಾರಕೃಪ ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದ ಈತ ಹಿಂದಿಯಲ್ಲಿ ಮಾತನಾಡಿ ಹಣ ನೀಡಿದವರನ್ನು ವಂಚಿಸಿದ್ದ.
ಟಿಕೆಟ್ ನೀಡಲು ದೆಹಲಿಯ ಮಟ್ಟದಲ್ಲಿ ಶಿಫಾರಸು ಮಾಡುತ್ತೇನೆ ಎಂದು ಹೇಳಿದ್ದ. ವಿಶ್ವನಾಥ್ ಜೀ ಜೊತೆ ಬಿ. ಎಲ್. ಚನ್ನ ನಾಯ್ಕ ಒಡನಾಟ ಹೊಂದಿದ್ದಾನೆ ಎಂದು ವಂಚಕರು ನಂಬಿಸಿದ್ದರು. ವಂಚನೆಗೆ ಪಡೆದುಕೊಂಡ ಹಣದಲ್ಲಿ ಬಿ. ಎಲ್. ಚನ್ನ ನಾಯ್ಕ ಸಹ ಪಾಲು ಪಡೆದಿದ್ದ ಎಂಬ ಮಾಹಿತಿ ಸದ್ಯಕ್ಕೆ ಸಿಕ್ಕಿದೆ.
ಗುರುವಾರ ಸಿಬಿಬಿ ಪೊಲೀಸರು ಬಂಧಿಸಿರುವ ಬಿ. ಎಲ್. ಚನ್ನ ನಾಯ್ಕ ವಿಜಯನಗರ ಜಿಲ್ಲೆಯ ಮಾಚಿಹಳ್ಳಿ ತಾಂಡ ನಿವಾಸಿ. 7 ಭಾಷೆ ಮಾತನಾಡುವ ಈತನನ್ನು ಆರೋಪಿಗಳಾದ ಗಗನ್ ಮತ್ತು ಧನಂಜಯ್ ಪರಿಚಯ ಮಾಡಿಕೊಂಡಿದ್ದರು. ಚೈತ್ರಾ ಕುಂದಾಪುರ ಜೊತೆ ಹಿಂದಿಯಲ್ಲಿ ಮಾತನಾಡಿಸಿ ಬಿ. ಎಲ್. ಚನ್ನ ನಾಯ್ಕ ಹಿಂದಿ ಪರೀಕ್ಷೆ ಸಹ ನಡೆಸಲಾಗಿತ್ತು.
ಅವರು ಹೇಳಿದಂತೆ ಬಿ. ಎಲ್. ಚನ್ನ ನಾಯ್ಕ ನಟಿಸಿದ್ದ ಗೋವಿಂದ ಪೂಜಾರಿ ಜೊತೆ ಮಾತುಕತೆ ನಡೆಸಿದ್ದ ಇದಕ್ಕಾಗಿ 1 ಲಕ್ಷ ರೂ. ಹಣವನ್ನು ನೀಡಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿ. ಎಲ್. ಚನ್ನ ನಾಯ್ಕ ಹರಪನಹಳ್ಳಿ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು.
ಈ ಪ್ರಕರಣದಲ್ಲಿ ವಿಜಯನಗರ ಜಿಲ್ಲೆಯ ಹಿರೇಹಡಗಲಿಯ ಹಾಲಶ್ರೀ ಮಠದ ಅಭಿನವ ಹಾಲವೀರಪ್ಪ ಸ್ವಾಮೀಜಿ ಹೆಸರು ಕೇಳಿ ಬರುತ್ತಿದೆ. ಚೈತ್ರಾ ಕುಂದಾಪುರ ಗುರುವಾರ ಸಿಸಿಬಿ ಕಚೇರಿ ಮುಂದೆ ಮಾಧ್ಯಮಗಳಿಗೆ "ಸ್ವಾಮೀಜಿ ಬಂಧನವಾಗಲಿ ಎಲ್ಲಾ ಗೊತ್ತಾಗತ್ತೆ" ಎಂದು ಹೇಳಿಕೆ ನೀಡಿದ್ದಾರೆ. ಈಗ ಸಿಸಿಬಿ ಪೊಲೀಸರು ಸ್ವಾಮೀಜಿ ಬಂಧನಕ್ಕೆ ತಯಾರಿ ನಡೆಸುತ್ತಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಉದ್ಯಮಿ ಗೋವಿಂದ ಬಾಬು 3.50 ಕೋಟಿ ರೂ. ಹಣ ವಾಪಸ್ ನೀಡುವಂತೆ ಕೇಳಿದ್ದರು. ಆಗ ಚೈತ್ರಾ ಕುಂದಾಪುರ ನನಗೆ ನ್ಯಾಯಾಧೀಶರು ಪರಿಚಯವಿದ್ದಾರೆ. ನಿಮಗೆ ಭೂಗತ ಜಗತ್ತಿನ ಸಂಪರ್ಕವಿದೆ ಎಂದು ಶಾಶ್ವತವಾಗಿ ಜೈಲಿಗೆ ಕಳಿಸುತ್ತೇನೆ ಎಂದು ಸಹ ಬೆದರಿಕೆ ಹಾಕಿದ್ದಳು ಎಂದು ಆರೋಪಿಸಲಾಗಿದೆ.
ಚೈತ್ರಾ ಕುಂದಾಪುರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು ಪ್ರಕರಣದಲ್ಲಿ ಬೇರೆ ಯಾರು ಭಾಗಿಯಾಗಿದ್ದಾರೆ? ಎಂಬ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಪ್ರಸಾದ್ ಬೈಂದೂರು ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಮತ್ತೆ ವಿಚಾರಣೆ ಆಗಮಿಸಬೇಕು ಎಂದು ಸೂಚನೆ ನೀಡಿ ಕಳುಹಿಸಿದ್ದಾರೆ.
ವಂಚನೆ ಪ್ರಕರಣದ ದೂರುದಾರ ಗೋವಿಂದ ಪೂಜಾರಿ ಗುರುವಾರ ಸಿಸಿಬಿ ಕಛೇರಿಗೆ ಆಗಮಿಸಿದ್ದರು. ಪೊಲೀಸರು ಅವರ ವಿಚಾರಣೆ ನಡೆಸಿದ್ದು, ಮತ್ತಷ್ಟು ದಾಖಲೆಗಳನ್ನು ಸಂಗ್ರಹ ಮಾಡಿದ್ದಾರೆ. ಚೈತ್ರಾ ಕುಂದಾಪುರ ಸೇರಿದಂತೆ 5 ಆರೋಪಿಗಳು ಸಿಸಿಬಿ ಪೊಲೀಸರ ವಶದಲ್ಲಿಯೇ ಇದ್ದಾರೆ.












Click it and Unblock the Notifications