ಚನ್ನಪಟ್ಟಣ ಎನ್ ಡಿ ಎ ಅಭ್ಯರ್ಥಿ ಯಾರು? ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ
ಬೆಂಗಳೂರು, ಜುಲೈ 22: ಚನ್ನಪಟ್ಟಣ ಉಪ ಚುನಾವಣೆ ಅಭ್ಯರ್ಥಿ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ. ಯಾರೇ ಅಭ್ಯರ್ಥಿಯಾದರೂ ಅವರು ಎನ್ ಡಿ ಎ ಅಭ್ಯರ್ಥಿಯಾಗುತ್ತಾರೆ. ಎನ್ ಡಿ ಎ ಅಭ್ಯರ್ಥಿ ನಿಲ್ಲುವುದಷ್ಟೇ ಅಲ್ಲ, ಗೆಲ್ಲಲೇಬೇಕು. ಗೆಲ್ಲುವುದಕ್ಕೆ ಏನೆಲ್ಲಾ ನಿರ್ಧಾರ ಮಾಡಬೇಕೋ ಅದನ್ನೆಲ್ಲಾ ಮಾಡುತ್ತೇವೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಚನ್ನಪಟ್ಟಣ ಅಭ್ಯರ್ಥಿ ಯಾರು ಎಂದು ಇನ್ನೂ ಚರ್ಚೆ ಹಂತಕ್ಕೆ ಬಂದಿಲ್ಲ. ಕೇಂದ್ರದ ನಾಯಕರು, ರಾಜ್ಯದ ಬಿಜೆಪಿ ನಾಯಕರು ಎಲ್ಲಾ ಕುಳಿತು ಚರ್ಚೆ ಮಾಡುತ್ತೇವೆ. ಯೋಗೇಶ್ವರ್ ಅವರು ಗೆಲ್ಲಲು ಅವಕಾಶ ಇದ್ದರೆ ಅವರೇ ಚುನಾವಣೆಗೆ ನಿಲ್ಲುತ್ತಾರೆ. ಇಲ್ಲವೆಂದರೆ ಬೇರೆ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಸ್ಥಳೀಯ ಕಾರ್ಯಕರ್ತನಿಗೆ ಟಿಕೆಟ್ ಕೊಡಬೇಕಾ? ಎನ್ನುವ ಬಗ್ಗೆ ತೀರ್ಮಾನ ಮಾಡುತ್ತೇವೆ. ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಹಾಸನದಲ್ಲಿ ಒಬ್ಬ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದು ಹೇಳಿದ್ದೆ. ಗೆಲ್ಲಿಸಲಿಲ್ಲವೇ? ನಮ್ಮ ಪಕ್ಷಕ್ಕೆ ಆ ಶಕ್ತಿ ಇದೆ, ಚನ್ನಪಟ್ಟಣದಲ್ಲೂ ಅಷ್ಟೇ ಎಂದು ಕುಮಾರಸ್ವಾಮಿ ಹೇಳಿದರು.
ರಾಮನಗರ ಹೆಸರು ಬದಲಾವಣೆ ಮಾಡಲು ಆಗುತ್ತಾ? ಅವರ ಹೆಸರು ಬದಲಾವಣೆ ಮಾಡಲು ಆಗದಿದ್ದ ಮೇಲೆ ರಾಮನಗರ ಹೆಸರು ಬದಲಾವಣೆ ಮಾಡಲು ಆಗುತ್ತದೆಯೇ? ಅದರ ಬಗ್ಗೆ ಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. 1989ರಲ್ಲಿ ಇವರು ಸಾತನೂರಿನಲ್ಲಿ ಶಾಸಕರಾಗಿರಲಿಲ್ಲವೇ? ಹೇಗಿತ್ತು ಸಾತನೂರು? ಕನಕಪುರ ಹೇಗಿತ್ತು? ಯಾರಿಂದ ಅಭಿವೃದ್ಧಿ ಆಯಿತು ಎಂಬ ಮಾಹಿತಿ ಇಲ್ಲವೇ ಅವರಿಗೆ ಎಂದು ಡಿಸಿಎಂ ಡಿಕೆಶಿಗೆ ಕುಮಾರಸ್ವಾಮಿ ಟಾಂಗ್ ಕೊಟ್ಟರು.
ಸಿದ್ದರಾಮಯ್ಯ ಅವರೇ ಮುಡಾದಲ್ಲಿ ಯಾರದ್ದೋ ಜಮೀನು, 62 ಕೋಟಿ ಕೊಟ್ಟರೆ ಪುಕ್ಸಟ್ಟೆ ಬಿಟ್ಟುಕೊಡ್ತೀರಾ ನೀವು? 1992ರಲ್ಲಿ ಅಂತಿಮ ಅಧಿಸೂಚನೆ ಆಗಿದೆ. 1998ರಲ್ಲಿ ಅವರು ಬದುಕೇ ಇರಲಿಲ್ಲ. ಡಿನೋಟಿಫೀಕೇಷನ್ ಮಾಡಿ ಎಂದು ಅರ್ಜಿ ಕೊಟ್ಟವರು ಯಾರು? ನಿಂಗ ಎನ್ನುವ ವ್ಯಕ್ತಿ ತೀರಿಕೊಂಡಿದ್ದು ಯಾವಾಗ? ಸ್ವರ್ಗದಿಂದ ಬಂದು ಅರ್ಜಿ ಕೊಟ್ಟು ಡಿನೋಟಿಫಿಕೇಷನ್ ಮಾಡಿ ಎಂದು ಕೇಳಿದ್ರಾ ಅವರು? ಆ ಜಮೀನನ್ನು ನಿಮ್ಮ ಬಾಮೈದ ಖರೀದಿ ಮಾಡಿ ದಾನ ಕೊಟ್ಟ ಎನ್ನುವುದೆಲ್ಲಾ ಬರೀ ಡ್ರಾಮಾ. ಇದರಲ್ಲಿ ನಿಮ್ಮ ಕುಟುಂಬದ ನೇರ ಪಾತ್ರ ಇದೆ ಎಂದು ಕೇಂದ್ರ ಸಚಿವರು ಆರೋಪ ಮಾಡಿದರು.
ಮುಡಾದಲ್ಲಿ ನನ್ನದೂ ನಿವೇಶನ ಇದೆ ಎಂದು ಚರ್ಚೆ ಆಗುತ್ತಿದೆ. ನೂರಾರು ಬಾರಿ ಹೇಳಿದ್ದೇನೆ, ನನ್ನ ಜೀವನ ತೆರೆದ ಪುಸ್ತಕ ಎಂದು. ನನಗೆ 1985ರಲ್ಲಿ 21,000 ಚದರ ಅಡಿ ಜಾಗವನ್ನು ಇಂಡಸ್ಟ್ರಿಯಲ್ ಲೇಔಟ್ ನಲ್ಲಿ ಹಂಚಿಕೆ ಮಾಡಿದ್ದಾರೆ. ನಲವತ್ತು ವರ್ಷದ ಹಿಂದೆ ಅದು ಹಂಚಿಕೆ ಆಗಿದೆ. ದಾಖಲೆ ತೆಗೆಯಿರಿ. ನನಗೆ ಹಂಚಿಕೆ ಆಗಿದ್ದಕ್ಕೆ ಹಣವನ್ನೂ ಕಟ್ಟಿದ್ದೇನೆ. ನನಗೆ ಹಂಚಿಕೆ ಆಗಿರುವ ಜಾಗದಲ್ಲಿ ಯಾವನೋ ಒಬ್ಬ ಕಟ್ಟಡ ಕಟ್ಟಿಕೊಂಡಿದ್ದಾನೆ. ಆತ ಕಟ್ಟಡ ಕಟ್ಟಿರುವುದರಿಂದ ಮತ್ತೆ ಅರ್ಜಿ ಹಾಕುವುದು ಬೇಡ ಅಂದುಕೊಂಡಿದ್ದೆ. ಆದರೆ, ನನ್ನ ಸ್ನೇಹಿತರು ನನ್ನ ಗಮನಕ್ಕೆ ಬಾರದೆ ಸಹಿ ಹಾಕಿಸಿಕೊಂಡು ಹೋಗಿದ್ದಾರೆ. ಇಲ್ಲಿಯವರೆಗೆ ನನಗೆ ಯಾವ ಮಾಹಿತಿಯೂ ಬಂದಿಲ್ಲ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.
ಮುಖ್ಯಮಂತ್ರಿಗಳೇ ದಯಮಾಡಿ ಹೇಳ್ತಿನಿ, ದಾಖಲೆಗಳನ್ನು ತೆಗೆದು ನೋಡಿ. ಯಾವ್ಯಾವ ಮಂತ್ರಿಗಳು ಹೇಳಿಕೆ ಕೊಡುತ್ತಿದ್ದಾರೆ ಎಂದು ಜನರ ಮುಂದೆ ಇಟ್ಟುಬಿಡಿ. ವಿಷಯ ತಿಳಿದಕೊಂಡು, ದಾಖಲೆ ಹಿಡಿದುಕೊಂಡು ಮಾತಾಡಬೇಕು. ಮುಡಾದ್ದು ದಾಖಲೆ ಸಮೇತ ಮಾತನಾಡುತ್ತಿದ್ದೇವೆ ನಾವು. ನಿಮಗೆ ನಾಚಿಕೆ ಆಗಲ್ವಾ ಸಿದ್ದರಾಮಯ್ಯನವರೇ..? ನಿಮ್ಮ ಮುಖ ನೋಡಿದರೆ ಗೊತ್ತಾಗುತ್ತದೆ, ನಿಮ್ಮ ಮುಖದಲ್ಲಿ ಪಾಪಪ್ರಜ್ಞೆ ಎನ್ನುವುದು ಎದ್ದು ಕಾಣುತ್ತಿದೆ. ನಿಮಗೆ ಪಾಪಪ್ರಜ್ಞೆ ಕಾಡುತ್ತಿದೆ. ಮಾಧ್ಯಮಗಳ ಮುಂದೆ ಕುಳಿತಾಗ ಗೊತ್ತಾಗುತ್ತಿದೆ, ನಿಮ್ಮನ್ನು ಪಾಪಪ್ರಜ್ಞೆ ಕಾಡುತ್ತಿದೆ ಎಂದು. ವಿಧಾನಸಭೆಯಲ್ಲಿ ನೀವು ಕೊಟ್ಟ ಉತ್ತರ ಇದೆಯಲ್ಲಾ, ಅದನ್ನು ನೋಡಿದರೆ ಗೊತ್ತಾಗುತ್ತದೆ ನಿಮ್ಮ ಸ್ಥಿತಿ. ಹಿಂದೆ ನೀವು ಯಾವ ರೀತಿ ಉತ್ತರ ಕೊಡುತ್ತಿದ್ದಿರಿ, ಶುಕ್ರವಾರ ಯಾವ ರೀತಿ ಉತ್ತರ ಕೊಟ್ಟಿರಿ? ಎಲ್ಲವನ್ನು ಗಮನಿಸಿಸದ್ದೇನೆ. ಈ ಸರಕಾರದ ಪಾಪದ ಕೊಡ ತುಂಬಿ ಹೋಗಿದೆ ಎಂದು ಚುಚ್ಚಿದರು ಕುಮಾರಸ್ವಾಮಿ ಅವರು.
ಇವರ ಬ್ರ್ಯಾಂಡ್ ಬೆಂಗಳೂರು ರೀತಿ ರಾಮನಗರವನ್ನೂ ಅಭಿವೃದ್ಧಿ ಮಾಡಬೇಕಾ? ರಾಮನಗರ ಜಿಲ್ಲೆ ಅಭಿವೃದ್ಧಿಯಾಗಿ ಹತ್ತು ವರ್ಷಗಳಾಯಿತು. ಇವರು ಬಂದು ಏನು ಅಭಿವೃದ್ಧಿ ಮಾಡುತ್ತಾರೆ? ಈಗ ಬೆಂಗಳೂರಿನ ಜಾಗವನ್ನು ಯಾವನಿಗೋ 45 ಸಾವಿರ ಕೋಟಿಗೆ ಮೂವತ್ತು ವರ್ಷ ಲೀಸ್ʼಗೆ ಕೊಡಲು ಹೊರಟಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಮಾಡೋದು ಕಸ ತುಂಬಿಸಲಿಕ್ಕಾ? ರಾಮನಗರ ತೆಗೆದು ಬೆಂಗಳೂರು ದಕ್ಷಿಣ ಹೆಸರಿಡುವುದು ಬೆಂಗಳೂರಿನ ಕಸ ತಂದು ತುಂಬಿಸಲಿಕ್ಕಾ? ಕಪ್ಪುಪಟ್ಟಿಯಲ್ಲಿ ಇದ್ದವರನ್ನು ಕರೆದುಕೊಂಡು ಬಂದು ಲೀಸ್ ಕೊಡಲು ಹೊರಟಿದ್ದೀರಾ? ಸುಮ್ಮನೆ ಬಾಯಿ ಚಪಲಕ್ಕೆ ಹೇಳುತ್ತಿಲ್ಲ ನಾನು, ಸರಕಾರದಲ್ಲಿ ಏನೇನು ನಡೆದಿದೆ ಎಲ್ಲಾ ಮಾಹಿತಿ ಸಂಗ್ರಹ ಮಾಡಿದ್ದೇನೆ ಎಂದು ಹೇಳಿದರು.












Click it and Unblock the Notifications