ಡಿ.ಕೆ.ಶಿವಕುಮಾರ್ ಸಿಎಂ ಆಗುವ ಬಗ್ಗೆ ಯೋಗೇಶ್ವರ್ ಸುಳಿವು!
ಸಿದ್ದರಾಮಯ್ಯ ನಂತರ ರಾಜ್ಯದ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳ ಪಟ್ಟಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಇದ್ದಾರೆ ಎಂಬುದು ಜಗಜ್ಜಾಹೀರಾಗಿರುವ ವಿಚಾರ. ಇನ್ನು ಇತ್ತೀಚೆಗೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಕೂಡ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುವ ಬಗ್ಗೆ ಬ್ಯಾಟ್ ಬೀಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುವುದರಲ್ಲಿ ತಪ್ಪೇನಿದೆ ಎಂದು ಸಿಪಿ ಯೋಗೇಶ್ವರ್ ಸಂದರ್ಶನದಲ್ಲಿ ಹೇಳಿರುವುದಾಗಿ ಕನ್ನಡಪ್ರಭ ವೆಬ್‌ಸೈಟ್ ವರದಿ ಮಾಡಿದೆ.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದರಲ್ಲಿ ತಪ್ಪೇನು? ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮದೇ ಆದ ಸಾಮರ್ಥ್ಯ ಇದೆ. ಆದರೆ ಅವರಲ್ಲಿ ಯಾವುದೇ ದೌರ್ಬಲ್ಯ ಇಲ್ಲ ಎಂದರ್ಥವಲ್ಲ. ಅವರಿಗೆ ಅವಕಾಶಗಳು ಬಾಗಿಲು ತಟ್ಟಿದರೆ, ನಾನು ಕೂಡ ಕಂಡಿತವಾಗಿಯೂ ಅವರಿಗೆ ಬೆಂಬಲ ನೀಡುತ್ತೇನೆ ಎಂದು ಯೋಗೇಶ್ವರ್ ಹೇಳಿದ್ದಾರೆ ಎಂದು ವರದಿಯಾಗಿದೆ.

ಮೊದಲಿಗೆ ಬದ್ಧವೈರಿಗಳು ಎಂದೇ ಕರೆಯಲ್ಪಡುತ್ತಿದ್ದ ಸಿ.ಪಿ.ಯೋಗೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಅವರು ಈ ಉಪಚುನಾವಣೆ ಸಂದರ್ಭದಲ್ಲಿ ದೋಸ್ತಿಗಳಾಗಿ ಕಾಣಿಸಿಕೊಂಡರು. ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಯೋಗೇಶ್ವರ್ ಹೊರಬಂದಿದ್ದಲ್ಲದೆ, ಕಾಂಗ್ರೆಸ್‌ಗೆ ಸೇರಿಕೊಂಡು ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್ ಪಡೆಯುವಲ್ಲಿಯೂ ಯಶಸ್ವಿಯಾದರು.
ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರು ಯೋಗೇಶ್ವರ್ ಅವರ ಬೆನ್ನಿಗೆ ನಿಂತು ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಥ್ ನೀಡಿದ್ದಾರೆ. ಈ ಹಿನ್ನೆಲೆ ಸಿ.ಪಿ.ಯೋಗೇಶ್ವರ್ ಅವರೂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎನ್ನುವ ವಿಚಾರವಾಗಿ ಬ್ಯಾಟ್ ಬೀಸಿದ್ದಾರೆ.

ನನಗೆ ಮತ್ತು ಕಾಂಗ್ರೆಸ್‌ಗೆ ಈ ಗೆಲುವಿನ ಪರಿಸ್ಥಿತಿ ಸೃಷ್ಟಿಯಾಯಿತು. ಒಂದು ವೇಳೆ ನಾನು ಕಣಕ್ಕಿಳಿಯದಿದ್ದರೆ ಕಾಂಗ್ರೆಸ್ ಸೋಲುತ್ತಿತ್ತು. ಇದು ನಮ್ಮ ನಡುವೆ ಆಗಿರುವ ಒಪ್ಪಂದವಾಗಿದ್ದು, ಕಾಂಗ್ರೆಸ್ ಸೋತಿದ್ದರೆ, ಡಿ.ಕೆ.ಶಿವಕುಮಾರ್ ಅವರ ಘನತೆಗೆ ಧಕ್ಕೆಯಾಗುತ್ತಿತ್ತು ಎಂದೂ ಸಿಪಿವೈ ಹೇಳಿದ್ದಾರೆ.
ನನ್ನ ಪ್ರಕಾರ ನಿಖಿಲ್ ಕುಮಾರಸ್ವಾಮಿ ಅವರು ರಾಜಕೀಯಕ್ಕೆ ಇನ್ನೂ ಹೊಸಬರು, ಅವರು ನನಗೆ ಸರಿಸಾಟಿಯೂ ಅಲ್ಲ. ನಾನು ಈ ಹಿಂದೆ ನಿಖಿಲ್ ಅವರ ತಾಯಿ ಅನಿತಾ ಕುಮಾರಸ್ವಾಮಿ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದೆ. ನಿಖಿಲ್ ಅವರ ತಂದೆ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಡಿಮೆ ಅಂತರದಲ್ಲಷ್ಟೇ ಸೋತಿದ್ದೆ. ನಿಖಿಲ್ ಚನ್ನಪಟ್ಟಣದಲ್ಲಿ ಸ್ಪರ್ಧಿಸುವ ಬದಲು ಈ ಹಿಂದೆ ಸೋತಿದ್ದ ಮಂಡ್ಯ ಅಥವಾ ರಾಮನಗರ ಕ್ಷೇತ್ರಗಳಲ್ಲೇ ಗಮನ ಹರಿಸಬೇಕಿತ್ತು ಎಂದು ಯೋಗೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಹೆಚ್ಚು ವಯಸ್ಸಾಗಿದೆ. 90 ವರ್ಷಗಳನ್ನು ಪೂರೈಸಿದ ನಂತರ ಅವರು ರಾಜಕೀಯದಿಂದ ನಿವೃತ್ತಿ ಪಡೆಯಬೇಕಿತ್ತು. ಆದರೆ ಅವರು ಪ್ರಧಾನಿಯೇ ಆದ ನಂತರವೂ ಅಧಿಕಾರದ ಆಸೆ ಉಳಿಸಿಕೊಂಡಿದ್ದು, ತಮ್ಮ ಮೊಮ್ಮಗ ನಿಖಿಲ್ ಗೆಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ನಾನು ಈ ಹಿಂದೆ ಅಧಿಕಾರದಲ್ಲಿದ್ದಾಗ ನೀರಾವರಿ ಯೋಜನೆಗಳನ್ನು ಅಭಿವೃದ್ಧಿಪಡಿಸಿದ್ದೆ. ಇದರ ಸಹಾಯ ಪಡೆದು ಕೃಷಿ ಮಾಡುತ್ತಿರುವ ಶೇ 50ರಷ್ಟು ಒಕ್ಕಲಿಗರು ನನಗೆ ಮತ ಹಾಕಿದ್ದಾರೆ ಎನ್ನುವ ವಿಶ್ವಾಸವಿದೆ. ಕುಮಾರಸ್ವಾಮಿ ಅವರು ಚನ್ನಪಟ್ಟಣವನ್ನು ಹಾಳು ಮಾಡಿದ್ದು, ಅಲ್ಲಿನ ಆಡಳಿತವೆಲ್ಲ ಕುಸಿದಿದೆ. ಕ್ಷೇತ್ರದಲ್ಲಿರುವ ಭ್ರಷ್ಟಾಚಾರವನ್ನು ಕಿತ್ತೆಸೆಯಬೇಕಾಗಿದೆ ಎಂದೂ ಯೋಗೇಶ್ವರ್ ಹೇಳಿದ್ದಾರೆ.












Click it and Unblock the Notifications