'ಕಾಂಗ್ರೆಸ್ ಟಾರ್ಗೆಟ್ ದೇವೇಗೌಡರು ಮತ್ತು ಕುಮಾರಸ್ವಾಮಿ..ಈಗ ನಿಖಿಲ್'
ರಾಮನಗರ, ನವೆಂಬರ್ 09: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಇಡೀ ಕಾಂಗ್ರೆಸ್ ಸಂಪುಟ ನನ್ನ ವಿರುದ್ಧ ಚನ್ನಪಟ್ಟಣದಲ್ಲಿ ಚುನಾವಣೆ ಮಾಡುತ್ತಿದೆ. ಯೋಗೇಶ್ವರ್ ಅವರಿಗೆ ಯಾಕೆ ಟಿಕೆಟ್ ಕೊಟ್ಟರು ಅಂತ ಎಲ್ಲರಿಗೂ ಗೊತ್ತಿದೆ. ಯೋಗೇಶ್ವರ್ ಅವರು 6 ವರ್ಷಕ್ಕೊಮ್ಮೆ ಪಕ್ಷಾಂತರ ಮಾಡುತ್ತಾರೆ. ಬಿಜೆಪಿಯಲ್ಲಿ ಅವರಿಗೆ ಎಲ್ಲಾ ಗೌರವ ನೀಡಿ ಶಕ್ತಿ ತುಂಬಿಸಿದ್ದರು. ಈಗ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ ಯೋಗೇಶ್ವರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕನ್ನಿದೊಡ್ಡಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭಿವೃದ್ದಿ ಕ್ಷೇತ್ರಕ್ಕೆ ಏನು ಇಲ್ಲ. ಸಂಸದರಾಗಿ ಅವರ ಸಹೋದರ ಇದ್ದರು. ಚನ್ನಪಟ್ಟಣ ಸಹಾ ಅವರ ವ್ಯಾಪ್ತಿಗೆ ಬರುತಿತ್ತು. ಕ್ಷೇತ್ರದಲ್ಲಿ ಅವರು ಯಾವುದೇ ಅಭಿವೃದ್ಧಿ ಮಾಡಿಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡಲು ಏನು ಇಲ್ಲ. ಹೀಗಾಗಿ ಅವರ ಟಾರ್ಗೆಟ್ ದೇವೇಗೌಡರು ಮತ್ತು ಕುಮಾರಸ್ವಾಮಿ ಈಗ ನಿಖಿಲ್ ಕುಮಾರಸ್ವಾಮಿ ಎಂದು ಹೇಳಿದರು.

ಇಗ್ಗಲೂರು ಡ್ಯಾಮ್ ಗೂ ದೇವೇಗೌಡರಿಗೂ ಏನು ಸಂಬಂಧ ಇಲ್ಲ ಎನ್ನುತ್ತಾರೆ. ಇಗ್ಗಲೂರು ಬ್ಯಾರೇಜ್ ಸ್ಥಳ ಪರಿಶೀಲನೆ ಫೋಟೋ ಬಿಡುಗಡೆಯಾಗಿದೆ. ಇಗ್ಗಲೂರು ಬ್ಯಾರೇಜ್‌ಗೂ ದೇವೇಗೌಡರಿಗೂ ಸಂಬಂಧ ಇಲ್ಲ ಅಂತಾ ಕಾಂಗ್ರೆಸ್ ನಾಯಕರು ಹೇಳಿದ್ದರು. ಇತಿಹಾಸವನ್ನು ಯಾರು ಮರೆ ಮಾಚುವುದಕ್ಕೆ ಆಗುವುದಿಲ್ಲ ಎಂದು ನಿಖಿಲ್ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ವಿರೋಧಿಗಳಿಂದ ವೈಯಕ್ತಿಕ ಟೀಕೆ ವಿಚಾರಕ್ಕೆ ಮಾತನಾಡಿದ ಅವರು, ಅವರಿಗೆ ಮಾತನಾಡಲು ಬೇರೆ ವಿಚಾರ ಇಲ್ಲ. ಇವತ್ತು ಚನ್ನಪಟ್ಟಣದ ಅಭಿವೃದ್ಧಿ ಆಗಿಲ್ಲ ಎನ್ನುವುದರ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ಇದೆಲ್ಲಾ ಯಾಕೆ ಮಾಡಲಿಲ್ಲ.? ತೆರವಾದ ಮೇಲೆ ಚನ್ನಪಟ್ಟಣ ನೆನಪಾಯ್ತಾ ? ಎಂದು ವಾಗ್ದಾಳಿ ನಡೆಸಿದರು.
ನಾನು ಯೋಗೇಶ್ವರ್ ಸತ್ತರೆ ಇಲ್ಲೇ ಮಣ್ಣಾಗುತ್ತೇವೆ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಾರು ಸಾಯುವುದು ಬೇಡ ಎಲ್ಲ ನೂರಾರು ವರ್ಷ ಚೆನ್ನಾಗಿರಲಿ. ಇಲ್ಲಿ ಹುಟ್ಟು ಸಾವಿನ ಮಾತಿನ ಅವಶ್ಯಕತೆ ಇಲ್ಲ. ನಾನು ಇಂತಹ ಮಾತುಗಳಿಂದ ಟ್ರಿಗರ್ ಆಗುವುದಿಲ್ಲ. ಹಿಂದೆನೂ ಆಗಿಲ್ಲ ಈಗಲೂ ಆಗುವುದಿಲ್ಲ ಎಂದು ನಿಖಿಲ್ ತಿಳಿಸಿದರು.

ಇನ್ನು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ದಿನೇ ದಿನೇ ಆತ್ಮವಿಶ್ವಾಸ ಹೆಚ್ಚುತ್ತಿದೆ. ಕುಮಾರಣ್ಣ ಸ್ವ-ಕ್ಷೇತ್ರ ಎನ್ನುವ ಕಾರಣಕ್ಕೆ ರಾಜ್ಯ ದೇಶದ ಗಮನ ಸೆಳೆದಿದೆ. ಜನ ನನಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ನನ್ನ ಮನದಾಳದ ಮಾತು ಜನರಿಗೆ ತಲುಪುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಈ ಬಾರಿಯ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications