Nikhil Kumaraswamy: ನಿಖಿಲ್ ಕುಮಾರಸ್ವಾಮಿ ಗೆದ್ದರೆ ಜೆಡಿಎಸ್‌ನಲ್ಲಿ ಮಹತ್ವದ ಬದಲಾವಣೆ!
Channapatna assembly by-election: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಗೆದ್ದರೆ, ಜೆಡಿಎಸ್‌ನಲ್ಲಿ ಮಹತ್ವ ಬದಲಾವಣೆಯಾಗಲಿದೆ. ಈ ಕಾರಣಕ್ಕೆ ಈ ಚುನಾವಣೆ ನಿಖಿಲ್ ಕುಮಾರಸ್ವಾಮಿಗೆ ಮಾತ್ರವಲ್ಲ, ಜೆಡಿಎಸ್ ಪಕ್ಷಕ್ಕೂ ನಿರ್ಣಾಯಕವಾಗಿದೆ. ಕರ್ನಾಟಕದಲ್ಲಿ ಜೆಡಿಎಸ್ ವಿಧಾನಸಭೆ ಚುನಾವಣೆಯಲ್ಲಿ (2023) ಕಡಿಮೆ ಸ್ಥಾನಗಳನ್ನು ಗಳಿಸಿದ ಮೇಲೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಅದಾದ ಮೇಲೆ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಜಂಟಿ ಪ್ರದರ್ಶನ ನೀಡಿವೆ. ಈಗ ನಡೆದಿರುವ ಉಪ ಚುನಾವಣೆ ಎರಡೂ ಪಕ್ಷಗಳ ಸಾಮರ್ಥ್ಯ ಪ್ರದರ್ಶನ ಹಾಗೂ ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ.
ಮಂಡ್ಯ ಹಾಗೂ ರಾಮನಗರ ಚುನಾವಣೆಗಳಲ್ಲಿ ಸೋತ ನಂತರ ನಿಖಿಲ್ ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಬಾರಿ ಅವರು ಗೆದ್ದರೆ ಜೆಡಿಎಸ್‌ನಲ್ಲಿ ಮಹತ್ವದ ಬದಲಾವಣೆಯೇ ಆಗಲಿದೆ. ಜೆಡಿಎಸ್‌ನಲ್ಲಿ ಮತ್ತೊಬ್ಬ ಯುವ ನಾಯಕ ಉದಯಿಸಲಿದ್ದು, ವಿಧಾನಸಭೆಗೆ ಪ್ರವೇಶಿಸಲಿದ್ದಾರೆ. ಕರ್ನಾಟಕದಿಂದ ರಾಷ್ಟ್ರ ರಾಜಕೀಯಕ್ಕೆ ಎಚ್.ಡಿ ಕುಮಾರಸ್ವಾಮಿ ಅವರು ಹೋದ ಮೇಲೆ ರಾಜ್ಯ ವಿಧಾನಸಭೆಯಲ್ಲಿ ಜೆಡಿಎಸ್‌ನಿಂದ ಅಬ್ಬರಿಸುವವರ ಸಂಖ್ಯೆ ಇಳಿಕೆಯಾಗಿದೆ.

ಅಲ್ಲದೇ ಜೆಡಿಎಸ್ - ಬಿಜೆಪಿ ಮೈತ್ರಿಯಿಂದಲೇ ಜೆಡಿಎಸ್ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ಮಾಡಲು ಸಾಧ್ಯವಾಯಿತು ಎನ್ನುವ ಮಾತುಗಳು ಸುಳ್ಳಾಗಲಿವೆ. ಬಿಜೆಪಿಯ ಮೈತ್ರಿಯ ಹೊರತಾಗಿಯೂ ಜೆಡಿಎಸ್‌ಗೆ ಅಸ್ತಿತ್ವದ ಪ್ರಶ್ನೆ ತೀವ್ರವಾಗಿ ಕಾಡುತ್ತಿದೆ. ಯಾಕೆಂದರೆ, ಹಾಸನದಲ್ಲಿ ನಡೆದ ಪೆನ್‌ಡ್ರೈವ್ ಪ್ರಕರಣ ಹಾಗೂ ಆ ನಂತರದ ಬೆಳವಣಿಗೆಯಿಂದ ಜೆಡಿಎಸ್‌ಗೆ ತೀವ್ರ ಮುಜುಗರ ಉಂಟಾಗಿದೆ. ಹೀಗಾಗಿ, ಜೆಡಿಎಸ್‌ಗೆ ತನ್ನ ಸಾಮರ್ಥ್ಯದ ಮೇಲೆ ಒಂದು ಗೆಲುವು ಈ ಸಂದರ್ಭದಲ್ಲಿ ಅನಿವಾರ್ಯ ಹಾಗೂ ಅತ್ಯಂತ ಅವಶ್ಯವಾಗಿದೆ.
ಜನ ಒಪ್ಪಿಕೊಂಡಿದ್ದಾರೆಯೇ ಎನ್ನುವ ಪ್ರಶ್ನೆ: ಇನ್ನು ಎಲ್ಲಕ್ಕಿಂತ ಮುಖ್ಯವಾಗಿ ಜೆಡಿಎಸ್ ಹಾಗೂ ಕುಟುಂಬ ರಾಜಕೀಯ ಒಂದಕ್ಕೊಂದು ಮೊದಲಿನಿಂದಲೂ ತಳಕು ಹಾಕಿಕೊಳ್ಳುತ್ತಲ್ಲೇ ಇದೆ. ನಿಖಿಲ್ ಕುಮಾರಸ್ವಾಮಿ ಅವರನ್ನು ಎರಡೆರಡು ಬಾರಿ ಸೋತರೂ, ಅವರನ್ನೇ ಮರು ಆಯ್ಕೆ ಮಾಡಿ ಚುನಾವಣೆಗೆ ನಿಲ್ಲಿಸಿರುವ ಬಗ್ಗೆ ಪ್ರಶ್ನೆಗಳು ಇವೆ. ಇದೀಗ ನಿಖಿಲ್ ಕುಮಾರಸ್ವಾಮಿ ಗೆದ್ದರೆ ಅದು ಜನರೇ ಒಪ್ಪಿಕೊಂಡಿದ್ದಾರೆ ಹಾಗೂ ಜೆಡಿಎಸ್ ಮೇಲೆ ವಿಶ್ವಾಸ ಇರಿಸಿದ್ದಾರೆ ಎನ್ನುವ ಸಂದೇಶ ಹೋಗಲಿದೆ.
ಮುಸ್ಲಿಂ ಸಮುದಾಯ ಬೆಂಬಲದ ಪ್ರಶ್ನೆ: ಇನ್ನು ಈ ಉಪ ಚುನಾವಣೆ ಜೆಡಿಎಸ್‌ಗೆ ಯಾಕೆ ತುಂಬಾ ಇಂಪಾರ್ಟೆಂಟ್ ಆಗಿತ್ತು. ಈಗ ಗೆದ್ದರೆ ಯಾವ ಬದಲಾವಣೆ ಆಗಲಿದೆ ಎನ್ನುವುದರ ಹಿಂದೆ ಮುಸ್ಲಿಂ ಸಮುದಾಯದ ಮತಗಳ ಲೆಕ್ಕಾಚಾರವೂ ಇದೆ. ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಮೇಲೆ ಮುಸ್ಲಿಂ ಸಮುದಾಯ ಜೆಡಿಎಸ್‌ನಿಂದ ಅಂತರ ಕಾಪಾಡಿಕೊಂಡಿದೆ. ಜೆಡಿಎಸ್‌ನಲ್ಲಿದ್ದ ಪ್ರಮುಖ ಮುಸ್ಲಿಂ ನಾಯಕರು ಬಹಿರಂಗವಾಗಿಯೇ ಹೇಳಿಕೆಗಳನ್ನು ಕೊಟ್ಟು ಜೆಡಿಎಸ್ ತೊರಿದಿದ್ದಾರೆ.
ಈ ಬೆಳವಣಿಗೆಯ ನಂತರ ಮುಸ್ಲಿಂ ಸಮುದಾಯದ ಮತದಾರರು ಜೆಡಿಎಸ್‌ನಿಂದ ಅಂತರ ಕಾಪಾಡಿಕೊಂಡಿದ್ದಾರೆ. ಮುಸ್ಲಿಂ ಸಮುದಾಯದ ಮತದಾರರು ಮನಸ್ಸು ಬದಲಾಯಿಸಿ ಜೆಡಿಎಸ್ ಪಕ್ಷವನ್ನು ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಬೆಂಬಲಿಸುತ್ತಿದ್ದಾರೆಯೇ ಎನ್ನುವುದು ಈ ಚುನಾವಣೆಯ ಫಲಿತಾಂಶದಿಂದ ತಿಳಿಯಲಿದೆ. ಲೋಕಸಭೆ ಚುನಾವಣೆಯಲ್ಲಿ ಈ ವಿಷಯ ಸ್ಪಷ್ಟವಾಗಿರಲಿಲ್ಲ. ಅಲ್ಲದೇ ಆಗ ಜಾತಿ ಲೆಕ್ಕಾಚಾರ ಹಾಗೂ ಮೈತ್ರಿ ಪಕ್ಷಗಳ ಘಟಾನುಘಟಿ ನಾಯಕರ ಪ್ರಚಾರ ವರ್ಕ್‌ಔಟ್ ಆಗಿತ್ತು.
ಚನ್ನಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಮತದಾರರು ನಿರ್ಣಾಯಕ ಹಂತದಲ್ಲಿ ಇದ್ದಾರೆ. ಹೀಗಾಗಿ, ನಿಖಿಲ್ ಕುಮಾರಸ್ವಾಮಿ ಗೆಲುವು ಕೇವಲ ಅವರ ಗೆಲುವು ಮಾತ್ರವಲ್ಲ. ಜೆಡಿಎಸ್ ಪುಟಿದೇಳಲು ಇರುವ ಅವಕಾಶವೂ ಹೌದು!












Click it and Unblock the Notifications