ಮನೆ ಮುಂದೆ ಶವ ಸಂಸ್ಕಾರ, ಗ್ರಾಮಸ್ಥರ ಆತಂಕ ದೂರ
ಚಾಮರಾಜನಗರ, ನವೆಂಬರ್ 19 : ಪತಿಯ ಮನೆಯಲ್ಲಿ ಮೃತಪಟ್ಟಿದ್ದ ಗೃಹಿಣಿಯ ಶವವನ್ನು ಮನೆಯ ಮುಂದೆಯೇ ಹೂತು ಹೋಗಿದ್ದ ಘಟನೆ ಹನೂರು ಪಟ್ಟಣದ ಆರ್.ಎಸ್.ದೊಡ್ಡಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು. ಬುಧವಾರ ತಹಸೀಲ್ದಾರ್ ಸಮ್ಮುಖದಲ್ಲಿ ಶವ ಹೊರ ತೆಗೆದು ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ.
ಆರ್.ಎಸ್.ದೊಡ್ಡಿ ಗ್ರಾಮದ ಮಹದೇವಸ್ವಾಮಿ ಎಂಬುವವರ ಪುತ್ರ ಮಹೇಶ್‍ಗೆ ಬಂಡಳ್ಳಿ ಗ್ರಾಮದ ಮಹದೇವಪ್ಪರವರ ಪುತ್ರಿ ಪಲ್ಲವಿ (21) ಅವರನ್ನು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಸೋಮವಾರ ರಾತ್ರಿ ಪಲ್ಲವಿ ಅವರು ಮೃತಪಟ್ಟಿದ್ದು ಪತಿಯ ಮನೆಯ ಮುಂದೆಯೇ ಶವವನ್ನು ಹೂಳಲಾಗಿತ್ತು, ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿತ್ತು. [ಚಾಮರಾಜನಗರ : ಗ್ರಾ.ಪ. ಮಾಜಿ ಅಧ್ಯಕ್ಷ ನಿಗೂಢ ಸಾವು]

ಗಲಾಟೆ ನಡೆಯುತ್ತಿತ್ತು : ಮಕ್ಕಳಿಲ್ಲ ಎಂಬ ಕಾರಣಕ್ಕೆ ಪಲ್ಲವಿ ಮತ್ತು ಮಹೇಶ್ ನಡುವೆ ಸಣ್ಣ-ಪುಟ್ಟ ಜಗಳಗಳು ನಡೆಯುತ್ತಿತ್ತು. ಮಹೇಶ್, ಮಾವ ಮಹದೇವಸ್ವಾಮಿ, ಅತ್ತೆ ರತ್ನಮ್ಮ ಹಾಗೂ ಮೈದುನ ಬಸವಣ್ಣ ಪಲ್ಲವಿ ಅವರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರಂತೆ. ಈ ಬಗ್ಗೆ ಪಲ್ಲವಿ ಅವರು ಪೋಷಕರ ಬಳಿ ಹೇಳಿಕೊಂಡಿದ್ದರು. [ಚಾಮರಾಜನಗರ: ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತ ಹುಲಿರಾಯ]
ಸೋಮವಾರ ರಾತ್ರಿ ಪಲ್ಲವಿ ಅವರ ಮೃತದೇಹ ನೇಣಿ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಹೇಶ್, ಮಹದೇವಸ್ವಾಮಿ, ರತ್ನಮ್ಮ ಹಾಗೂ ಬಸವಣ್ಣ ಅವರು ಪಲ್ಲವಿ ಜೊತೆ ಜಗಳವಾಡಿ, ಆಕೆಗೆ ಥಳಿಸಿ ಕೊಲೆ ಮಾಡಿ ನಂತರ ಶವವನ್ನು ಎತ್ತಿ ನೇಣು ಹಾಕಿದ್ದರೆ ಎಂದು ಪಲ್ಲವಿ ತಂದೆ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. [ಗುಂಡ್ಲುಪೇಟೆಯಲ್ಲಿ ರಾಜ್ಯದ ಮೊದಲ ಜಿಪಿ-ಒನ್ ಸೇವೆ ಆರಂಭ]
ಪಲ್ಲವಿ ಸಾವಿನ ಬಳಿಕ ಪತಿ ಮಹೇಶ್ ಮತ್ತು ಮನೆಯವರು ನಾಪತ್ತೆಯಾಗಿದ್ದರು. ಇದರಿಂದ ಆಕ್ರೋಶಗೊಂಡ ಪಲ್ಲವಿಯ ಪೋಷಕರು ಮತ್ತು ಸಂಬಂಧಿಕರು ಅವರ ಮನೆಯ ಮುಂದೆಯೇ ಪಲ್ಲವಿ ಶವದ ಅಂತ್ಯಕ್ರಿಯೆ ನಡೆಸಿದ್ದರು.

ಇದನ್ನು ಗಮನಿಸಿದ ಗ್ರಾಮಸ್ಥರು ಘಟನೆ ಬಗ್ಗೆ ಕೊಳ್ಳೇಗಾಲ ತಹಸೀಲ್ದಾರ್ ಮಹದೇವಯ್ಯ ಅವರಿಗೆ ದೂರು ಕೊಟ್ಟಿದ್ದರು. ಬುಧವಾರ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್, ಡಿವೈಎಸ್‍ಪಿ ಸುರೇಶ್ ಬಾಬು ಮತ್ತು ಪೊಲೀಸ್ ಸಿಬ್ಬಂದಿ ಶವವನ್ನು ಹೊರತೆಗೆದು ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ.












Click it and Unblock the Notifications