ವ್ಯಾಕ್, ಗಬ್ಬು ನಾರುತ್ತಿರುವ ಚಾಮರಾಜನಗರ ಜಿಲ್ಲಾಸ್ಪತ್ರೆ!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ,ಜನವರಿ,20: ಸರ್ಕಾರ ಬಡ ಜನತೆಯ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಕಟ್ಟಿಸಿರುವ ಸರ್ಕಾರಿ ಆಸ್ಪತ್ರೆಗಳು ಇಂದು ಮೂಲಭೂತ ಸೌಕರ್ಯ ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ರೋಗಿಗಳ ಜೀವ ಉಳಿಸಲು ಸಾಲಮಾಡಿ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಪರಿಸ್ಥಿತಿ ಚಾಮರಾಜನಗರ ಜನತೆಗೆ ಬಂದಿದೆ.

ನೀವೇನಾದರೂ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಒಮ್ಮೆ ಭೇಟಿ ನೀಡಿದರೆ ಸಾಕು ಬೆಚ್ಚಿ ಬೀಳುತ್ತೀರಾ? ಹೆಸರಿಗೆ ಸ್ಪೆಷಾಲಿಟಿ ಆಸ್ಪತ್ರೆ ಎಂದು ಕರೆಯಲಾಗುತ್ತಿದೆ. ಆದರೆ ಆಸ್ಪತ್ರೆಗೆ ಹೋಗುವವರು ಮೂಗು ಮುಚ್ಚಿಕೊಂಡು ಹೋಗಬೇಕು ಇದೇ ಇಲ್ಲಿನ ಸ್ಪೆಷಾಲಿಟಿ ಎಂದು ಜನ ವಿಷಾದದ ನಗು ಬೀರುತ್ತಾರೆ.[ಮೈಸೂರು ಚೆಲುವಾಂಬ ಆಸ್ಪತ್ರೆಯಲಿಲ್ಲ ಬಾಣಂತಿಯರಿಗೆ ಸುರಕ್ಷೆ!]

Chamarajanagar government hospital at worst stage

ಕೇವಲ ಆಸ್ಪತ್ರೆ ಕಟ್ಟಿಸಿ ಕೈ ತೊಳೆದು ಕೊಂಡರೆ ಸಾಲದು ನಿರ್ವಹಣೆ ಕಡೆಗೂ ಗಮನನೀಡಬೇಕು. ಜನಪ್ರತಿನಿಧಿಗಳು ವರ್ಷಕ್ಕೊಮ್ಮೆಯಾದರೂ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಕುಂದುಕೊರತೆ ಪರಿಶೀಲಿಸಬೇಕು. ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆ ಸೂಕ್ತ ಉದಾಹರಣೆ.

ಚಾಮರಾಜನಗರಲ್ಲಿ ಜಿಲ್ಲಾಸ್ಪತ್ರೆ ಆರಂಭವಾಗಿ ಎರಡು ವರ್ಷವಾಗಿದೆ. ಆಸ್ಪತ್ರೆಯ ತಳ ಮಹಡಿ ಬಳಕೆಯಾಗಿಲ್ಲ. ಕಟ್ಟಡ ಕಟ್ಟಿ ಹೋದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಕಡೆ ಮುಖ ಮಾಡಿಯೇ ಇಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಹೊಸ ಕಟ್ಟಡದಲ್ಲಿ ಸಂಗ್ರಹವಾಗುವ ತ್ಯಾಜ್ಯ ವಸ್ತುಗಳು, ಶೌಚಾಲಯ ನೀರು ಹಾಗೂ ಮಲ, ಮೂತ್ರಗಳು ಪೈಪ್ ಮೂಲಕ ತಳ ಮಹಡಿಯಲ್ಲೇ ಹರಿದಾಡುತ್ತಿದೆ. ಈ ಬಗ್ಗೆ ದುರಸ್ತಿ ಪಡಿಸುವಂತೆ ಹಲವು ಬಾರಿ ಸಂಬಂಧಿಸಿದವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದು ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ರಘುರಾಮ್ ಅವರ ಅಸಹಾಯಕ ನುಡಿ.[ಹೊಸ ವರ್ಷದ ಕೊಡುಗೆ : 3 ವೈದ್ಯಕೀಯ ಕಾಲೇಜು ಆರಂಭ]

Chamarajanagar government hospital at worst stage

ಪಲ್ಸ್ ಪೊಲೀಯೋ ಲಸಿಕಾ ಕಾರ್ಯಕ್ರಮಕ್ಕೆ ಬಂದ ಶಾಸಕ ಹಾಗೂ ಸಂಸದೀಯ ಕಾರ್ಯದರ್ಶಿ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಬಿ.ರಾಮು ಸೇರಿದಂತೆ ಹಲವರಿಗೆ ಜಿಲ್ಲಾಸ್ಪತ್ರೆಯ ನರಕದರ್ಶನವಾಗಿದೆ. ಗಬ್ಬುವಾಸನೆ ಬರುತ್ತಿದ್ದ ಸ್ಥಳಕ್ಕೆ ತೆರಳಿದ ಅವರು ಮೂಗು ಮುಚ್ಚಿಕೊಂಡೇ ಪರಿಶೀಲನೆ ನಡೆಸಿ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಜಿಲ್ಲಾಧಿಕಾರಿ ಬಿ.ರಾಮು ಕೂಡ ಸಂಬಂಧಪಟ್ಟವರ ಗಮನಕ್ಕೆ ತಂದು, ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ.[ಚಾಮರಾಜನಗರದಲ್ಲಿ ಸಿಕ್ಕಿದ್ದು ಎಷ್ಟು ಚಿನ್ನದ ನಾಣ್ಯ?]

ಮುಂದಾಲೋಚನೆ ಮತ್ತು ಸೂಕ್ತ ಮಾರ್ಗದರ್ಶನವಿಲ್ಲದೆ ಕಟ್ಟಿದ ಕಟ್ಟಡದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಈಗಾಗಲೇ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರಘುರಾಮ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಎಸ್.ಮಹದೇವಪ್ರಸಾದ್, ಸಂಸದ ಆರ್. ಧ್ರುವನಾರಾಯಣ್, ಆರೋಗ್ಯ ಸಚಿವ ಯು.ಟಿ.ಖಾದರ್ ಸೇರಿದಂತೆ ಜಿಲ್ಲೆಯಿಂದ ಪ್ರತಿನಿಧಿಸುವ ಎಲ್ಲರಿಗೂ 2016 ಜನವರಿ 4 ರಂದೇ ಪತ್ರ ಬರೆದಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನಾದರೂ ರೋಗ ಬಡಿದ ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ದೊರೆಯುತ್ತಾ ಕಾದು ನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chamarajanagar government hospital at worst stage. Have no good facility in this hospital. This hospital Doctor Raghuram many times wrote a letter to ministers. But they are neglected.
Please Wait while comments are loading...