Karnataka Election: ಕಳೆದ ಚುನಾವಣೆಯಲ್ಲಿ ಮಧ್ಯ ಕರ್ನಾಟಕದಲ್ಲಿ ಬಿಜೆಪಿಯದ್ದೇ ಸೌಂಡ್
ಮಧ್ಯ ಕರ್ನಾಟಕ ಭಾಗದ ದಾವಣಗೆರೆಯನ್ನು ರಾಜ್ಯ ರಾಜಕೀಯದ ಹೆಬ್ಬಾಗಿಲು ಎಂದೇ ಕರೆಯಲಾಗುತ್ತದೆ. ಇನ್ನು ಈ ಭಾಗದ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ ಜಿಲ್ಲೆಯ ಕೊಡುಗೆ ರಾಜ್ಯ ರಾಜಕೀಯಕ್ಕೆ ಏನೇನು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ದಕ್ಷಿಣ, ಉತ್ತರ, ಮಲೆನಾಡು, ಕರಾವಳಿಗೆ ಹೆಬ್ಬಾಗಿಲಿನಂತಿರುವ ಈ ಭಾಗದಲ್ಲಿ ನಡೆಯುವ ರಾಜಕೀಯ ವಿದ್ಯಮಾನಗಳು ವಿಭಿನ್ನವಾಗಿರುವಂತದ್ದು.
ಹೈವೋಲ್ಟೇಜ್ ಕದನದಂತಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಮೇ ಹತ್ತರಂದು ಚುನಾವಣೆ, ಮೇ ಹದಿಮೂರರಂದು ಫಲಿತಾಂಶ ಹೊರಬೀಳಲಿದೆ. ಜೆಡಿಎಸ್ ಈಗಾಗಲೇ ಈ ಚುನಾವಣೆಯನ್ನು ನಿರ್ಣಾಯಕ ಸಮರ ಎಂದು ಸಾರಿದೆ. ಹಲವು ರಾಜಕಾರಣಿಗಳಿಗೆ ಈ ಚುನಾವಣೆ ಕೊನೆಯ ಚುನಾವಣೆಯಾಗುವ ಸಾಧ್ಯತೆಯಿದೆ.

ವರುಣ ಕ್ಷೇತ್ರದಿಂದ ಈಗಾಗಲೇ ಕಾಂಗ್ರೆಸ್ ಟಿಕೆಟ್ ಪಡೆದಿರುವ ಸಿದ್ದರಾಮಯ್ಯನವರು ಇದು ನನ್ನ ಕೊನೆಯ ಚುನಾವಣೆ ಎಂದಿದ್ದಾರೆ. ಇನ್ನು ತೊಂಬತ್ತರ ವಯಸ್ಸಿನಲ್ಲಿರುವ ಶಾಮನೂರು ಶಿವಶಂಕರಪ್ಪನವರಿಗೂ ಈ ಚುನಾವಣೆ (ವಯಸ್ಸಿನ ಆಧಾರದಲ್ಲಿ) ಆದರೂ ಆಗಬಹುದು. ಹಾಲೀ ಕೆಲವು ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ.
ಮಧ್ಯ ಕರ್ನಾಟಕದ ಬಹುತೇಕ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ. ಈ ಬಾರಿಯ ಚುನಾವಣೆಯಲ್ಲೂ ಅದೇ ರಿಪೀಟ್ ಆಗುವ ಸಾಧ್ಯತೆಯಿದೆ. ಕಳೆದ ಅಂದರೆ 2018ರ ಚುನಾವಣೆಯಲ್ಲಿ ಯಾವಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಕ್ಕಿತ್ತು, ಒಟ್ಟಾರೆಯಾಗಿ ಈ ಭಾಗದಲ್ಲಿರುವ ಅಸೆಂಬ್ಲಿ ಕ್ಷೇತ್ರಗಳು, ಜಿಲ್ಲೆಗಳಾವುವು ಎನ್ನುವುದನ್ನು ಟೇಬಲ್ ನಲ್ಲಿ ಹೇಳಲಾಗಿದೆ:
ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ
ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯು ರಾಜ್ಯದ ಮಧ್ಯ (ಸೆಂಟ್ರಲ್) ಕರ್ನಾಟಕ ಭಾಗವೆಂದು ಗುರುತಿಸಲ್ಪಟ್ಟಿದೆ. ಚಿತ್ರದುರ್ಗ ಜಿಲ್ಲೆಯ ಆರು, ದಾವಣಗೆರೆ ಜಿಲ್ಲೆಯ ಏಳು, ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಏಳು, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಐದು ಅಸೆಂಬ್ಲಿ ಕ್ಷೇತ್ರಗಳು ಸೇರಿ 25 ಕ್ಷೇತ್ರಗಳು ಮಧ್ಯ ಕರ್ನಾಟಕದ ವ್ಯಾಪ್ತಿಯಲ್ಲಿ ಬರುತ್ತದೆ.
ಹಲವು ಘಟಾನುಗಟಿಗಳು
ಚಿತ್ರದುರ್ಗ ಜಿಲ್ಲೆಯಿಂದ ಮೊಳಕಾಲ್ಮೂರಿನಿಂದ ಶ್ರೀರಾಮುಲು, ಹಿರಿಯೂರಿನಿಂದ ಪೂರ್ಣಿಮಾ ಶ್ರೀನಿವಾಸ್, ಹೊಸದುರ್ಗದಿಂದ ಗೂಳಿಹಟ್ಟಿ ಶೇಖರ್, ದಾವಣಗೆರೆ ಜಿಲ್ಲೆಯಿಂದ ಎಸ್.ಎ.ರವೀಂದ್ರನಾಥ್, ಶಾಮನೂರು ಶಿವಶಂಕರಪ್ಪ, ಚನ್ನಗಿರಿಯಿಂದ ಮಾಡಾಳ್ ವಿರೂಪಾಕ್ಷಪ್ಪ, ಹೊನ್ನಾಳಿಯಿಂದ ಎಂ.ಪಿ.ರೇಣುಕಾಚಾರ್ಯ ಆಯ್ಕೆಯಾಗಿ ಬಂದಿದ್ದರು.
ಶಿವಮೊಗ್ಗದ ಶಿಕಾರಿಪುರದಿಂದ ಯಡಿಯೂರಪ್ಪ
ಇನ್ನು ಶಿವಮೊಗ್ಗದ ಶಿಕಾರಿಪುರದಿಂದ ಯಡಿಯೂರಪ್ಪ, ಶಿವಮೊಗ್ಗದಿಂದ ಕೆ.ಎಸ್.ಈಶ್ವರಪ್ಪ, ತೀರ್ಥಹಳ್ಳಿಯಿಂದ ಆರಗ ಜ್ಞಾನೇಂದ್ರ, ಸೊರಬದಿಂದ ಕುಮಾರ್ ಬಂಗಾರಪ್ಪ, ಚಿಕ್ಕಮಗಳೂರು ಜಿಲ್ಲೆಯಿಂದ ಸಿ.ಟಿ.ರವಿ ಮುಂತಾದವರು ಆಯ್ಕೆಯಾಗಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಮೇಲುಗೈ ಸಾಧಿಸಿದ್ದರೆ, ಜೆಡಿಎಸ್ ಒಂದು ಕ್ಷೇತ್ರವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ.
| ಜಿಲ್ಲೆ | ಒಟ್ಟು ಕ್ಷೇತ್ರಗಳು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಇತರರು |
| ಚಿತ್ರದುರ್ಗ | 06 | 05 | 01 | 00 | 00 |
| ದಾವಣಗೆರೆ | 07 | 05 | 02 | 00 | 00 |
| ಶಿವಮೊಗ್ಗ | 07 | 06 | 01 | 00 | 00 |
| ಚಿಕ್ಕಮಗಳೂರು | 05 | 04 | 01 | 00 | 00 |











Click it and Unblock the Notifications