ಸದನದಲ್ಲಿ ಸಿಡಿ ಗದ್ದಲ; ಸಿಡಿ ಹಿಡಿದು ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು, ಮಾರ್ಚ್ 23: ರಮೇಶ್ ಜಾರಕಿಹೊಳಿ ಸಿಡಿ ವಿಚಾರ ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದು, ಸ್ಪೀಕರ್ ಕಲಾಪವನ್ನು ಕೆಲಕಾಲ ಮುಂದೂಡಿದ್ದಾರೆ.
ಮಂಗಳವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಧರಣಿ ಆರಂಭಿಸಿದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಕೈಯಲ್ಲಿ ಸಿಡಿ ಹಿಡಿದು ಇದು ಸಿಡಿ ಸರ್ಕಾರ ಎಂದು ಘೋಷಣೆ ಕೂಗಿದರು. ಇದರಿಂದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪವನ್ನು ಕೆಲಕಾಲ ಮುಂದೂಡಿದರು.
ಸ್ಪೀಕರ್ ಮಾಡಿದ ಮನವಿಗೆ ಕಾಂಗ್ರೆಸ್ ಸದಸ್ಯರು ಸ್ಪಂದಿಸಲಿಲ್ಲ. ಮೊದಲು ಪ್ರಶ್ನೋತ್ತರ ಕಲಾಪ ಪೂರ್ಣಗೊಳಿಸೋಣ ಎಂದು ಸ್ಪೀಕರ್ ಹೇಳಿದರು. ಆದರೆ, ಕಾಂಗ್ರೆಸ್ ಸದಸ್ಯರು ಸಿಡಿ, ಸಿಡಿ ಎಂದು ಗದ್ದಲ ಎಬ್ಬಿಸಿದ್ದರಿಂದ ಕಲಾಪವನ್ನು 10 ನಿಮಿಷ ಮುಂದೂಡಲಾಯಿತು.
ಸಂಧಾನ ಸಭೆ; ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಕೊಠಡಿಯಲ್ಲಿ ಕಾಂಗ್ರೆಸ್ ಸದಸ್ಯರ ಸಭೆಯನ್ನು ನಡೆಸಿದರು. ಕಲಾಪ ನಡೆಯಲು ಸಹಕಾರ ನೀಡಬೇಕು ಎಂದು ಸಂಧಾನ ಸಭೆ ನಡೆಸಿದರು. ಆದರೆ, ಕಾಂಗ್ರೆಸ್ ಸದಸ್ಯರು ಇದಕ್ಕೆ ಒಪ್ಪಲಿಲ್ಲ.
ಎಸ್‌ಐಟಿ ಮುಖ್ಯಸ್ಥರ ಆಗಮನ; ಕಲಾಪ ಮುಂದೂಡುತ್ತಿದ್ದಂತೆ ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ವಿಧಾನಸೌಧಕ್ಕೆ ಆಗಮಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದರು.
ಕಾಂಗ್ರೆಸ್ ವಾದವೇನು?: ಸೋಮವಾರ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಡಿ ಪ್ರಕರಣವನ್ನು ಪ್ರಸ್ತಾಪಿಸಿದ್ದರು. "ಗೃಹ ಸಚಿವರನ್ನು ಉದ್ದೇಶಿಸಿ ವಿಡಿಯೋ ಬಿಡುಗಡೆ ಮಾಡಿರುವ ಸಂತ್ರಸ್ತೆ ಉದ್ಯೋಗ ಕೊಡಿಸುವುದಾಗಿ ಹೇಳಿದ್ದ ರಮೇಶ್ ಜಾರಕಿಹೊಳಿ ತಮ್ಮನ್ನು ಬಳಸಿಕೊಂಡಿದ್ದಾರೆ. ಒಪ್ಪಿಗೆ ಇಲ್ಲದೇ ಬಳಸಿಕೊಂಡಿದ್ದಾರೆ. ಎಂದರೆ ಅತ್ಯಾಚಾರವಾಗುತ್ತದೆ" ಎಂದು ಹೇಳಿದ್ದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರರಕರಣ ದಾಖಲು ಮಾಡಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸುತ್ತಿದ್ದಾರೆ. ಈ ವಿಚಾರದಲ್ಲಿಯೇ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆಯುತ್ತಿದೆ.












Click it and Unblock the Notifications