CBSE Class 12th result 2024: ಸಿಬಿಎಸ್‌ಇ 12ನೇ ತರಗತಿಯಲ್ಲಿ 500ಕ್ಕೆ 494 ಅಂಕ ಪಡೆದ ಟ್ಯಾಂಕರ್ ಚಾಲಕನ ಮಗಳು
CBSE 12th Result 2024: ಸಾಮಾನ್ಯವಾಗಿ ಎಷ್ಟೋ ಶ್ರೀಮಂತರ ಮಕ್ಕಳು ಎಲ್ಲಾ ಸೌಲಭ್ಯಗಳಿದ್ದರೂ ವಿದ್ಯಾಭ್ಯಾಸದಿಂದ ಹಿಂದೆ ಉಳಿದುಬಿಡುತ್ತಾರೆ. ಆದರೆ ಈ ಪೈಕಿ ಇನ್ನು ಕೆಲವೇ ಕೆಲವರು ಮಾತ್ರ ವಿದ್ಯಾಭ್ಯಾಸದಲ್ಲಿ ಮುಂದಿರುತ್ತಾರೆ. ಆದರೆ ಬಹುತೇಕ ಬಡವರ ಮಕ್ಕಳು ಯಾವುದೇ ಸೌಲಭ್ಯಗಳಿಲ್ಲದಿದ್ದರೂ ವಿಶೇಷ ಸಾಧನೆ ಮಾಡುವ ಮೂಲಕ ಮಾದರಿಯಾಗಿರುವ ಉದಾಹರಣೆಗಳು ಇವೆ. ಹಾಗೆಯೇ ಇದೀಗ ಟ್ಯಾಂಕರ್ ಡ್ರೈವರ್ ಮಗಳು ಸಿಬಿಎಸ್‌ಇ 12ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ವಿಷೇಶ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾಳೆ.
ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಸೋಮವಾರ (ಮೇ 13) ಪ್ರಕಟವಾಗಿದ್ದು, ಟ್ಯಾಂಕರ್ ಡ್ರೈವರ್ ಮಗಳು ಶೇಕಡಾ 98.8ರಷ್ಟು ಅಂಕಗಳನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಹಾಗಾದರೆ ಇವರ ಸಂಪೂರ್ಣ ಹಿನ್ನೆಲೆ ಏನು, ಪಟ್ಟ ಶ್ರಮ ಹೇಗಿತ್ತು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೆಂಗಳೂರಿನ ರಾಮಮೂರ್ತಿ ನಗರದ ಶ್ರೀ ಚೈತನ್ಯ ಟಿಕ್ನೋ ಶಾಲೆಯ ವಿದ್ಯಾರ್ಥಿನಿ, ಟ್ಯಾಂಕರ್ ಚಾಲಕನ ಮಗಳು ಮೋನಿಕಾ ಎಂ ಸಿಬಿಎಎಸ್‌ಇ 12ನೇ ತರಗತಿ ವಿಜ್ಞಾನ ವಿಭಾಗದಲ್ಲಿ 500ಕ್ಕೆ 494 ಅಂಕ (ಶೇಕಡಾ 98.8) ಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ.
ಮೋನಿಕಾ ಎಂ ತಂದೆ ಮಂಜುನಾಥ್ ಅವರು, ಟ್ಯಾಂಕರ್ ಚಾಲಕರಾಗಿದ್ದು, ಇವರು ನಗರದಾದ್ಯಂತ ನೀರು ಪೂರೈಕೆ ಮಾಡುತ್ತಿದ್ದಾರೆ. ಇನ್ನು ತುಂಬಾ ಬಡತನ ಹಿನ್ನೆಲೆ ಮಂಜುನಾಥ್ ಅವರು 10ನೇ ತರಗತಿವರೆಗೆ ಅಷ್ಟೇ ವಿದ್ಯಾಭ್ಯಾಸ ಮಾಡಲು ಸಾಧ್ಯವಾಯಿತು. ಬಳಿ ಅವರು ಯಾವುದೇ ಬೇರೆ ದಾರಿಯಿಲ್ಲದೆ, ನೀರಿನ ಟ್ಯಾಂಕರ್ನ ಚಾಲಕ ವೃತ್ತಿಯನ್ನು ಆಶ್ರಯಿಸಿದರು.
ಇನ್ನು ವಿದ್ಯಾರ್ಥಿನಿ ಮೋನಿಕಾ ಎಂ ಮಾತನಾಡಿ, "ನನ್ನ ಸಂಪೂರ್ಣ ಶೈಕ್ಷಣಿಕ ಜೀವನಕ್ಕೆ ನನ್ನ ಪೋಷಕರು ಅಪಾರ ಬೆಂಬಲವನ್ನು ನೀಡಿದ್ದಾರೆ. ನನ್ನ ತಂದೆ ಕಡುಬಡತನವಿದ್ದತೂ ಬಡತನವಿದ್ದರೂ ಕೂಡ ನನಗೆ ಯಾವುದೇ ಸೌಲಭ್ಯದಲ್ಲಿಯೂ ಕೊರತೆಯಾಗದಂತೆ ನೋಡಿಕೊಂಡು ಬೆಂಬಲಕ್ಕೆ ನಿಂತರು," ಎಂದು ಹೇಳಿದರು.
ನೀರಿನ ಟ್ಯಾಂಕರ್ ಹೊಡೆಯುವ ಮೂಲಕ ಮಂಜುನಾಥ್ ಅವರು ತಿಂಗಳಿಗೆ 20,000 ಸಾವಿರ ಸಂಪಾದನೆಯಲ್ಲೇ ಮನೆ ಜೀವನ ಹಾಗೂ ಮಗರ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ವಿದ್ಯಾರ್ಥಿನಿ ಮೋನಿಕಾ ಎಂ ತಂದೆ ಮಂಜುನಾಥ್ ಮಾತನಾಡಿ, ನಾವು ಪಟ್ಟ ಕಷ್ಟವನ್ನು ನಮ್ಮ ಮಗಳು ಪಡಬಾರದು. ಅವಳನ್ನು ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಪ್ರೋತ್ಸಾಹಿಸುತ್ತೇನೆ. ಅಲ್ಲದೆ, ಜೀವನದಲ್ಲಿ ಮುಂದುವರೆಯಲು ಆಕೆ ಆಯ್ಕೆ ಮಾಡುವುದನ್ನು ಸಂತೋಷದಿಂದ ಬೆಂಬಲಿಸುತ್ತೇನೆ ಎಂದು ಹೇಳಿದರು.
ಮೋನಿಕಾ ಅವರು ಜೆಇಇ (ಮೇನ್ಸ್)ನಲ್ಲಿ ಶೇಕಡಾ 95.5ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಇದೀಗ ಮುಂದಿನ ಶಿಕ್ಷಣಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. "ನಾನು ಐಐಟಿ ನವದೆಹಲಿಯಲ್ಲಿ ಅಧ್ಯಯನ ಮಾಡಲು ಹಾಗೂ ಕಂಪ್ಯೂಟರ್ ಸೈನ್ಸ್ ತಗೆದುಕೊಳ್ಳಲು ಬಯಸುತ್ತೇನೆ," ಎಂದು ವಿದ್ಯಾರ್ಥಿನಿ ಮೋನಿಕಾ ಎಂ ಹೇಳಿದ್ದಾರೆ. ಅಲ್ಲದೆ, ಮೋನಿಕಾ ಅವರು ಬಿಡುವಿನ ಸಮಯದಲ್ಲಿ ಸುಮ್ಮನೆ ಕುಳಿತುಕೊಳ್ಳದೆ, ಕಾದಂಬರಿಗಳನ್ನು ಓದುವುದು ಹಾಗೂ ಏನಾದರೂ ಹೊಸತನ್ನು ಕಲಿಯುವುದನ್ನು ಮಾಡುತ್ತಿರುತ್ತಾರೆ ಎಂದು ತಿಳಿದುಬಂದಿದೆ.












Click it and Unblock the Notifications