'ಕುಡಿಯಲು ನೀರು ಕೇಳುತ್ತಿಲ್ಲ, ಸಾಂಬಾ ಬೆಳೆಗೆ ಕೇಳುತ್ತಿದ್ದಾರೆ'

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 10 : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಕರೆ ನೀಡಿದ್ದ ಕರ್ನಾಟಕ ಬಂದ್ ಶಾಂತಿಯುತವಾಗಿ ನೆರವೇರಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಶುಕ್ರವಾರ ಸಂಜೆ ಅಧಿಕೃತ ನಿವಾಸ ಕಾವೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಬಂದ್ ಶಾಂತಿಯುತವಾಗಿ ನೇರವೇರಲು ಕಾರಣರಾದ ಜನತೆ ಹಾಗೂ ಕನ್ನಡಪರ ಸಂಘಟನೆಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ' ತಿಳಿಸಿದರು.[ಚಿತ್ರಗಳು : ಕಾವೇರಿಗಾಗಿ ಕರ್ನಾಟಕ ಬಂದ್]

bandh

'ಬಂದ್ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಜೊತೆಗೆ ಬಂದ್ ವೇಳೆ ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡದಂತೆ ಮನವಿ ಮಾಡಿಕೊಂಡಿದ್ದೆ. ಅದರಂತೆ ಯಾವುದೇ ಅಹಿತಕರ ಘಟನೆಗಳು ಇಲ್ಲದೆ ಬಂದ್ ಶಾಂತಿಯುತವಾಗಿ ನೆರವೇರಿದೆ' ಎಂದು ಹೇಳಿದರು.[ಕದ್ದು ಮುಚ್ಚಿ ಕೆಲ್ಸ, ಟೆಕ್ಕಿಗಳಿಗೆ ಬಿಸಿ ಮುಟ್ಟಿಸಿದ ಕನ್ನಡಿಗರು]

'ಪ್ರತಿಭಟನಾಕಾರರು ಕೆಆರ್‍ಎಸ್ ಜಲಾಶಯಕ್ಕೆ ನುಗ್ಗದಂತೆ ಪೊಲೀಸರು ತಡೆಗೋಡೆ ನಿರ್ಮಿಸಿದ್ದರು. ಅದನ್ನೂ ಮುರಿದು ಪ್ರತಿಭಟನಾಕಾರರು ಒಳ ನುಗ್ಗಲು ಯತ್ನಿಸಿದಾಗ ತಳ್ಳಾಟವಾಗಿದೆ. ಜೊತೆಗೆ ಪಕ್ಕದಲ್ಲೇ ನಾಲೆ ಇರುವುದರಿಂದ ಜನ ಉದ್ವೇಗಕ್ಕೆ ಒಳಗಾಗಿ ಅಪಾಯ ಸಂಭವಿಸಬಹುದು ಎಂಬ ದೃಷ್ಟಿಯಿಂದ ಪೊಲೀಸರು ಗುಂಪು ಚದುರಿಸುವ ಪ್ರಯತ್ನ ಮಾಡಿದ್ದಾರೆ' ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.[ಹೊಸ ತಲೆಮಾರಿನ ಹೋರಾಟಗಾರರು, ಗಟ್ಟಿ ದನಿ, ಆಕ್ರೋಶ]

ಪ್ರಧಾನಿ ಮಧ್ಯಸ್ಥಿಕೆ ಅಗತ್ಯ : 'ಒಕ್ಕೂಟ ವ್ಯವಸ್ಥೆಗೆ ಪ್ರಧಾನಿಯವರೇ ಮುಖ್ಯಸ್ಥರು. ಹೀಗಾಗಿ ಕಾವೇರಿ ನದಿ ನೀರು ವಿವಾದ ಬಗೆಹರಿಸುವ ವಿಚಾರದಲ್ಲಿ ಕೂಡಲೇ ಮಧ್ಯೆ ಪ್ರವೇಶ ಮಾಡುವಂತೆ ಅವರಿಗೆ ಪತ್ರ ಬರೆದಿರುವುದಾಗಿ' ಸಿದ್ದರಾಮಯ್ಯ ಹೇಳಿದ್ದಾರೆ.

'ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ತೀವ್ರ ಸಂಕಷ್ಟ ತಂದೊಡ್ಡಿದೆ. ಹೀಗಾಗಿ ಪ್ರಧಾನಿಯವರ ಮಧ್ಯೆ ಪ್ರವೇಶಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದರು. ಕೋರ್ಟ್‍ ಆದೇಶ ಪಾಲನೆ ಬಹಳ ಕಷ್ಟದ ಕೆಲಸ. ಇದರಿಂದ ಬೆಂಗಳೂರು, ಮೈಸೂರು ಮಂಡ್ಯ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ' ಎಂದು ಸಿದ್ದರಾಮಯ್ಯ ಹೇಳಿದರು.

'1995ರಲ್ಲಿ ಇದೇ ಸನ್ನಿವೇಶ ನಿರ್ಮಾಣವಾದಾಗ ಅಂದಿನ ಪ್ರಧಾನಿಗಳು ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದರು. ಸುಪ್ರೀಂಕೋರ್ಟ್‍ಗೆ ನಮ್ಮ ಪರಿಸ್ಥಿತಿ ವಿವರಿಸಿದ್ದೇವೆ. ಆದರೂ ಸಂಕಷ್ಟದ ಸನ್ನಿವೇಶದಲ್ಲಿ ಪ್ರ್ರಧಾನಿಯವರ ಮಧ್ಯಸ್ಥಿಕೆಗೆ ಮನವಿ ಮಾಡಿದ್ದೇವೆ' ಎಂದರು.

'ತಮಿಳುನಾಡಿಗೆ ಸದ್ಯಕ್ಕೆ ನೀರಿನ ಅಗತ್ಯವಿಲ್ಲ. ಮೆಟ್ಟೂರು ಜಲಾಶಯದಲ್ಲಿ 36 ಟಿಎಂಸಿ ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ವಾಡಿಕೆ ಪ್ರಕಾರ ಮಳೆಯೂ ಆಗಲಿದೆ. ಯಾವುದೇ ವರ್ಷ ಮಳೆ ಕೊರತೆ ಉಂಟಾಗಿಲ್ಲ. ಈಗಿನ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಒಂದು ದಿನಕ್ಕೆ 1 ಟಿಎಂಸಿ ನೀರು ಸಾಕು. ಅವರು ಕುಡಿಯುವ ಉದ್ದೇಶಕ್ಕೆ ನೀರು ಕೇಳುತ್ತಿಲ್ಲ. ಸಾಂಬಾ ಬೆಳೆಗೆ ಕೇಳುತ್ತಿದ್ದಾರೆ. ಇದನ್ನು ಪ್ರಧಾನಿಯವರಿಗೆ ಪತ್ರದಲ್ಲಿ ವಿವರಿಸಲಾಗಿದೆ' ಎಂದು ತಿಳಿಸಿದರು.

'ಸೆ.12ರಂದು ಕಾವೇರಿ ಉಸ್ತುವಾರಿ ಸಮಿತಿ ಸಭೆ ಇದೆ. ಅಲ್ಲಿ ವಾದ ಮಂಡನೆ ಮಾಡಿ ನಮ್ಮ ಪರಿಸ್ಥಿತಿ ವಿವರಿಸುತ್ತೇವೆ. ಅವರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ' ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief Minister Siddaramaiah has thanked leaders and common people for peaceful band on September 9th, 2016. Kannada okkuta called for bandh to protest against the release of Cauvery waters to Tamil Nadu.
Please Wait while comments are loading...