ಕಾವೇರಿ ವಿಚಾರದಲ್ಲಿ ರಾಜ್ಯ, ಕೋರ್ಟ್ ಹಿತ ಕಾಯುತ್ತೇವೆ : ಡಿಕೆಶಿ
ಬೆಂಗಳೂರು, ಮೇ 28 : 'ಕಾವೇರಿ ನದಿ ನೀರು ಹಂಚಿಕೆ ವಿವಾದದ ವಿಚಾರದಲ್ಲಿ ರಾಜ್ಯ ಮತ್ತು ನ್ಯಾಯಾಲಯದ ಹಿತ ಕಾಪಾಡುತ್ತೇವೆ' ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ 9.19 ಟಿಎಂಸಿ ಅಡಿ ನೀರು ಹರಿಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಮಂಗಳವಾರ ಸೂಚನೆ ನೀಡಿದೆ. ರಾಜ್ಯದಲ್ಲಿ ಬರಗಾಲವಿರುವಾಗ ಈ ಆದೇಶ ಹೊರಬಂದಿದೆ.
ಈ ಆದೇಶದ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು, 'ಈ ಬಗ್ಗೆ ನಮ್ಮದೇನು ತಕರಾರಿಲ್ಲ. ಒಳಹರಿವು ಬರುತ್ತದೆ ಎಂಬ ವಿಶ್ವಾಸವಿದೆ' ಎಂದು ಹೇಳಿದರು.

'ಪ್ರಾಧಿಕಾರ ನೀಡಿದ ಆದೇಶಕ್ಕೆ ಕರ್ನಾಟಕ ಗೌರವ ಕೊಡಲಿದೆ. ಅಧಿಕಾರಿಗಳ ಜೊತೆ ಈ ಆದೇಶದ ಬಗ್ಗೆ ಚರ್ಚೆ ಮಾಡಿದ್ದೇವೆ. ಜಲಾಶಯದ ಒಳಹರಿವು ಪರಿಗಣನೆ ಮಾಡಿಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇವೆ' ಎಂದು ತಿಳಿಸಿದರು.
'ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿ ಸಮಸ್ಯೆ ಉಂಟಾದರೆ ರಾಜ್ಯದ ಸರ್ವಪಕ್ಷಗಳ ಸಭೆಯನ್ನು ಕರೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಈ ಬಗ್ಗೆ ಸಂಸತ್‌ನಲ್ಲಿ ಬಿಜೆಪಿ ಧ್ವನಿ ಎತ್ತಲಿದೆಯೇ?. ಅವರ ಶಕ್ತಿ ಎಷ್ಟಿದೆ? ನೋಡೋಣ' ಎಂದರು.












Click it and Unblock the Notifications