Cauvery Dispute: ಮಹತ್ವದ ಸ್ಪಷ್ಟನೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು, ಆಗಸ್ಟ್ 26: ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಕಾವೇರಿ ನದಿನೀರು ಹಂಚಿಕೆ ಜಲವಿವಾದ ಸರ್ವೋಚ್ಚ ನ್ಯಾಯಾಲಯದ ಅಂಗಣದಲ್ಲಿದೆ. ಕಾವೇರಿ ಜಲಾಯನ ಪ್ರದೇಶದಲ್ಲಿ ಮಳೆಯ ಕೊರತೆಯ ನಡುವೆಯೂ ತಮಿಳುನಾಡಿಗೆ ನೀರು ಹರಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟನೆಯನ್ನು ನೀಡಿದ್ದಾರೆ.
ಕರ್ನಾಟಕದಲ್ಲಿ ನೀರಿದೆ, ಇದಕ್ಕಾಗಿಯೇ ನೀರು ಬಿಡುಗಡೆ ಮಾಡಿದ್ದು, ಈಗ ಸುಪ್ರೀಂ ಕೋರ್ಟ್ ಮುಂದೆ ನೀರಿಲ್ಲ ಎಂದು ಹೇಳುತ್ತಿದೆ ಎಂಬ ತಮಿಳುನಾಡು ಪರ ವಕೀಲ ಮುಕುಲ್ ರೋಹಟಗಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಈ ವಿಚಾರವಾಗಿ ನಾವು ಪ್ರತಿಕ್ರಿಯೆ ನೀಡವುದಿಲ್ಲ. ವಾಸ್ತವಾಂಶವನ್ನು ನ್ಯಾಯಾಲಯದ ಮುಂದಿಟ್ಟಿದ್ದೇವೆ. ಇದು ತಾಂತ್ರಿಕ ವಿಚಾರವಾಗಿದ್ದು, ನಾವು ಆಣೆಕಟ್ಟುಗಳಲ್ಲಿನ ಒಳಹರಿವಿನ ಮಾಹಿತಿಯನ್ನು ನೀಡಿದ್ದೇವೆ"ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಸುಪ್ರೀಂ ಕೋರ್ಟ್ ನಲ್ಲಿ ಕೆಲವು ಅಂಶಗಳ ಬಗ್ಗೆ ಪ್ರಶ್ನೆ ಎದ್ದಿದ್ದು, ಈ ಎಲ್ಲ ಸಮಸ್ಯೆಗಳಿಗೆ ಮೇಕೆದಾಟುವೊಂದೇ ಪರಿಹಾರ. ಮೇಕೆದಾಟು ಯೋಜನೆ ನಮಗಿಂತ ಹೆಚ್ಚು ತಮಿಳುನಾಡಿಗೆ ಅನುಕೂಲವಾಗಲಿದೆ. ಕರ್ನಾಟಕ ಬಳಸಿಕೊಳ್ಳಲಾಗದ ನೀರು ತಮಿಳುನಾಡಿಗೆ ಸೇರಲಿದೆ. ಈ ನೀರನ್ನು ಸಂಕಷ್ಟದ ಸಮಯದಲ್ಲಿ ಬಳಸಿಕೊಳ್ಳಲು ಈ ಯೋಜನೆ ಅಗತ್ಯವಿದೆ ಎಂದು ಡಿಸಿಎಂ ಹೇಳಿದರು.
ಈ ಯೋಜನೆ ಎರಡೂ ರಾಜ್ಯಗಳ ರೈತರ ಹಿತ ಕಾಯಲಿದೆ. ಹೀಗಾಗಿ ನಾನು ತಮಿಳುನಾಡು ಸರ್ಕಾರ ಹಾಗೂ ನಾಯಕರಿಗೆ ಈ ವಿಚಾರದಲ್ಲಿ ಹೃದಯ ವೈಶಾಲ್ಯತೆ ಪ್ರದರ್ಶಿಸಿ, ಸಹಕಾರ ನೀಡುವಂತೆ ಮನವಿ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ಕಾವೇರಿ ವಿಚಾರವಾಗಿ ಸರ್ವಪಕ್ಷ ನಿಯೋಗ
ಕಾವೇರಿ ವಿಚಾರವಾಗಿ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗುತ್ತಿರುವುದು ರಾಜಕೀಯ ಮಾಡಲು ಎಂಬ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಕೋರ್ಟ್ ಈ ವಿಚಾರದಲ್ಲಿ ಏನು ಹೇಳಬೇಕೋ ಹೇಳಿದೆ. ಅವರಿಗೆ ಕರ್ನಾಟಕ ರಾಜ್ಯದ ಬಗ್ಗೆ ಹಿತಾಸಕ್ತಿ ಇದ್ದರೆ ಅವರು ನಮ್ಮ ಜೊತೆ ಸೇರಿ ರಾಜ್ಯದ ಪರವಾಗಿ ಧ್ವನಿ ಎತ್ತಲಿ" ಎಂದು ಟಾಂಗ್ ನೀಡಿದರು.
ಅವರಿಗೆ ಆಗದಿದ್ದರೆ ನಮ್ಮ ಕರ್ತವ್ಯ ಮಾಡುತ್ತೇವೆ, ನಾವು ಸರ್ವಪಕ್ಷ ಸಭೆಗೆ ಆಹ್ವಾನ ನೀಡಿದ್ದೆವು. ಅವರಿಗೆ ಬರಲು ಸಾಧ್ಯವಾಗಲಿಲ್ಲ. ನಾವು ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಜಲಶಕ್ತಿ ಸಚಿವರು ಸಮಯ ಕೊಟ್ಟಾಗಿ ಸರ್ವಪಕ್ಷ ನಿಯೋಗ ಹೋಗಿ ನಮ್ಮ ವಾದ ಮಂಡಿಸುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.
ನಾವು ರೈತರ ಹಿತವನ್ನು ಕಾಯಬೇಕು
ನಾವು ರೈತರ ಹಿತವನ್ನು ಕಾಯಬೇಕು ನ್ಯಾಯಾಲಯಕ್ಕೂ ಗೌರವ ನೀಡಬೇಕು. ಕಾವೇರಿ ವಿಚಾರವಾಗಿ ಕಾನೂನು ತಜ್ಞರ ಜತೆ ಚರ್ಚೆ ಆಗಿದೆಯೇ ಎಂಬ ಪ್ರಶ್ನೆಗೆ, "ಕಾವೇರಿ ವಿಚಾರವಾಗಿ ಈಗಾಗಲೇ ನಮ್ಮ ತಂಡ ದೆಹಲಿಯಲ್ಲಿ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದೆ. ನಾನು ಮುಂದಿನ ದಿನಗಳಲ್ಲಿ ಮತ್ತೊಂದು ಸಭೆ ಮಾಡಲಿದ್ದೇನೆ" ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟನೆಯನ್ನು ನೀಡಿದ್ದಾರೆ.












Click it and Unblock the Notifications