Rainfall Deficit in Cauvery Basin: ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇ 32 ಮಳೆ ಕೊರತೆ- ಅಂಕಿಅಂಶ, ವಿವರ
ಬೆಂಗಳೂರು, ಸೆಪ್ಟೆಂಬರ್ 27: ಕಾವೇರಿ ಜಲವಿವಾದ ಮುನ್ನೆಲೆಗೆ ಬಂದಿರುವ ಸಂದರ್ಭದಲ್ಲಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆ ಕೊರತೆ ಉಂಟಾಗಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. ದಕ್ಷಿಣ ಒಳನಾಡಿನ ಜಿಲ್ಲೆಯಲ್ಲಿ ಮಳೆ ಕೊರತೆ ಪ್ರಮಾಣವು ಶೇ 27 ಇದ್ದರೆ, ಕಾವೇರಿ ಜಲನಯನ ಜಿಲ್ಲೆಗಳಲ್ಲಿ ಮಳೆ ಕೊರತೆ ಪ್ರಮಾಣವು ಶೇ 32 ಕ್ಕೆ ಏರಿದೆ.
ನೈಋತ್ಯ ಮಾನ್ಸೂನ್‌ನಲ್ಲಿ ಮಳೆಯು ಕಡಿಮೆಯಾಗಿದ್ದು, ನೀರಿನ ಅಭಾವವನ್ನು ಮತ್ತಷ್ಟು ಹೆಚ್ಚಿಸಿದೆ. ಈ ತಿಂಗಳ ಅಂತ್ಯದ ವೇಳೆಗೆ ಮಳೆಗಾಲವು ವಿದಾಯ ಹೇಳಲಿದ್ದು, ಬಿಕ್ಕಟ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಕಾವೇರಿ ಜಲಾನಯನ ಜಿಲ್ಲೆಗಳಲ್ಲಿ ಆಗಬೇಕಿದ್ದ ಮಳೆಯ ಪ್ರಮಾಣದಲ್ಲಿ ಮೂರನೇ ಒಂದು ಭಾಗದಷ್ಟು ಆಗಿಲ್ಲ. ಇದೇ ವೇಳೆ, ಕರ್ನಾಟಕದಲ್ಲಿ ಒಟ್ಟಾರೆ ಶೇ 19 ಮಳೆ ಕೊರತೆ ಎದುರಾಗಿದೆ.

ಅಕ್ಟೋಬರ್ 5 ಕ್ಕಿಂತ ಮೊದಲು ಎರಡು ಭಾರಿ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗೆ ವಿಜ್ಞಾನಿಗಳು ಮಂಗಳವಾರ ಹೇಳಿದ್ದಾರೆ. ಆದರೂ, ಮಳೆ ಕೊರತೆ ಪ್ರಮಾಣ ಕಡಿಮೆಯಾಗದು ಎಂದು ಅವರು ಊಹಿಸಿದ್ದಾರೆ.
ಅಕ್ಟೋಬರ್‌ನ ಎರಡನೇ ವಾರದಲ್ಲಿ ಈಶಾನ್ಯ ಮಾನ್ಸೂನ್ ಪ್ರಾರಂಭವಾಗುವುದರಿಂದ ಈಗ ಉಂಟಾಗಿರುವ ಬಿಕ್ಕಟ್ಟು ಕೊಂಚ ಮಟ್ಟಿಗೆ ಕಡಿಮೆ ಆಗಬಹುದು ಎಂದು ಹೇಳಲಾಗುತ್ತಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳು ಶೇ 15 ಕೊರತೆಯನ್ನು ಕಂಡಿವೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಶೇ 10ರಷ್ಟು ಕೊರತೆ ವರದಿಯಾಗಿದೆ ಎಂದು ಬೆಂಗಳೂರಿನ ಹವಾಮಾನ ವಿಜ್ಞಾನಿ ಪ್ರಸಾದ್ ಎ ಹೇಳಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾನಿಟರಿಂಗ್ ಸೆಲ್ ಮಾಹಿತಿಯ ಪ್ರಕಾರ, ರಾಜ್ಯದ ಒಟ್ಟಾರೆ ಮಳೆ ಕೊರತೆಯು ಶೇ 25 ರಷ್ಟಿದೆ.
ಐಎಂಡಿ ಪ್ರಕಾರ, ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಇಲ್ಲಿಯವರೆಗೆ 47.5 ಸೆಂ.ಮೀ ಮಳೆಯಾಗಬೇಕಿತ್ತು. ಇದುವರೆಗೆ ಕೇವಲ 32.2 ಸೆಂ.ಮೀ ಮಳೆಯಾಗಿದ್ದು, ಶೇ.32ರಷ್ಟು ಕೊರತೆ ಉಂಟಾಗಿದೆ.
ಒಂದು ವಾರದಲ್ಲಿ ಕರ್ನಾಟಕದಲ್ಲಿ ಮುಂಗಾರು ಅಧಿಕೃತವಾಗಿ ಮುಕ್ತಾಯಗೊಳ್ಳಲಿದ್ದು, ಕಾವೇರಿ ಜಲಾನಯನದ ಕೊರತೆಯು ಮುಂದುವರಿಯುತ್ತದೆ ಎಂದು ಹೇಳಲಾಗಿದೆ.

ಸೆಪ್ಟೆಂಬರ್ 28 ಮತ್ತು 30 ರ ನಡುವೆ ಮಾತ್ರ ಕೊಡಗು, ಮೈಸೂರು ಮತ್ತು ಚಾಮರಾಜನಗರದಂತಹ ಜಿಲ್ಲೆಗಳಲ್ಲಿ 7 ಸೆಂಟಿಮೀಟರ್‌ಗಿಂತ ಹೆಚ್ಚು ಮಳೆಯಾಬಹುದು ಎಂದು ಅಂದಾಜಿಸಲಾಗಿದೆ. ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಕ್ಟೋಬರ್ 1 ರಿಂದ 5 ರ ನಡುವೆ 4 ಸೆಂಟಿಮೀಟರ್ ಮಳೆ ಬೀಳಬಹುದು ಎಂದು ಐಎಂಡಿ ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಾಸನ ಮತ್ತು ಕೊಡಗು ಈ ವರ್ಷ ಅತಿ ಹೆಚ್ಚು ಮಳೆ ಕೊರತೆಯನ್ನು ಅನುಭವಿಸಿವೆ. ಇಲ್ಲಿ ಕ್ರಮವಾಗಿ ಶೇ 45 ಮತ್ತು ಶೇ 43 ರಷ್ಟು ಮಳೆ ಕೊರತೆ ಇದೆ.
ಸೆಪ್ಟೆಂಬರ್ 28 ಮತ್ತು 30 ರ ನಡುವೆ ಕರ್ನಾಟಕ ಮತ್ತು ಕೇರಳದ ಒಳಭಾಗಗಳಲ್ಲಿ ಭಾರೀ ಮಳೆಯಾಗಲಿದೆ. ಈ ಸಮಯದಲ್ಲಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ಸುಮಾರು 7 ಸೆಂಟಿಮೀಟರ್ ಮಳೆ ಬೀಳಬಹುದು ಎಂದು ಐಎಂಡಿ ಹೇಳಿದೆ.












Click it and Unblock the Notifications