ಒಂದು ಹಡಗು, ಇಬ್ಬರು ಚಾಲಕರು: ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಗೆಲುವಿನ ಹಾದಿ ಸುಗಮವೇ? ಹೀಗೊಂದು ವಿಶ್ಲೇಷಣೆ
ಬೆಂಗಳೂರು, ಮೇ 05: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರ ಅಂತಿಮ ಹಂತದಲ್ಲಿದೆ. ಕಾಂಗ್ರೆಸ್ ಗೆಲುವಿನ ಪರ ಬಹುತೇಕ ಸಮೀಕ್ಷೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಆದರೆ, ಚುನಾವಣೆ ಹತ್ತಿರವಾಗುತ್ತಿದಂತೆ ಕಾಂಗ್ರೆಸ್ ಗೆಲುವಿನ ದಡ ಸೇರುವ ಬಗೆಗಿನ ಶಂಕೆಗಳು ದಟ್ಟಗೊಂಡಿವೆ.
224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಮೇ 10 ರಂದು ಚುನಾವಣೆ ನಡೆಯಲಿದೆ. ಮೇ 13 ರಂದು ಮತಗಳ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಕರ್ನಾಟಕ ವಿಧಾನಸಭೆಯಲ್ಲಿ 113 ಸ್ಥಾನಗಳ ಮ್ಯಾಜಿಕ್ ನಂಬರನ್ನು ದಾಟಿದ ಪಕ್ಷ ಮಾತ್ರ ಅಧಿಕಾರದ ಗದ್ದುಗೆ ಏರಲು ಸಾಧ್ಯ.

ಕಾಂಗ್ರೆಸ್ ಪಕ್ಷವು ತನ್ನ ಇಬ್ಬರು ನಾಯಕರನ್ನು ನೆಚ್ಚಿಕೊಂಡಿದೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡದ ಪಕ್ಷದಲ್ಲಿ ಇಬ್ಬರು ಆಕಾಂಕ್ಷಿಗಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಿಎಂ ಸ್ಥಾನಕ್ಕೆ ಕಣ್ಣಿಟ್ಟಿದ್ದಾರೆ. ಅವರಿಬ್ಬರು ತಮ್ಮ ಆಶಯಗಳ ಬಗ್ಗೆ ಬಹಿರಂಗವಾಗಿಯೇ ಮಾತನಾಡಿದ್ದಾರೆ.
ಜನಪ್ರಿಯ ಮತ್ತು ವರ್ಚಸ್ವಿ ನಾಯಕ ಸಿದ್ದರಾಮಯ್ಯ ಅವರೀಗ 75 ವರ್ಷ ವಯಸ್ಸು. ಅವರು 2013 ಮತ್ತು 2018 ರ ನಡುವೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ತಮ್ಮ ಸರ್ಕಾರದ ಅವಧಿಯಲ್ಲಿ ಜನರಿಗೆ ಜನಪ್ರಿಯ ಯೋಜನೆಗಳನ್ನು ನೀಡುವ ಮೂಲಕ ಹೆಸರುವಾಸಿಯಾದವರು. ಅನ್ನ ಭಾಗ್ಯ, ಕ್ಷೀರ ಭಾಗ್ಯದಂತಹ ಮಹತ್ವದ ಯೋಜನೆಗಳನ್ನು ಜಾರಿಗೆ ತಂದು ಜನಮಾನಸದಲ್ಲಿ ನೆಲೆ ನಿಂತವರು.

ಸಿದ್ದರಾಮಯ್ಯ ಅವರು ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಈ ಹಿಂದೆ ಜನತಾದಳದಲ್ಲಿದ್ದವರು. 2005 ರಲ್ಲಿ ಎಚ್‌ಡಿ ದೇವೇಗೌಡರೊಂದಿಗಿನ ಭಿನ್ನಾಭಿಪ್ರಾಯದಿಂದ ಜೆಡಿಎಸ್ ತೊರೆದರು. ನಂತರ ಅಹಿಂದ ವರ್ಗಗಳ ಜನರನ್ನು ಒಂದುಗೂಡಿಸಲು ಶ್ರಮಿಸಿದವರು. 2008ರಲ್ಲಿ ಕಾಂಗ್ರೆಸ್‌ಗೆ ಬಂದರು. ಗಣಿ ಅಕ್ರಮದ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದರು. ನಂತರ 2013 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು.
61 ವರ್ಷದ ಡಿಕೆ ಶಿವಕುಮಾರ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ರಾಜ್ಯ ರಾಜಕೀಯದಲ್ಲಿ ಹೆಸರು ಮಾಡಿದ್ದಾರೆ. ಡಿಕೆಶಿ ಕ್ರಿಯಾಶೀಲತೆ ಮತ್ತು ಚಾತುರ್ಯದ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದಾರೆ. ತೊಂದರೆಯಲ್ಲಿದ್ದ ಪಕ್ಷವನ್ನು ಹಲವಾರು ಬಾರಿ ಕಾಪಾಡಲು ಹೋರಾಡಿದ್ದಾರೆ. ಇದಕ್ಕಾಗಿಯೇ ಟ್ರಬಲ್ ಶೂಟರ್ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಅವರು ಪ್ರಸ್ತುತ ಕನಕಪುರ ಕ್ಷೇತ್ರದ ಶಾಸಕರಾಗಿದ್ದು, ರಾಜ್ಯ ಸಚಿವ ಸಂಪುಟದಲ್ಲಿ ಹಲವು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಈ ಇಬ್ಬರು ನಾಯಕರ ನಡುವೆ ಮುಖ್ಯಮಂತ್ರಿ ಕುರ್ಚಿಗಾಗಿ ಸಂಘರ್ಷ ಏರ್ಪಡುವುದಂತೂ ಸತ್ಯ.

ಉಭಯ ನಾಯಕರ ನಡೆಗಳ ಬಗ್ಗೆ ಪ್ರತಿಕ್ರಿಯಿಸಿರುವ ರಾಜಕೀಯ ವಿರೋಧಿಗಳು ಕಾಂಗ್ರೆಸ್ ಒಡೆದ ಮನೆ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಆದರೆ ಚುನಾವಣೆಯ ಪೂರ್ವದಲ್ಲಿ, ಇಬ್ಬರೂ ನಾಯಕರು ಉತ್ತಮ ಭಾಂದವ್ಯ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.
'ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು, ನಮ್ಮ ಇಬ್ಬರು ದೊಡ್ಡ ನಾಯಕರು ಒಂದು ತಂಡವಾಗಿ ಕೆಲಸ ಮಾಡಬೇಕು. ಇದನ್ನು ಪಕ್ಷದ ಪ್ರತಿಯೊಬ್ಬರೂ ಅರ್ಥಮಾಡಿಕೊಂಡಿದ್ದಾರೆ. ಅದೇ ಆಗುತ್ತಿದೆ ಮತ್ತು ಅದು ಆಗಬೇಕು' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದ ವರ್ಷ ಹೇಳಿದ್ದರು.
ಇನ್ನೊಂದು ಬೆಳವಣಿಗೆಯನ್ನು ಗಮನಿಸಿದೆ, ಕಾಂಗ್ರೆಸ್ನ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ.
'ಶಿವಕುಮಾರ್, ದಿನೇಶ್ ಗುಂಡೂರಾವ್ ಮತ್ತು ಕೃಷ್ಣ ಬೈರೇಗೌಡ ಅವರು ರಾಜ್ಯದಲ್ಲಿ ಮುಂದಿನ ಸಾಲಿನ ನಾಯಕರು. ನಾನು ಸಹ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ' ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಪಕ್ಷದೊಳಗೆ ಸಾಕಷ್ಟು ಪ್ರಭಾವವನ್ನು ಹೊಂದಿದ್ದಾರೆ, ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಲೀನ್ ಇಮೇಜ್ ಹಾಗೂ ಜನಪ್ರಿಯತೆ ಹೆಚ್ಚು ಕೆಲಸ ಮಾಡಬಹುದು ಎನ್ನಲಾಗಿದೆ.
ಪಕ್ಷದೊಳಗಿನ ಈ ಎಲ್ಲ ಬೆಳವಣಿಗಗಳನ್ನು ಗಮನಿಸಿದರೆ, ಕಾಂಗ್ರೆಸ್‌ಗೆ ಕರ್ನಾಟಕ ಚುನಾವಣೆಯನ್ನು ಗೆಲ್ಲುವುದು ಸುಲಭ ಸಾಧ್ಯವೇ ಎಂಬ ಪ್ರಶ್ನೆಯಂತೂ ಏಳುತ್ತದೆ. ಇದಕ್ಕೆ ಉತ್ತರ ಮೇ 13ರಂದು ಸಿಗಲಿದೆ.












Click it and Unblock the Notifications