ಕಾಂಗ್ರೆಸ್ ಕಡೆಗೆ ಸಿಪಿ ಯೋಗೇಶ್ವರ್ ಪುತ್ರಿ: ತಂದೆ-ಮಗಳ ಬಾಂಧವ್ಯದ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಏಪ್ರಿಲ್ 01: ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರುವುದು ಖಚಿತವಾಗಿದ್ದು, ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಪಕ್ಷವು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರು ಪ್ರಸ್ತುತ ಬಿಜೆಪಿ ಎಂಎಲ್ಸಿ ಆಗಿದ್ದು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರವಾಗಿ ಒಮ್ಮೆ ಮತ್ತು ಎರಡು ಬಾರಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದಿದ್ದರು. ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಟಿಕೆಟ್‌ಗಳಲ್ಲಿ ತಲಾ ಒಂದು ಬಾರಿ ಆಯ್ಕೆಯಾದರು. ನಟ-ರಾಜಕಾರಣಿಯಾಗಿದ್ದ ಅವರು ಜೆಡಿಎಸ್‌ನ ನಾಯಕ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಎರಡು ಬಾರಿ ಈ ಭಾಗದಲ್ಲಿ ಸೋಲು ಅನುಭವಿಸಿದ್ದಾರೆ.

ಈ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾಧ್ಯಮಗಳ ಜೊತೆಗೆ ಮಾತನಾಡಿ, ನಮ್ಮ ಪಕ್ಷ ಸೇರುವ ಬಗ್ಗೆ ಕೆಲ ದಿನಗಳಿಂದ ಚರ್ಚೆ ನಡೆಯುತ್ತಿದೆ. ಅವಳು ಪ್ರಬುದ್ಧ ವಯಸ್ಕಳಾಗಿದ್ದರೂ ಮತ್ತು ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. ನಮ್ಮ (ಒಕ್ಕಲಿಗ) ಸಂಪ್ರದಾಯದಲ್ಲಿ ಹೆಣ್ಣು ಮದುವೆಯಾಗುವವರೆಗೂ ತಂದೆಯ ಆಶ್ರಯದಲ್ಲಿರುತ್ತಾಳೆ. ಆಕೆಯ ಮಾಧ್ಯಮ ಹೇಳಿಕೆಯನ್ನು ಗಮನಿಸಿದ್ದೇನೆ. ಆದರೆ ಆತುರದ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ನಿಶಾ ಅವರನ್ನು ಮತ್ತು ಅವರ ಸಹೋದರ (ಡಿಕೆ ಸುರೇಶ್) ಅವರನ್ನು ಭೇಟಿಯಾಗಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮನವಿ ಮಾಡಿದರು ಎಂದು ಶಿವಕುಮಾರ್ ಹೇಳಿದರು. ತಂದೆಯೊಂದಿಗೆ ಉಳಿಯುವುದಕ್ಕಿಂತ ಕಾಂಗ್ರೆಸ್‌ನಲ್ಲಿ ಉತ್ತಮ ಭವಿಷ್ಯವಿದೆ ಎಂದು ಆಕೆಯ ತಂದೆಯ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಹೇಳಿದ್ದರು ಎಂದು ನನಗೆ ತಿಳಿದಿದೆ. ಆದರೆ ರಾಜಕೀಯ ಲಾಭಕ್ಕಾಗಿ ಅವರ ಕುಟುಂಬವನ್ನು ವಿಭಜಿಸುವ ಆರೋಪ ಹೊರಲು ನಾನು ಸಿದ್ಧನಿಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಆಕೆ ನಮ್ಮ ಮನೆ ಮಗಳಂತೆ. ಆಕೆ ನಮ್ಮ ಬಳಿ ಬಂದು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು. ಅವರ ತಾಯಿ ನನಗೆ ಪರಿಚಯ. ಅವರಿಗೆ ರಕ್ಷಣೆ ಇಲ್ಲ. ತಂದೆ ಸ್ಥಾನದಲ್ಲಿ ನಿಂತು ನನ್ನನ್ನು ಸ್ವೀಕಾರ ಮಾಡಿ ಎಂದು ಕೇಳಿದಳು. ರಾಜಕಾರಣಕ್ಕಾಗಿ ತಂದೆ ಮಗಳ ಬೇರೆ ಮಾಡುವುದು ಸರಿಯಲ್ಲ. ಆಕೆಗೆ ಮದುವೆ ಮಾಡಬೇಕು, ಧಾರೆ ಎರೆದು ಅಕ್ಷತೆ ಹಾಕಬೇಕು. ಅದನ್ನು ತಂದೆಯೇ ಮಾಡಬೇಕು. ಹೀಗಾಗಿ ರಾಜಕೀಯಕ್ಕಾಗಿ ಅವರನ್ನು ಬೇರೆ ಮಾಡಲು ಇಷ್ಟವಿಲ್ಲ. ಆಕೆ ಬಂದು ತಮ್ಮ ಕಷ್ಟ ಹೇಳಿಕೊಂಡಿದ್ದಾಳೆ. ಆಕೆ ಪ್ರಬುದ್ಧ ಯುವತಿ. ಆಕೆಗೆ ರಾಜಕಾರಣದಲ್ಲಿನ ಆಯ್ಕೆಗೆ ಸ್ವಾತಂತ್ರ್ಯವಿದೆ. ಆಕೆ ಇನ್ನೂ ಯೋಗೇಶ್ವರ್ ಅವರ ಕುಟುಂಬದ ಮೇಲೆ ಅವಲಂಬಿತವಾಗಿದ್ದಾರೆ ಎಂದು ಹೇಳಿದರು.

ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ರಾಜಕೀಯಕ್ಕೆ ಅಪ್ಪ ಮಗಳನ್ನು ದೂರ ಮಾಡಿದರು ಎಂದು ಜನ ಪ್ರಶ್ನೆ ಮಾಡಬಹುದು. ಯೋಗೇಶ್ವರ್ ಜತೆ ಇರುವ ಬಿಜೆಪಿ ಕಾರ್ಯಕರ್ತರೇ ಆಕೆಗೆ ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದ್ದಾರೆ. ಆಕೆ ವಿವಾಹವಾಗಿ ಬೇರೆ ಕುಟುಂಬಕ್ಕೆ ಸೇರಿದ್ದರೆ, ನಾವು ಇಷ್ಟು ಆಲೋಚನೆ ಮಾಡುತ್ತಿರಲಿಲ್ಲ. ಹೀಗಾಗಿ ನಾನು ನನ್ನ ಸಹೋದರ ಈ ವಿಚಾರವಾಗಿ ಬಹಳ ತಾಳ್ಮೆಯಿಂದ ಆಲೋಚನೆ ಮಾಡುತ್ತಿದ್ದೇವೆ. ನಿಶಾ ಅವರು ಮಾಧ್ಯಮಗಳಿಗೆ ಕೊಟ್ಟ ಹೇಳಿಕೆ ಗಮನಿಸಿದೆ. ಆಕೆ ದೊಡ್ಡ ಧೈರ್ಯ ಮಾಡಿರುವಂತೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷದಲ್ಲೇ ಕೆಲಸ ಮಾಡುತ್ತೇನೆ ಎಂದು ಆಕೆ ತೀರ್ಮಾನ ಮಾಡಿದರೆ, ಆಕೆಯನ್ನು ಹೊರದಬ್ಬಲು ಆಗುವುದಿಲ್ಲ. ಹೀಗಾಗಿ ಸ್ಥಳೀಯ ನಾಯಕರ ಜೊತೆ ಚರ್ಚೆ ಮಾಡುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.












Click it and Unblock the Notifications