Arecanut: ರೈತರಲ್ಲಿ ಆತಂಕ ತಂದ ಭೂತಾನ್ ಅಡಿಕೆ ಆಮದು: ಕ್ಯಾಂಪ್ಕೋ ಹೇಳಿದ್ದೇನು?
ಭೂತಾನ್‌ನಿಂದ ಹಸಿರು ಅಡಿಕೆಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರವು ಇತ್ತೀಚೆಗೆ ತೆಗೆದುಕೊಂಡ ನಿರ್ಧಾರವು ರೈತರಲ್ಲಿ ಆತಂಕ ಮೂಡಿಸಿದೆ. ಸದ್ಯ ಅಡಿಕೆ ಧಾರಣೆ ಏರಿಕೆಯಾಗುತ್ತಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರದ ಈ ನೀತಿ ಬೆಲೆ ಕುಸಿತದ ಆತಂಕಕ್ಕೆ ಕಾರಣವಾಗಿದೆ.
ಅದರಲ್ಲೂ ದೇಶದ ಪ್ರಮುಕ ಅಡಿಕೆ ಪೂರೈಕೆದಾರ ಕರ್ನಾಟಕ ರೈತರು ಹೆಚ್ಚಿನ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಭೂತಾನ್‌ನಿಂದ 17 ಸಾವಿರ ಟನ್ ಹಸಿ ಅಡಿಕೆ ಆಮದಿಗೆ ಒಪ್ಪಿಗೆ ನೀಡಿರುವುದು ರೈತರಲ್ಲಿ ಕಳವಳ ಮೂಡಿಸಿದೆ.

ರಾಜ್ಯದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿತ್ತು. ಈಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಅಡಿಕೆ ಬೆಳೆಯಲಾಗುತ್ತಿದೆ. ಮಾತ್ರವಲ್ಲದೆ ನೆರೆ ರಾಜ್ಯಗಳಲ್ಲಿ ಕೂಡ ಅಡಿಕೆ ಬೆಳೆಯಲಾಗುತ್ತಿದ್ದು, ಇದರ ಜೊತೆ ಆಮದಿಗೂ ಒಪ್ಪಿಗೆ ನೀಡಿದರೆ ಬೆಲೆ ಕುಸಿತವಾಗಲಿದೆ ಎನ್ನುವ ಆತಂಕ ರೈತರದ್ದಾಗಿದೆ.
ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳುವುದನ್ನೇ ನೆಪವಾಗಿಟ್ಟುಕೊಂಡು ಮಧ್ಯವರ್ತಿಗಳು ಬೆಲೆ ಕಡಿಮೆ ಮಾಡಲು ಯತ್ನಿಸುತ್ತಾರೆ. ಸರ್ಕಾರ ಮತ್ತು ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಅನ್ಯಾಯ ತಡೆಯಲಿ. ಷರತ್ತು ವಿಧಿಸಿ ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
ಭಯ ಬೇಡ ಎಂದ ಕ್ಯಾಂಪ್ಕೊ
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ಯಾಂಪ್ಕೋ (ದಿ ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋಆಪರೇಟಿವ್ ಲಿಮಿಟೆಡ್) ಅಧ್ಯಕ್ಷರಾದ ಎ.ಕಿಶೋರ್ ಕುಮಾರ್ ಕೊಡ್ಗಿ, ಭೂತನ್ ಅಡಿಕೆಯಿಂದ ದರ ಕುಸಿತ ಆಗಲ್ಲ ಎಂದು ರೈತರಿಗೆ ಧೈರ್ಯ ಹೇಳಿದ್ದಾರೆ.
ಭೂತಾನ್‌ನಿಂದ ಹಸಿರು ಅಡಿಕೆ ಆಮದು ದೇಶೀಯ ಮಾರುಕಟ್ಟೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಕಡಿಮೆ, ಇದರಿಂದ ಹೆಚ್ಚಿನ ದರ ಕುಸಿತವಾಗಲ್ಲ, ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಹೇಳಿದರು. "ಭೂತಾನ್‌ನಿಂದ ಆಮದು ಮಾಡಿಕೊಳ್ಳುವ ಹಸಿರು ಅಡಿಕೆ ಪ್ರಮಾಣವು ನಮ್ಮ ದೇಶದ ಒಟ್ಟು ಉತ್ಪಾದನೆಯ ಒಂದು ಸಣ್ಣ ಭಾಗದಷ್ಟಿದೆ. ಪರಿಣಾಮವಾಗಿ, ಸ್ಥಳೀಯ ರೈತರು ಉತ್ಪಾದಿಸುವ ಬಿಳಿ ಚಾಲಿ, ಅಡಿಕೆ ತಳಿಯ ಬೆಲೆಯಲ್ಲಿ ಗಣನೀಯ ಇಳಿಕೆಯಾಗುವುದಿಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಸಿರು ಅಡಿಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಡಿಕೆ ಎನ್ನುವುದು ಬೆಳೆಗಾರರಿಂದ ಮೊದಲಾಗಿ ಕೂಲಿ ಕಾರ್ಮಿಕರು, ಸರಕು ಸಾಗಾಣೆ, ಮಾರಾಟ, ಉದ್ಯಮ ಸೇರಿದಂತೆ ಪ್ರತ್ಯಕ್ಷ ಪರೋಕ್ಷವಾಗಿ ಲಕ್ಷಾಂತರ ಉದ್ಯೋಗ ಸೃಷ್ಟಿಸಿದೆ. ಸರ್ಕಾರ ಇದನ್ನು ಇದೆಲ್ಲವನ್ನು ಪರಿಗಣಿಸಬೇಕು ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications