ಅಧಿಕ ಬಡ್ಡಿ ವಿಧಿಸಿದರೆ 10 ವರ್ಷ ಶಿಕ್ಷೆ: ಸಚಿವ ಸಂಪುಟ ಸಭೆಯ ಪ್ರಮುಖ ಅಂಶಗಳು ಇಲ್ಲಿವೆ
ಬೆಂಗಳೂರು, ಫೆಬ್ರವರಿ 21: ಕರ್ನಾಟಕ ಅಧಿಕ ಬಡ್ಡಿ ನಿಷೇಧ ಅಧಿನಿಯಮ, 2004ಕ್ಕೆ ತಿದ್ದುಪಡಿ ಮಾಡುವ ಕುರಿತು ಪ್ರಸ್ತಾಪಿತ ತಿದ್ದುಪಡಿ ವಿಧೇಯಕ 2025ಕ್ಕೆ ಸಚಿವ ಸಂಪುಟದ ಅನುಮೋದನೆ ನೀಡಿದೆ. ಸಹಕಾರ ಸಂಘಗಳು, ನಿಬಂಧಕರು ಈಗಾಗಲೇ ಅಸ್ತಿತ್ವದಲ್ಲಿರುವ ಕರ್ನಾಟಕ ಅಧಿಕ ಬಡ್ಡಿ ನಿಷೇಧ ಕಾಯ್ದೆಯನ್ನು ಅಪರಾಧಿಗಳಿಗೆ 10 ವರ್ಷ ಶಿಕ್ಷೆ ಮತ್ತು 5 ವರ್ಷ ದಂಡ ವಿಧಿಸುವ ಮೂಲಕ ಮತ್ತಷ್ಟು ಬಿಗಿಗೊಳಿಸಲು ತಿದ್ದುಪಡಿ ಪ್ರಸ್ತಾಪಿಸಿದೆ ಎಂದು ಕಾನೂನು ಸಚಿವ ಹೆಚ್ ಕೆ ಪಾಟೀಲ್ ಹೇಳಿದರು.
ಈ ಕುರಿತು ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರು ಮಾತನಾಡಿ, ಕರ್ನಾಟಕ ಗಿರಿವಿದಾರರ ಅಧಿನಿಯಮ, 1961ಕ್ಕೆ ತಿದ್ದುಪಡಿ ಮಾಡುವ ಕುರಿತು ಪ್ರಸ್ತಾಪಿತ ತಿದ್ದುಪಡಿ ವಿಧೇಯಕ 2025ಕ್ಕೆ ಸಚಿವ ಸಂಪುಟದ ಅನುಮೋದನೆ ನೀಡಿದೆ ಎಂದು ವಿವರಿಸಿದರು. ಬಡವರು ಮತ್ತು ದುರ್ಬಲರು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತಂತೆ ಕರ್ನಾಟಕದ ಗಿರವಿದಾರರ ಅಧಿನಿಯಮಕ್ಕೆ ತಿದ್ದುಪಡಿ ಪ್ರಸ್ತಾಪಿಸಲಾಗಿದೆ.

ವಿಜಯಪುರ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ವಿಜಯಪುರ ಕಿರು ತಾರಾಲಯ ಯೋಜನೆಯ ಪರಿಷ್ಕೃತ ಕಾಮಗಾರಿಯ ರೂ. 1288.79 ಲಕ್ಷ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 2024-25ನೇ ಸಾಲಿನಿಂದ ಯೋಜನಾ ವೆಚ್ಚ ರೂ.15.30 ಕೋಟಿಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ 306 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಪ್ರಾರಂಭಿಸಲು ಅನುಕೂಲವಾಗುವಂತೆ ತರಬೇತಿದಾರರನ್ನು ನಿಯೋಜಿಸಲು ಸದರಿ ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಬೋಧಿಸುವ ಶಿಕ್ಷಣ ತರಬೇತುದಾರರನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲು ಸಚಿವ ಸಂಪುಟ ನಿರ್ಣಯಿಸಿದೆ
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಣಾವರ ಗ್ರಾಮ ಪಂಚಾಯಿತಿಯ 23 ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವರ ಸಂಪುಟ ನಿರ್ಣಯಿಸಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರದೇಶವಾರು ನೀರು ಸರಬರಾಜು ವ್ಯವಸ್ಥೆಗಳ ಆಧುನೀಕರಣ ಮತ್ತು ಮರು ರೂಪಿಸುವ ಒಟ್ಟು ರೂ.199.00 ಕೋಟಿಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿಯನ್ನು ಸಚಿವ ಸಂಪುಟ ನೀಡಿದೆ.
ವಸತಿ ರಹಿತ ಮೀನುಗಾರರಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರಾಷ್ಟ್ರೀಯ ಮೀನುಗಾರಿಕೆ ಕಲ್ಯಾಣ ಯೋಜನೆಯಡಿ ಮೀನುಗಾರರ ಮಾದರಿ ಗ್ರಾಮಗಳ ಅಬಿವೃದ್ಧಿಗಾಗಿ "ಮಸ್ತ್ಯಾಶ್ರಯ ಯೋಜನೆ" 10,000 ಮನೆಗಳನ್ನು ಮಂಜೂರು ಮಾಡಲು ಸಚಿವ ಸಂಪುಟ ನಿರ್ಣಯಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಫೆಬ್ರವರಿ-2025 ರ ಮಾಹೆಯಿಂದ ಜಾರಿಗೆ ಬರುವಂತೆ ಅರ್ಹ ಫಲಾನುಭವಿಗಳಿಗೆ 5 ಕೆ.ಜಿ. ಅಕ್ಕಿಯನ್ನು ಸಾರ್ವಜನಿಕ ವಿತರಣಾ ಪದ್ದತಿಯಡಿ ವಿತರಿಸಲು ನಿರ್ಣಯಿಸಿ ದಿನಾಂಕ: 19.02.2025 ರಂದು ಹೊರಡಿಸಿರುವ ಆದೇ±ಕ್ಕೆ ಘಟೋನೋತ್ತರ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
ಸಮಾಜ ಕಲ್ಯಾಣ ಇಲಾಖೆಯ 63 ಡಾ, ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳಿಗೆ ಅಂದಾಜು ರೂ. 441-00 ಕೋಟಿಗಳ ವೆಚ್ಚದಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ. "ಕೇಂದ್ರ ಪುರಸ್ಕೃತ "ಪ್ರಸಾದ್ 2.0" ಯೋಜನೆಯಡಿಯಲ್ಲಿ ಬೀದರ್ ಜಿಲ್ಲೆಯ ಬೀದರನ ಶ್ರೀ ಪಾಪನಾಶ ದೇವಸ್ಥಾನದಲ್ಲಿ ರೂ.22.41 ಕೋಟಿ ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳನ್ನು ಪ್ರವಾಸೋದ್ಯಮ ಇಲಾಖೆಯ ಮೂಲಕ ಕೈಗೊಳ್ಳಲು ಸಚಿವ ಸಂಪುಟ ನಿರ್ಣಯಿಸಿದೆ.
ಕೇಂದ್ರ ಪುರಸ್ಕೃತ "ಪ್ರಸಾದ್ 2.0" ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಬೆಳಗಾವಿ ಜಿಲ್ಲೆ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನವನ್ನು (ಶೇ 100% ರಷ್ಟು ಕೇಂದ್ರ ಸಹಾಯಧನ) ಅಭಿವೃದ್ಧಿ ಪಡಿಸಲು ರೂ.18.37 ಕೋಟಿಗಳ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಅನುಮೋದಿಸಿದೆ.
ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ "ಪ್ರಸಾದ್" ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ರೂ.61.99 ಕೋಟಿಗಳ (ಕೇಂದ್ರದ ಪಾಲು ರೂ.45.71 ಕೋಟಿಗಳು ಹಾಗೂ ರಾಜ್ಯದ ಪಾಲು ರೂ.16.28 ಕೋಟಿಗಳು) ಪರಿಷ್ಕೃತ ಅಂದಾಜು ಮೊತ್ತದಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಅನುಮೋದಿಸಿದೆ ಎಂದು ವಿವರಿಸಿದರು.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ & ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ 2025"ಕ್ಕೆ ಅನುಮೋದನೆ ಹಾಗೂ ಇದನ್ನು ವಿಧಾನಮಂಡಲದಲ್ಲಿ ಮಂಡಿಸಲು ಸಚಿವ ಸಂಪುಟ ನಿರ್ಣಯಿಸಿದೆ. ಮಾರಾಟ ಚಟುವಟಿಕೆಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆ ಮಾರುಕಟ್ಟೆ ಸಮಿತಿಗಳ ಜವಬ್ದಾರಿಯಾಗಿರುತ್ತದೆ. ಪ್ರಸ್ತುತ ಮಾರುಕಟ್ಟೆ ತಿದ್ದುಪಡಿಯು ಮಾರುಕಟ್ಟೆ ಸಮಿತಿಯ ಅಧಿಕಾರದ ವ್ಯಾಪ್ತಿಯನ್ನು ಮಾರುಕಟ್ಟೆ ಕ್ಷೇತ್ರಕ್ಕೆ ವಿಸ್ತರಿಸಿರುವುದರಿಂದ ಮಾನ್ಯ ನ್ಯಾಯಾಲಯದ ನಿರ್ದೇಶನ ಮೇರೆಗೆ ಚಿಲ್ಲರೆ ವಹಿವಾಟಿಗೆ ಸಂಬಂಧಿಸಿದಂತೆ ವರ್ಗೀಕರಣ ಮಾಡುವ ಪ್ರಸ್ತಾವವನ್ನು ಅಂಗೀಕಾರ ಪಡೆಯುವುದು ಅಗತ್ಯವಿದೆ ಎಂದು ಸಚಿವರು ವಿವರಿಸಿದರು.












Click it and Unblock the Notifications