ಸೆಪ್ಟೆಂಬರ್ 3ನೇ ವಾರದಲ್ಲಿ ಸಂಪುಟ ವಿಸ್ತರಣೆ, ಮತ್ತೆ ಶುರುವಾಯ್ತು ಲಾಭಿ
ಬೆಂಗಳೂರು, ಸೆಪ್ಟೆಂಬರ್ 01: ನಿನ್ನೆ ನಡೆದ ಸಮ್ಮಿಶ್ರ ಸರ್ಕಾರದ ಮೂರನೇ ಸಮನ್ವಯ ಸಮಿತಿ ಸಭೆಯಲ್ಲಿ ಸಂಪುಟ ವಿಸ್ತರಣೆ ಕೊನೆಗೂ ಅಸ್ತು ಎನ್ನಲಾಗಿದೆ.
ಸೆಪ್ಟೆಂಬರ್ ಮೂರನೇ ವಾರದಷ್ಟರಲ್ಲಿ ಹೊಸ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದರ ಬಗ್ಗೆ ಎರಡೂ ಪಕ್ಷದ ಸಮಿತಿಯ ಸದಸ್ಯರು ಒಪ್ಪಿಗೆ ನೀಡಿದ್ದಾರೆ.
ಪ್ರಸ್ತುತ ಕಾಂಗ್ರೆಸ್ ಬಳಿ ಆರು ಸಚಿವ ಸ್ಥಾನಗಳು ಬಾಕಿ ಇದ್ದು. ಆ ಆರು ಸ್ಥಾನಗಳಿಗಾಗಿ ಅದರ ಎರಡರಷ್ಟು ಜನ ಲಾಭಿಗೆ ಇಳಿದಿದ್ದಾರೆ. ಆದರೆ ಜೆಡಿಎಸ್‌ಗೆ ಈ ಸಮಸ್ಯೆ ಇಲ್ಲ.
ನಿನ್ನೆಯಷ್ಟೆ ಸಿದ್ದರಾಮಯ್ಯ ಅವರು 'ಕೇಳಿದವರನ್ನೆಲ್ಲಾ ಸಚಿವರನ್ನು ಮಾಡಲು ಆಗುತ್ತದೇನ್ರಿ?' ಎನ್ನುವ ಮೂಲಕ ಸಚಿವ ಸ್ಥಾನಕ್ಕೆ ಲಾಭಿ ಮಾಡುವ ಶಾಸಕರಿಗೆ ಮಾತಿನ ಪೆಟ್ಟು ನೀಡಿದ್ದಾರೆ.

ಡಜನ್‌ಗೂ ಹೆಚ್ಚು ಆಕಾಂಕ್ಷಿಗಳು
ಡಜನ್‌ಗೂ ಹೆಚ್ಚು ಕಾಂಗ್ರೆಸ್ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಅವರಲ್ಲಿ ಕೆಲವರು ಅರ್ಹತೆ ಆಧಾರದ ಮೇಲೆ ಲಾಭಿ ಮಾಡಿದರೆ, ಇನ್ನು ಕೆಲವರು ಜಾತಿ, ಧರ್ಮ, ಪ್ರಾಂತ್ಯದ ಆಧಾರದ ಮೇಲೆ ಸಚಿವ ಸ್ಥಾನಕ್ಕೆ ಲಾಭಿ ಮಾಡುತ್ತಿದ್ದಾರೆ.

ಎಂಬಿ ಪಾಟೀಲ್ ಗೆ ಸಚಿವ ಸ್ಥಾನ ಪಕ್ಕಾ
ಮೊದಲ ಬಾರಿ ಸಂಪುಟ ವಿಸ್ತರಣೆ ಆದಾಗ ಸಚಿವ ಸ್ಥಾನ ವಂಚಿತರಾಗಿದ್ದ ಎಂಬಿ ಪಾಟೀಲ್ ಪಕ್ಷದ ವಿರುದ್ಧ ಬಂಡಾಯ ಏಳುವ ಸೂಚನೆ ನೀಡಿದ್ದರು. ಹೈಕಮಾಂಡ್ ನಿಂದ ಕೂಡ ಅವರಿಗೆ ಬುಲಾವ್ ಬಂದಿತ್ತು. ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಪ್ರಬಲ ಮುಖಂಡರಾಗಿ ಹೊರಹೊಮ್ಮುತ್ತಿರುವ ಎಂಬಿ ಪಾಟೀಲ್ ಅವರಿಗೆ ಈ ಬಾರಿ ಸಚಿವ ಸ್ಥಾನ ಪಕ್ಕಾ ಎನ್ನಲಾಗುತ್ತಿದೆ.

ರೇಸ್‌ನಲ್ಲಿರುವ ಪ್ರಮುಖರು
ಸಚಿವ ಸ್ಥಾನ ಆಕಾಂಕ್ಷಿ ಪಟ್ಟಿಯಲ್ಲಿ ಮೊದಲ ಹೆಸರು ಎಂ.ಬಿ.ಪಾಟೀಲ್ ಅವರದ್ದಿದೆ. ಆ ನಂತರ ಎಚ್.ಕೆ.ಪಾಟೀಲ್ ಅವರ ಹೆಸರು ಕೇಳಿಬರುತ್ತಿದೆ. ಸತೀಶ್ ಜಾರಕಿಹೊಳಿ, ಆನಂದ್ ಸಿಂಗ್, ಬಿಸಿ ಪಾಟೀಲ್ ಸಹ ಪ್ರಮುಖರು. ಇನ್ನುಳಿದಂತೆ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಎನ್‌ಎ ಹ್ಯಾರಿಸ್, ತನ್ವೀರ್ ಸೇಠ್ ಸಚಿವ ಸ್ಥಾನದ ರೇಸಿನಲ್ಲಿದ್ದಾರೆ. ರಮೇಶ್ ಜಾರಕಿಹೊಳಿ ಸಹ ಕೆಲವು ಆಪ್ತ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲು ಯತ್ನಿಸುತ್ತಿದ್ದಾರೆ.

ಉತ್ತರ ಕರ್ನಾಟಕ್ಕೆ ಅವಕಾಶ
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಸ್ಥಾನಮಾನ ಕೇಳಿದ್ದ ಕಾರಣ ಈ ಬಾರಿ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ದಟ್ಟವಾಗಿದೆ. ಎಂಬಿ ಪಾಟೀಲ್, ಎಚ್.ಕೆ.ಪಾಟೀಲ್ ಜೊತೆಗೆ ಮತ್ತೊಬ್ಬ ಉತ್ತರ ಕರ್ನಾಟಕ ಶಾಸಕರಿಗೆ ಸಚಿವ ಕುರ್ಚಿ ದೊರಕುವ ಸಾಧ್ಯತೆ ಇದೆ.

ವೇಣುಗೋಪಾಲ್ ಇಂದು ಸಭೆ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಇಂದು ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಅಧ್ಯಕ್ಷರ ಜೊತೆ ಈ ಬಗ್ಗೆ ಪ್ರಮುಖ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳಲಾಗುವುದು.












Click it and Unblock the Notifications