ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ: ಸಂಜೆಯ ವೇಳೆಗೆ ಚಿತ್ರಣ?
ಬೆಂಗಳೂರು, ಏ.6: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆಗೆ ಸಂಜೆ ವೇಳೆಗೆ ಅಂತಿಮ ಚಿತ್ರಣ ಸಿಗುವ ಸಾಧ್ಯತೆ ಕಾಣುತ್ತಿದೆ.
ಮುಖ್ಯಮಂತ್ರಿ ಬೆನ್ನಲ್ಲಿಯೆ ಸಚಿವಾಕಾಂಕ್ಷಿಗಳು ಮತ್ತು ಸಚಿವ ಸ್ಥಾನ ಕಳೆದುಕೊಳ್ಳುವ ಭಯ ಇರುವಂತಹವರೂ ದೆಹಲಿಯತ್ತ ತೆರಳಿದ್ದಾರೆ. ಯಾರಿಗೆ ಅಧಿಕಾರ ಕೈಬಿಡುತ್ತದೆ, ಯಾರಿಗೆ ಅಧಿಕಾರದ ಲಭಿಸುತ್ತದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಂತೆಲ್ಲಾ ಸಚಿವರಾಗಿ ಅಧಿಕಾರ ಅನುಭವಿಸುವಂತಹ ಕೆಲವು ಹಿರಿಯರನ್ನು ಕೈ ಬಿಡಬೇಕು. ಅವರ ಸ್ಥಾನಕ್ಕೆ ಉತ್ಸಾಹಿ ಯುವ ಶಾಸಕರು ಮತ್ತು ಸಂಘ ಪರಿವಾರದ ಹಿನ್ನೆಲೆ ಇರುವಂತವರನ್ನು ನೇಮಕ ಮಾಡಬೇಕು. ಇದರಿಂದ ಮುಂದಿನ ಚುನಾವಣೆಗೆ ಅನುಕೂಲ ಆಗುತ್ತದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಕೆಲವು ಸಚಿವರು ದೆಹಲಿಗೆ ತೆರಳಿದ್ದು, ಪಕ್ಷದ ಹೈಕಮಾಂಡ್ ನಾಯಕರ ಮೂಲಕ ತಮ್ಮ ಸ್ಥಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಕಸರತ್ತು ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿರಾಜಕೀಯ ಕಾರ್ಯರ್ಶಿ ಎಂ.ಪಿ. ರೇಣುಕಾಚಾರ್ಯ, ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಸಹಿತ ಹಲವರು ದೆಹಲಿಯಲ್ಲಿ ಬಿಜೆಪಿ ಕೇಂದ್ರ ನಾಯಕರನ್ನು ಭೇಟಿ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಮಂಗಳವಾರ (ಏ5) ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ರಾಜ್ಯದ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಜಲಸಂಪನ್ಮೂಲ ಸಚಿವರು, ಹಣಕಾಸು ಸಚಿವರು ಹೀಗೆ ಕೇಂದ್ರದ ಹಲವು ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಮುಖ್ಯವಾಗಿ ಸಚಿವ ಸಂಪುಟ ವಿಸ್ತರಣೆ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಸಂಪುಟ ವಿಸ್ತರಣೆಗಾಗಿ ಬಂದಿಲ್ಲ:
ಸಚಿವ ಸಂಪುಟ ವಿಸ್ತರಣೆ ಕುರಿತು ಮಾತುಕತೆಗೆ ಬರುವಂತೆಪಕ್ಷದ ವರಿಷ್ಠರು ನನಗೆ ಆಹ್ವಾನ ನೀಡಿಲ್ಲ. ವಿವಿಧ ಯೋಜನೆಗಳ ಚರ್ಚೆಗೆಂದು ನಾನು ಇಲ್ಲಿಗೆ ಬಂದಿರುವ ಈ ಸಂದರ್ಭವನ್ನು ಉಪಯೋಗಿಸಿಕೊಂಡು ಭಾ.ಜ.ಪಾ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಹಾಗೂ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗುತ್ತೇನೆ. ಆ ಸಂದರ್ಭದಲ್ಲಿ ಪಕ್ಷ , ಸಂಘಟನೆ ಕುರಿತಂತೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವದೆಹಲಿಯಲ್ಲಿ ಹೇಳಿದ್ದಾರೆ.

ವರಿಷ್ಠರನ್ನು ಭೇಟಿಯಾಗಲು ಸಮಯ ಇನ್ನೂ ನಿಗದಿಯಾಗಿಲ್ಲ. ಹೈ ಕಮಾಂಡ್ ಜತೆ ಚರ್ಚೆಗೆ ಕುಳಿತ ಸಂದರ್ಭದಲ್ಲಿ ಪುನರ್ ರಚನೆಯೊ, ವಿಸ್ತರಣೆಯೋ ಎನ್ನುವುದು ತಿಳಿಯುತ್ತದೆ ಎಂದರು.
8 ತಿಂಗಳ ಬಳಿಕ ಸಂಪುಟ ವಿಸ್ತರಣೆ:
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎಂಟು ತಿಂಗಳ ಬಳಿಕ ಸಚಿವ ಸಂಪುಟ ವಿಸ್ತರಣೆಯ ಪ್ರಯತ್ನ ನಡೆಯುತ್ತಿದೆ. ಸಂಪುಟದಲ್ಲಿ ಸದ್ಯ ನಾಲ್ಕು ಸ್ಥಾನಗಳು ಖಾಲಿ ಇವೆ. ಕೆಲವು ಹಿರಿಯ ಸಚಿವರನ್ನು ಕೈಬಿಟ್ಟು ಹೀಗೆ 10-12 ಸ್ಥಾನಗಳನ್ನು ಹೊಸಬರಿಗೆ ಕೊಡಬೇಕು ಎಂಬ ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗಿದೆ.

ಯಾರಿಗಿದೆ ಅದೃಷ್ಟ?
ಈ ಬೆಳವಣಿಗೆಯ ನಡುವೆಯೇ ಸಚಿವಾಕಾಂಕ್ಷಿಗಳಾದ ಎಂ.ಪಿ. ರೇಣುಕಾಚಾರ್ಯ, ಬಿ.ವೈ ವಿಜಯೇಂದ್ರ, ಬಸನಗೌಡ ಪಾಟೀಲ್ ಸೇರಿದಂತೆ ಅನೇಕ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಅವರಷ್ಟೇ ಅಲ್ಲದೇ ಸಚಿವರುಗಳು ದೆಹಲಿಗೆ ತೆರಳಿದ್ದು, ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯ ಬಿಜೆಪಿಯ ಬೆಳವಣಿಗೆಗಳ ಬಗ್ಗೆ ಸಾಕಷ್ಟು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಸಂಪುಟ ಪುನಾರಚನೆಯಾದರೆ ತಮ್ಮನ್ನೂ ಪರಿಗಣಿಸಬಹುದು ಎಂಬ ನಿರೀಕ್ಷೆಯಲ್ಲಿ ಪ್ರಮುಖವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ, ವಿಜಯಪುರ ಶಾಸಕ ಬಸನಗೌಡ ಪಾಟೀಲ್, ರಮೇಶ ಜಾರಕಿಹೊಳಿ, ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಸುರಪುರ ಶಾಸಕ ರಾಜುಗೌಡ, ಗುಲಬರ್ಗಾ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೆಯ ಪಾಟೀಲ್ ರೇವೂರ, ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ಹಿರಿಯೂರು ಶಾಸಕಿ ಆರ್. ಪೂರ್ಣಿಮಾ, ಹಾಸನ ಶಾಸಕ ಪ್ರೀತಂ ಗೌಡ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅದೃಷ್ಠ ಖುಲಾಯಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications