ಸಚಿವರ ಪಟ್ಟಿ ಇಂದು ಅಂತಿಮ; ಆಕಾಂಕ್ಷಿಗಳಲ್ಲಿ ಢವ ಢವ!
ಬೆಂಗಳೂರು, ಆಗಸ್ಟ್ 19 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ಸೇರುವ ಶಾಸಕರ ಪಟ್ಟಿಯನ್ನು ಹೈಕಮಾಂಡ್ ಇಂದು ಅಂತಿಮಗೊಳಿಸಲಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಢವ ಢವ ಆರಂಭವಾಗಿದೆ.
ಮಂಗಳವಾರ ಬೆಳಗ್ಗೆ 10 ಗಂಟೆಗೆ ಯಡಿಯೂರಪ್ಪ ಸಂಪುಟಕ್ಕೆ 14 ರಿಂದ 15 ಶಾಸಕರು ಸೇರ್ಪಡೆಯಾಗಲಿದ್ದು, ಸಂಪುಟ ವಿಸ್ತರಣೆ ನಡೆಯಲಿದೆ. ಆದರೆ, ಯಾರಿಗೆ ಸಚಿವ ಸ್ಥಾನ ಸಿಗಲಿದೆ? ಎಂಬುದು ಇನ್ನೂ ನಿಗೂಢವಾಗಿದೆ.
ಹೈಕಮಾಂಡ್ ನಾಯಕರ ಬಳಿ ಮೂರು ಪಟ್ಟಿ ಇದೆ. ಎಲ್ಲವನ್ನೂ ಸೇರಿಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಸೋಮವಾರ ಸಂಜೆಯ ವೇಳೆಗೆ ಪಟ್ಟಿ ರಾಜ್ಯ ನಾಯಕರ ಕೈ ಸೇರುವ ನಿರೀಕ್ಷೆ ಇದೆ. ಸಚಿವ ಸ್ಥಾನದ ಆಕಾಂಕ್ಷಿಗಳು ಪಟ್ಟಿ ಬರಲಿ ಎಂದು ಕಾದು ಕುಳಿತಿದ್ದಾರೆ.
ಶನಿವಾರ ದೆಹಲಿಯಲ್ಲಿ ಬಿ. ಎಸ್. ಯಡಿಯೂರಪ್ಪ ಅಮಿತ್ ಶಾ ಭೇಟಿ ಮಾಡಿದ್ದರು. ಸಂಪುಟ ವಿಸ್ತರಣೆಗೆ ಒಪ್ಪಿಗೆ ನೀಡಿರುವ ಅವರು ಸಚಿವರ ಪಟ್ಟಿಯನ್ನು ನಾವೇ ಅಂತಿಮಗೊಳಿಸಿ ಕಳಿಸುತ್ತೇವೆ ಎಂದು ಸೂಚನೆ ನೀಡಿದ್ದಾರೆ.

ಏಕ ವ್ಯಕ್ತಿ ಸರ್ಕಾರ ಎಂಬ ಟೀಕೆ
ಜುಲೈ 26 ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ, ಇದುವರೆಗೂ ಸಚಿವ ಸಂಪುಟ ವಿಸ್ತರಣೆ ನಡೆದಿಲ್ಲ. ಇದರಿಂದಾಗಿ ಪ್ರತಿಪಕ್ಷಗಳು ಇದು ಏಕ ವ್ಯಕ್ತಿ ಸರ್ಕಾರ ಎಂದು ಟೀಕೆ ಮಾಡಿದ್ದವು. ಈಗ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದೆ.

15 ಪ್ಲಸ್ 1 ಶಾಸಕರು ಸೇರ್ಪಡೆ
ಮಂಗಳವಾರ 15 ಬಿಜೆಪಿಯ ಶಾಸಕರು ಮತ್ತು ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್. ನಾಗೇಶ್ ಯಡಿಯೂರಪ್ಪ ಸಂಪುಟ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, 15 ಶಾಸಕರು ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ. ಪಟ್ಟಿಯನ್ನು ಸಂಜೆ ಹೈ ಕಮಾಂಡ್ ನಾಯಕರು ಕಳಿಸಲಿದ್ದಾರೆ.

ನಿಗಮ-ಮಂಡಳಿ ಸ್ಥಾನ
ಬಿಜೆಪಿಯಲ್ಲಿ 105 ಶಾಸಕರು ಇದ್ದಾರೆ, ಎಲ್ಲರಿಗೂ ಸಚಿವ ಸ್ಥಾನ ನೀಡುವುದು ಸಾಧ್ಯವಿಲ್ಲ. ಆದ್ದರಿಂದ, ಸಂಪುಟ ವಿಸ್ತರಣೆ ಬಳಿಕ ಅಸಮಾಧಾನ ಉಂಟಾಗುವುದನ್ನು ತಪ್ಪಿಸಲು ಸಚಿವ ಸ್ಥಾನ ವಂಚಿತ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಪಟ್ಟವನ್ನು ನೀಡಲು ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ.

ಅನರ್ಹ ಶಾಸಕರು ಸೇರೋಲ್ಲ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣವಾದ ಯಾವ ಅನರ್ಹ ಶಾಸಕರು ಸಂಪುಟಕ್ಕೆ ಮೊದಲ ಹಂತದಲ್ಲಿ ಸೇರುತ್ತಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಂಡು ತೀರ್ಪು ಹೊರಬಂದ ಬಳಿಕ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ಬಿಜೆಪಿ ತೀರ್ಮಾನ ಕೈಗೊಳ್ಳಲಿದೆ.












Click it and Unblock the Notifications