ಆರು ತಿಂಗಳ ಆಡಳಿತಕ್ಕೆ ಸಿದ್ದರಾಮಯ್ಯ ಕೊಡುಗೆ
ಬೆಂಗಳೂರು, ನ. 14 : 11 ಸಾವಿರ ಪೊಲೀಸ್ ವಸತಿ ಗೃಹ ನಿರ್ಮಾಣ, ಕೃಷಿ ಬೆಲೆ ಆಯೋಗ ರಚನೆ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚನೆ, ಪ.ಜಾತಿ ಮತ್ತು ಪಂಗಡದವರಿಗೆ ಶೌಚಾಲಯ ನಿರ್ಮಿಸಲು 15 ಸಾವಿರ ರೂ. ಸಬ್ಸಿಡಿ ಮುಂತಾದ ನಿರ್ಣಯಗಳನ್ನು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ತಮ್ಮ ಆರು ತಿಂಗಳ ಅವಧಿ ಪೂರ್ಣಗೊಳಿಸಿ ಸಿಎಂ ಸಿದ್ದರಾಮಯ್ಯ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ.
ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ, ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರಿಗೂ 'ಆರೋಗ್ಯಶ್ರೀ' ಯೋಜನೆ ವಿಸ್ತರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅನ್ನಭಾಗ್ಯ ಯೋಜನೆಗೆ ಛತ್ತೀಸ್‌ಗಢ ಸೇರಿದಂತೆ ಹೊರ ರಾಜ್ಯದಿಂದ ಅಕ್ಕಿ ಅಮದು ಮಾಡುವ ಬದಲು, ರಾಜ್ಯದ ರೈತರಿಂದಲೇ ಭತ್ತ ಖರೀದಿಸಿ ದಾಸ್ತಾನು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಬಿಪಿಎಲ್ ಕಾರ್ಡ್‌ದಾರರಿಗೆ 'ವಾಜಪೇಯಿ ಆರೋಗ್ಯಶ್ರೀ' ಯೋಜನೆ ಜಾರಿಯಲ್ಲಿದೆ, ಎಪಿಎಲ್ ಕಾರ್ಡ್‌ದಾರರಿಗೂ ಯೋಜನೆ ವಿಸ್ತರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಯೋಜನೆ ಜಾರಿಯಿಂದಾಗಿ ಎಪಿಎಲ್ ಕಾರ್ಡ್‌ದಾರರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಯಿಂದ ಸೂಚಿತಗೊಂಡ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯಲಿದೆ ಎಂದು ಮಾಹಿತಿ ನೀಡಿದರು. (ರೈತ ದಿನಗೂಲಿ ನೌಕರರ ಸಂಕಷ್ಟಕ್ಕೆ ಸರ್ಕಾರದ ನೆರವು) ಸಂಪುಟ ಸಭೆಯ ಇತರ ನಿರ್ಣಯಗಳು

ಅನ್ನಭಾಗ್ಯಕ್ಕೆ ರಾಜ್ಯದ ಅಕ್ಕಿ
ಸಿಎಂ ಸಿದ್ದರಾಮಯ್ಯ ಅವರ ಕನಸಿನ ಅನ್ನಭಾಗ್ಯ ಯೋಜನೆಗಾಗಿ ಛತ್ತೀಸ್‌ಗಢ ಅಥವಾ ಬೇರೆ ರಾಜ್ಯಗಳಿಂದ ಅಕ್ಕಿ ಆಮದು ಮಾಡಿಕೊಳ್ಳದೆ ರಾಜ್ಯದ ರೈತರಿಂದಲೇ ಬೆಂಬಲ ಬೆಲೆಯಲ್ಲಿ ಖರೀದಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಕನಿಷ್ಠ ಬೆಂಬಲ ಬೆಲೆ 1,310 ರೂ. ಇದ್ದು 290 ರೂ. ಸೇರಿಸಿ 1,600 ರೂ. ನಿಗದಿಪಡಿಸಲಾಗಿದೆ. ಮಾರುಕಟ್ಟೆ ಮಹಾಮಂಡಲ ಮತ್ತು ಆಹಾರ ನಿಗಮ ಮೂಲಕ ಭತ್ತ ಖರೀದಿಸಲು ತೀರ್ಮಾನಿಸಲಾಗಿದೆ.

ಹೊಸ ಸೀಮೆ ಎಣ್ಣೆ ನೀತಿ
ಪ್ರಸ್ತುತ ಸರ್ಕಾರಕ್ಕೆ 43572 ಕಿಲೋ ಲೀಟರ್ ಸೀಮೆಎಣ್ಣೆ ಲಭ್ಯವಿದೆ. ಸದ್ಯ ಬಿಪಿಎಲ್ ಕಾರ್ಡ್ ಸಂಖ್ಯೆ ಹೆಚ್ಚಳವಾಗಲಿದೆ. ಆದ್ದರಿಂದ ಸೀಮೆಎಣ್ಣೆ ವಿತರಣೆಯಲ್ಲಿ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಲಭ್ಯತೆ ಮತ್ತು ಬೇಡಿಕೆ ಆಧಾರದ ಮೇಲೆ ವಿತರಣೆ ಮಾಡಲು 'ಸೀಮೆಎಣ್ಣೆ ನೀತಿ' ಜಾರಿಗೊಳಿಸಲು ನಿರ್ಧರಿಸಲಾಗಿದೆ. ಸೀಮೆಎಣ್ಣೆ ವಿತರಣೆ ಉಸ್ತುವಾರಿಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ವಹಿಸಲು ತೀರ್ಮಾನಿಸಲಾಗಿದೆ.

ಪೊಲೀಸರಿಗೆ ವಸತಿ ಗೃಹಗಳು
ಕರ್ನಾಟಕ ಪೊಲೀಸ್ ವಸತಿ ನಿಗಮ ವತಿಯಿಂದ 'ಪೊಲೀಸ್ ಗೃಹ-2020' ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ 11 ಸಾವಿರ ಮನೆಗಳ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. 1,818 ಕೋಟಿ ರೂ. ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರ 464 ಕೋಟಿ ರೂ. ಅನುದಾನ ನೀಡಲಿದ್ದು, ಉಳಿದ ಮೊತ್ತವನ್ನು ಹುಡ್ಕೋದಿಂದ ಪಡೆಯಲು ನಿರ್ಧರಿಸಲಾಗಿದೆ.

ಬೆಳಗಾವಿಗೆ ಪೊಲೀಸ್ ಕಮೀಷನರ್ ಕಚೇರಿ
ಬೆಳಗಾವಿ ಜಿಲ್ಲೆಯಲ್ಲಿ ಸುವರ್ಣ ಸೌಧವಿದೆ ಮತ್ತು ಸದ್ಯ ಜನಂಸಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಭದ್ರತೆ ದೃಷ್ಟಿಯಿಂದ ಬೆಳಗಾವಿಗೆ ಪೊಲೀಸ್ ಕಮೀಷನರೇಟ್ ರಚನೆ ಮಾಡಿ ಡಿಐಜಿ ಹಂತದ ಅಧಿಕಾರಿಯನ್ನು ಆಯುಕ್ತರನ್ನಾಗಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಜಮೀನು ಮಂಜೂರು
ಬುದ್ಧ ಎಜುಕೇಷನ್ ಸೊಸೈಟಿ ಟ್ರಸ್ಟ್‌ಗೆ ಬೆಂಗಳೂರು ಉತ್ತರ ತಾಲೂಕಿನ ದೊಡ್ಡಬಿದರಕಲ್ಲು ಗ್ರಾಮದಲ್ಲಿ 1.29 ಎಕರೆ ಜಮೀನು, ಬಾಗಲಕೋಟೆಯ ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ನೆಲಮಂಗಲ ತಾಲೂಕು ಲಕ್ಕೂರು ಗ್ರಾಮದಲ್ಲಿ 5 ಎಕರೆ ಜಮೀನು, ಕರಾವಳಿ ಕುರುಬರ ಸಂಘಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಕಾದ್ರಿ ಗ್ರಾಮದಲ್ಲಿ 23 ಗುಂಟೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ.

ಶೌಚಾಲಯ ನಿರ್ಮಾಣ
ನಿರ್ಮಲ ಭಾರತ್ ಅಭಿಯಾನದಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಂಡರೆ 15 ಸಾವಿರ ರೂ. ಪ್ರೋತ್ಸಾಹ ಧನ ನೀಡಲು ಸಂಪುಟ ನಿರ್ಧರಿಸಿದೆ. ಪ್ರಸ್ತುತ 10 ಸಾವಿರ ರೂ. ನೀಡುತ್ತಿದ್ದು, ಶೌಚಾಲಯ ನಿರ್ಮಾಣ ಉತ್ತೇಜಿಸಲು 5 ಸಾವಿರ ರೂ. ಹೆಚ್ಚಿಸಲಾಗಿದೆ. ಬಸವ ವಸತಿ ಯೋಜನೆ ಮತ್ತು ಗ್ರಾಮೀಣ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೂ 1.20 ಲಕ್ಷ ರೂ. ಜತೆಗೆ 10 ಸಾವಿರ ರೂ. ಶೌಚಾಲಯ ನಿರ್ಮಾಣಕ್ಕೆ ನೀಡಲಾಗುತ್ತದೆ. ಶೌಚಾಲಯ ನಿರ್ಮಾಣ ಮಾಡಿದ ನಂತರವೇ ಒಟ್ಟಾರೆ ಮೊತ್ತ ಬಿಡುಗಡೆ ಎಂಬ ಷರತ್ತು ವಿಧಿಸಲು ತೀರ್ಮಾನಿಸಲಾಗಿದೆ.

ನಾರಾಯಣಪುರ ಕಾಲುವೆ ಆಧುನೀಕರಣ
ನಾರಾಯಣಪುರ ಎಡದಂಡೆ ಕಾಲುವೆ ಆಧುನೀಕರಣ ಮತ್ತು ಪುನರ್ ನವೀಕರಣ ಹಾಗೂ ವಿಸ್ತರಣೆ ಮಾಡುವ 4103.50 ಕೋಟಿ ರೂ. ಯೋಜನೆಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ತುಂಗಾ ಮೇಲ್ದಂಡೆ ಯೋಜನೆಯ ಪರಿಷ್ಕೃತ ವೆಚ್ಚ 2561.88 ಕೋಟಿ ರೂ. ಮೊತ್ತಕ್ಕೂ ಒಪ್ಪಿಗೆ ಸೂಚಿಸಿದೆ. ಅಂಜರ್ತಲದ ಸಮರ್ಪಕ ಬಳಕೆ ಮತ್ತು ನಿಯಂತ್ರಣಕ್ಕಾಗಿ 'ಅಂತರ್ಜಲ ನಿರ್ದೇಶನಾಲಯ' ರಚಿಸಲು ಸಂಪುಟ ಅನುಮೋದನೆ ನೀಡಿದೆ.

ಇತರ ತೀರ್ಮಾನಗಳು
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ಹಣಕಾಸು ಸಂಸ್ಥೆಗಳಿಂದ 27 ಕೋಟಿ ರೂ. ಸಾಲ ಪಡೆಯಲು ಬ್ಯಾಂಕ್ ಖಾತರಿ ನೀಡುವುದು. ಸರ್ಕಾರದ ವಿವಿಧ ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿರುವವರಿಗೆ ಸರ್ಕಾರಿ ನೌಕರರ ಮಾದರಿಯ ಸವಲತ್ತು ನೀಡುವ ಸಂಬಂಧದ ತೀರ್ಮಾನಕ್ಕೆ ನಿಯಮಾವಳಿ ರಚಿಸುವುದು. 216 ಖಜಾನೆ ಕಟ್ಟಡಗಳ ನವೀಕರಣಕ್ಕೆ 36.58 ಕೋಟಿ ರೂ. ಬಿಡುಗಡೆ, ದೊಡ್ಡಬಳ್ಳಾಪುರದ ಚಿಂಗಾರಹಳ್ಳಿಯ ಸ್ವಂತ ಜಮೀನಿನಲ್ಲಿ ಘನತ್ಯಾಜ್ಯ ಸಂಸ್ಕರಣೆ ಮತ್ತು ನಿರ್ವಹಣೆ ಘಟಕ ತೆರೆಯಲು ಎಂಎಸ್‌ಜಿಪಿ ಸಂಸ್ಥೆಗೆ ಅನುಮತಿ ನೀಡುವುದು. ಖಾಸಗಿ ವೈದ್ಯ, ದಂತ ವೈದ, ನರ್ಸಿಂಗ್ ಕಾಲೇಜುಗಳ ಸ್ಥಾಪನೆ ಪ್ರಸ್ತಾವನೆಗಳ ಬಗ್ಗೆ ಪರಿಶೀಲಿಸಲು ಸಂಪುಟ ಉಪ ಸಮಿತಿ ರಚನೆ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.












Click it and Unblock the Notifications