C.T.Ravi: ಬಂಧನದ ಬಳಿಕ ಸಿ.ಟಿ.ರವಿ ಸ್ಫೋಟಕ ಮಾಹಿತಿ, ವಿಡಿಯೋ ಹಂಚಿಕೊಂಡು ಹೇಳಿದ್ದೇನು?
ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಬೆಳಗಾವಿ ಅಧಿವೇಶನದ ಕಲಾಪದ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಸಿ, ನಿಂದಿಸಿದ ಆರೋಪದ ಮೇರೆಗೆ ಹಿರೇಬಾಗೇವಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧನದ ಬೆನ್ನಲ್ಲೇ ಸಿ.ಟಿ.ರವಿ ಅವರು ವಿಡಿಯೋದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸುಮಾರು 8 ಗಂಟೆಗೆ ನನ್ನನ್ನು ಖಾನಾಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದರು. ನನ್ನ ಮೇಲೆ ಯಾವ ಕೇಸ್ ದಾಖಲಾಗಿದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ನನಗೂ ಅವರು ತಿಳಿಸಿಲ್ಲ. ನಾನು ಕೊಟ್ಟಿರುವ ದೂರನ್ನು ಗಂಟೆಗಟ್ಟಲೆ ಆದರೂ ಸ್ವೀಕಾರ ಮಾಡಿಲ್ಲ, ಅವರು ನನ್ನ ದೂರಿಗೆ ಸ್ಪಂದಿಸುತ್ತಿಲ್ಲ ಎಂದು ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಈಗ ಇಲ್ಲಿಂದ ಇನ್ನೆಲ್ಲಿಗೋ ನನ್ನನ್ನು ಕರೆದುಕೊಂಡು ಹೋಗುವ ಸಂಚು ನಡೆಸುತ್ತಿದ್ದಾರೆ. ಅದೂ ನನಗೆ ಗೊತ್ತಿಲ್ಲ. ನನ್ನ ಜೀವಕ್ಕೆ ಅಪಾಯವಿದೆ. ನನ್ನ ಜೀವಕ್ಕೆ ಏನಾದರೂ ಅಪಾಯ ಆದರೆ, ಅದಕ್ಕೆ ಈ ಕಾಂಗ್ರೆಸ್ ಸರ್ಕಾರವೇ ಕಾರಣ, ಅದಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ ಹೊತ್ತಿಕೊಳ್ಳಬೇಕು. ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ, ಸುಳ್ಳು ದೂರು ದಾಖಲಿಸಿ, ನನ್ನ ಕೊಲೆಗೆ ಸಂಚು ನಡೆಸಿದ್ದಾರೆ ಎಂದು ಸಿ.ಟಿ.ರವಿ ಆರೋಪ ಮಾಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಈಗಾಗಲೇ ಸಭಾಪತಿಗಳಿಗೂ ದೂರು ನೀಡಿದ್ದೇನೆ. ನಾನು ಪೊಲೀಸ್ ಠಾಣೆಗೆ ಬಂದು ಹಲವು ಗಂಟೆಗಳಾದರೂ ಏನು ದೂರು ದಾಖಲಿಸಿದ್ದಾರೆ ಎಂದು ಹೇಳೇ ಇಲ್ಲ. ನನ್ನನ್ನು ಹೀನಾಯವಾಗಿ ನಡೆಸಿಕೊಳ್ಳುವ ಕೆಲಸ ಮಾಡುತ್ತಿದೆ. ನನ್ನ ಜೀವಕ್ಕೆ ಏನಾದರೂ ಅಪಾಯ ಆದರೆ, ಅದಕ್ಕೆ ಪೊಲೀಸರು, ರಾಜ್ಯ ಸರ್ಕಾರ, ವಿಶೇಷವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಡಿ.ಕೆ.ಶಿವಕುಮಾರ್ ಅವರ ತಂಡವೇ ಇದಕ್ಕೆಲ್ಲ ಕಾರಣ ಎಂದು ದೂರಿದ್ದಾರೆ.

ಇಲ್ಲಿ ಎಲ್ಲವೂ ನಿಗೂಢವಾಗಿದೆ. ನನ್ನನ್ನ ಯಾವುದೋ ಕ್ರಿಮಿನಲ್‌ಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ಅವರ ನಡೆ ಕೂಡ ಹಲವು ಅನುಮಾನಗಳನ್ನು ಹುಟ್ಟಿಸಿದೆ. ನಾನೊಬ್ಬ ಜನಪ್ರತಿನಿಧಿಯಾಗಿ ಕೆಲಸ ಮಾಡಿದವನು, ನಾನು ಕೊಟ್ಟ ದೂರಿಗೆ ಎಫ್‌ಐಆರ್ ದಾಖಲಿಸಲು ಮೀನಮೇಷ ಎಣಿಸುತ್ತಿದ್ದಾರೆ. ಈ ಹಿಂದೆ ತುರ್ತು ಪರಿಸ್ಥಿತಿ ಕಾಲಘಟ್ಟದಲ್ಲಿ ನಡೆದುಕೊಂಡಂತೆ ನನ್ನ ವಿಚಾರದಲ್ಲೂ ನಡೆದುಕೊಳ್ಳುತ್ತಿದ್ದಾರೆ ಎಂದು ಸಿ.ಟಿ.ರವಿ ವಿಡಿಯೋ ಮೂಲಕ ತಿಳಿಸಿದ್ದಾರೆ.
ಮತ್ತೊಂದು ವಿಡಿಯೋ ಹಂಚಿಕೊಂಡಿರುವ ಸಿ.ಟಿ.ರವಿ ಅವರು, ಪೊಲೀಸ್ ಕಸ್ಟಡಿಯಲ್ಲಿ ತಲೆಗೆ ಆದ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು ಮೂರು ಗಂಟೆ ತೆಗೆದುಕೊಂಡ ಕರ್ನಾಟಕ ಪೊಲೀಸರು, ಈಗ ಕಳೆದ ಐದಾರು ಗಂಟೆಗಳಿಂದ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಸುತ್ತಾಡಿಸುತ್ತಿದ್ದಾರೆ. ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಫೋನ್‌ನಲ್ಲಿ ಮಾತುಕತೆ ನಡೆಸುತ್ತಾ ಏನೋ ಷಡ್ಯಂತ್ರ ಮಾಡುತ್ತಿದ್ದಾರೆ. ನನಗಾಗುವ ಯಾವುದೇ ತೊಂದರೆಗೆ ಪೊಲೀಸ್ ಇಲಾಖೆ ಹಾಗು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪ ಮಾಡಿದ್ದಾರೆ.
ಸಿ.ಟಿ.ರವಿ ಕೊಲೆಗೆ ಯತ್ನ: ಬಿಜೆಪಿ ಆರೋಪ
ಒಬ್ಬ ಶಾಸಕನನ್ನೇ ಕೊಲೆ ಮಾಡಲು ಯತ್ನಿಸುತ್ತಿದೆಯೇ ಕಾಂಗ್ರೆಸ್ ಸರ್ಕಾರ? ಎಂದು ಬಿಜೆಪಿ ಪ್ರಶ್ನಿಸಿದೆ. ಬಂಧಿತನಾದ ಶಾಸಕರನ್ನು ಒಂದು ಪೊಲೀಸ್ ಠಾಣೆಯಿಂದ ಮತ್ತೊಂದು ಪೊಲೀಸ್ ಠಾಣೆಗೆ ಅಕ್ರಮವಾಗಿ ಕರೆದುಕೊಂಡು ಹೋಗಿ ದಾರಿ ಮಧ್ಯೆ ಎನ್‌ಕೌಂಟರ್ ಮಾಡಲು ಯೋಜನೆ ರಾಜ್ಯ ಸರ್ಕಾರ ರೂಪಿಸಿತ್ತೇ ಎನ್ನುವ ಅನುಮಾನ ಕಾಡುತ್ತಿದೆ ಎಂದು ಆರೋಪ ಮಾಡಿದೆ.
ದೆಹಲಿಯಲ್ಲಿ ವಿಪಕ್ಷ ನಾಯಕ ಬಿಜೆಪಿ ಸಂಸದರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರ ವಿಧಾನ ಪರಿಷತ್ ಸದಸ್ಯರು ಮತ್ತು ಮಾಜಿ ಸಚಿವ ಸಿ.ಟಿ.ರವಿ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಪೊಲೀಸ್ ಇಲಾಖೆಯ ಮೂಲಕ ಮರ್ಡರ್ ಮಾಡಿಸಲು ಪ್ರಯತ್ನ ನಡೆಸಿರುವುದು ಖಂಡನೀಯ. ಒಬ್ಬ ಮಾಜಿ ಸಚಿವ, ಹಾಲಿ ಪರಿಷತ್ ಸದಸ್ಯರ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಕ್ಷರಶಃ ಭಯೋತ್ಪಾದಕರಂತೆ ನಡೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.












Click it and Unblock the Notifications