ಅಶೋಕ ಗಸ್ತಿ ಅಕಾಲಿಕ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಡಿ.1ರಂದು ಉಪಚುನಾವಣೆ
ನವದೆಹಲಿ, ನವೆಂಬರ್ 02: ಕರ್ನಾಟಕ ಸಂಸದ ಅಶೋಕ ಗಸ್ತಿ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಡಿಸೆಂಬರ್ 1 ರಂದು ಉಪಚುನಾವಣೆ ನಡೆಯಲಿದೆ.
ರಾಜ್ಯಸಭೆಯ ಒಂದು ಸ್ಥಾನಕ್ಕೆ ಡಿಸೆಂಬರ್ 1 ರಂದು ಮತದಾನ ಹಾಗೂ ಮತ ಎಣಿಕೆ ನಡೆಯಲಿದೆ.
ಈ ಕುರಿತು ಕೇಂದ್ರ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ. ಅಶೋಕ್ ಗಸ್ತಿಯವರು ಸೆಪ್ಟೆಂಬರ್ 17 ರಂದು ಕೊರೊನಾ ಸೋಂಕಿನಿಂದಾಗಿ ನಿಧನರಾಗಿದ್ದರು.

ಅವರ ರಾಜ್ಯಸಭಾ ಅವಧಿ 2026ರ ಜೂನ್‌ವರೆಗೆ ಇತ್ತು. ಉಪ ಚುನಾವಣೆಗೆ ನವೆಂಬರ್ 11 ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಲಾಗಿದೆ. ಮತದಾನ ಪೂರ್ಣಗೊಂಡ ಒಂದು ಗಂಟೆಯ ನಂತರ ಮತ ಎಣಿಕೆ ಕಾರ್ಯ ನಡೆಯಲಿದೆ.
ಜುಲೈ 23 ರಂದು ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಗಸ್ತಿ, ಕಳೆದ ರಾಜ್ಯಸಭಾ ಅಧಿವೇಶನದಲ್ಲಿ ಭಾಗಿಯಾಗಬೇಕಿತ್ತು.
ಆದರೆ ಅವರಿಗೆ ಸೆಪ್ಟೆಂಬರ್ 2 ರಂದು ಕೊರೊನಾ ದೃಢಪಟ್ಟಿದ್ದರಿಂದ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸೆಪ್ಟೆಂಬರ್ 17ರಂದು ಕೊನೆಯುಸಿರೆಳೆದರು.
ಲಿಂಗಸಗೂರಿನ ಕೃಷ್ಣಯ್ಯ ಹಾಗು ವೆಂಕಮ್ಮ ಎಂಬ ದಂಪತಿಗಳ ಎರಡನೆಯ ಪುತ್ರನಾಗಿರುವ ಗಸ್ತಿ 1965 ರಲ್ಲಿ ಜನಿಸಿದ್ದರು. ಹಿಂದುಳಿದ ವರ್ಗದವರಾಗಿದ್ದ ಅಶೋಕ ಗಸ್ತಿ ಶಾಲಾ ದಿನಗಳಲ್ಲಿ ಎಬಿವಿಪಿ ಕಾರ್ಯಕರ್ತರಾಗಿ ವಿದ್ಯಾರ್ಥಿ ಸಂಘಟನೆಯನ್ನು ತೊಡಗಿಕೊಂಡಿದ್ದರು.












Click it and Unblock the Notifications