ನಾನು ಸತ್ಯ ಹರಿಶ್ಚಂದ್ರ ಅಂತ ಸಾಬೀತು ಮಾಡಿಕೊಳ್ಳಲು ಡಿ ಕೆ ಶಿವಕುಮಾರ್ ಅವಕಾಶ ಇದೆ: ವಿಜಯೇಂದ್ರ
ಬೆಂಗಳೂರು, ನವೆಂಬರ್ 24: ಡಿ ಕೆ ಶಿವಕುಮಾರ್ ಅವರಿಗೆ ಈಗ ಗೋಲ್ಡನ್ ಅವಕಾಶ ಇದೆ. ಡಿ ಕೆ ಶಿವಕುಮಾರ್ ಅವರು ತಾವು ಸತ್ಯ ಹರಿಶ್ಚಂದ್ರರು ಅಂತ ಸಾಬೀತು ಮಾಡುವ ಅವಕಾಶ ಇದೆ. ಜನತೆಯ ಮುಂದೆ ನೀವು ತಪ್ಪು ಮಾಡಿಲ್ಲ ಅಂತ ತನಿಖೆ ಎದುರಿಸಿ ತೋರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಈ ಕುರಿತು ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ರಾಜ್ಯ ಸಚಿವಸಂಪುಟ ಕೈಗೊಂಡ ನಿರ್ಧಾರವು ಸಂಪೂರ್ಣವಾಗಿ ಕಾನೂನುಬಾಹಿರ ಎಂದು ಆಕ್ಷೇಪಿಸಿದರು.

ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ಆದಾಗ ಬೆಂಗಳೂರು ಮತ್ತು ದೇಶದ ವಿವಿಧೆಡೆ ಲಭಿಸಿದ ಹಣದ ವಿಷಯ ಎಲ್ಲರಿಗೂ ತಿಳಿದಿದೆ. ತದನಂತರ ಜಾರಿ ನಿರ್ದೇಶನಾಲಯವು (ಇಡಿ) ಕೂಡ ಹಲವು ವರ್ಷಗಳಿಂದ ತನಿಖೆ ನಡೆಸುತ್ತಿದೆ.
ಕ್ಯಾಬಿನೆಟ್ ತೀರ್ಮಾನವು ಸಂಪೂರ್ಣವಾಗಿ ತಪ್ಪು ನಿರ್ಧಾರ ಮತ್ತು ಕಾನೂನುಬಾಹಿರ ಎಂದು ಅವರು ಟೀಕಿಸಿದರು. ಕಾಂಗ್ರೆಸ್ ಪಕ್ಷದ ಈ ನಿರ್ಧಾರ ದುರದೃಷ್ಟಕರ ಮತ್ತು ಬಿಜೆಪಿ ಈ ನಿರ್ಧಾರವನ್ನು ಖಂಡಿಸುತ್ತದೆ. ಇದು ಕಾನೂನಿನ ವಿರುದ್ಧ ತೆಗೆದುಕೊಂಡ ನಿರ್ಧಾರ ಎಂದು ಟೀಕಿಸಿದರು.
ಡಿ.ಕೆ.ಶಿವಕುಮಾರ್ ಅವರು ಯಾಕಾಗಿ ತನಿಖೆಗೆ ಭಯ ಪಡುತ್ತಾರೆ? ಅವರಿಗೆ ಕಾನೂನಿನ ಮೇಲೆ ವಿಶ್ವಾಸ ಇಲ್ಲವೇ? ತಾವು ಹಲವು ವರ್ಷಗಳಿಂದ ನಿರಂತರವಾಗಿ ಕಾನೂನು ಹೋರಾಟ ಮಾಡುತ್ತ ಬರುತ್ತಿದ್ದೀರಿ. ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಜವಾಬ್ದಾರಿಯ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಪ್ರಾಮಾಣಿಕವಾಗಿ ಇದ್ದರೆ ಕ್ಯಾಬಿನೆಟ್ ಕೈಗೊಳ್ಳುವ ಈ ತೀರ್ಮಾವನ್ನು ವಿರೋಧಿಸಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರು ಕಾನೂನು ಪ್ರಕ್ರಿಯೆಯ ಮೇಲಿನ ವಿಶ್ವಾಸ ಕಳಕೊಂಡಂತಿದೆ ಎಂದು ಆಕ್ಷೇಪಿಸಿದರು. ರಾಜ್ಯ ಸರಕಾರವು ಮಾಡಿದ ಕ್ಯಾಬಿನೆಟ್ ತೀರ್ಮಾನವನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದ ಅವರು, ಇದರ ವಿರುದ್ಧ ಪಕ್ಷದ ಮುಂದಿನ ಕ್ರಮವನ್ನು ಹಿರಿಯರ ಜೊತೆ ಕುಳಿತು ಚರ್ಚಿಸಿ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಡಿ ಕೆ ಶಿವಕುಮಾರ್ ಆದಾಯ ಮೀರಿದ ಗಳಿಸಿದ್ದಾರೆ ಅಂತ ಬಹಿರಂಗವಾಗಿ ಗೊತ್ತಾಗಿದೆ. ಸರ್ಕಾರ ಇಂಥ ಕೆಟ್ಟ ನಿರ್ಧಾರದಿಂದ ಹಿಂದಕ್ಕೆ ಸರಿಯಲಿ. ಡಿ ಕೆ ಶಿವಕುಮಾರ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮೂಗು ತೂರಿಸಬಾರದು. ಈ ಮೂಲಕ ಸರ್ಕಾರ ದೇಶಕ್ಕೆ ಯಾವ ಸಂದೇಶ ಕೊಡ್ತಿದೆ? ಅಂತ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದರು.
ಸರ್ಕಾರದ ಈ ಸಂಪುಟ ನಿರ್ಧಾರವನ್ನು ಬಿಜೆಪಿ ಬಲವಾಗಿ ವಿರೋಧಿಸುತ್ತದೆ. ಇದರ ವಿರುದ್ಧ ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಅಂತ ಚರ್ಚೆ ನಡೆಸಿ ನಿರ್ಧರಿಸಲಿದೆ. ನಮ್ಮ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರ ರಾಜಕೀಯ ಪ್ರೇರಿತ ಆಗಿರಲಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ಆಗಿದೆ ಅನ್ನೋ ಮಾಹಿತಿ ಆಧಾರದಲ್ಲಿ ಹಿಂದೆ ಸಿಬಿಐಗೆ ತನಿಖೆಗೆ ಅನುಮತಿ ಕೊಡಲಾಗಿತ್ತು. ಡಿಕೆಶಿ ಪ್ರಕರಣ ಬಗ್ಗೆ ಸಿಬಿಐ ಜತೆ ಐಟಿ, ಇಡಿ ಸಂಸ್ಥೆಗಳೂ ತನಿಖೆ ನಡೆಸ್ತಿವೆ. ಆದರೆ ಈ ಹಂತದಲ್ಲಿ ಸಂಪುಟ ನಿರ್ಧಾರ ಕೈಗೊಂಡಿರೋದು ತಪ್ಪು ಎಂದು ಹೇಳಿದರು.
ಕಬ್ಬು ಬೆಳೆಗಾರರ ಸಮಸ್ಯೆ, ಸಚಿವ ಜಮೀರ್ ಅಹಮದ್ ಅವರ ಅಸಂಬದ್ಧ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಜಮೀರ್ ಅಹಮದ್ ಹೇಳಿಕೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ, ಹಿಂದಿನ ಎಜಿ ಪ್ರಭುಲಿಂಗ ನಾವದಗಿಯವರ ವರದಿ ಬಗ್ಗೆ ನನಗೆ ಗೊತ್ತಿಲ್ಲ. ನಾನು ಇನ್ನೂ ಆ ವರದಿ ನೀಡಿಲ್ಲ. ಆದರೆ, ಹಿಂದಿನ ನಮ್ಮ ಸರ್ಕಾರ ರಾಜಕೀಯ ದ್ವೇಷಕ್ಕಾಗಿ ಇದರ ಬಗ್ಗೆ ತೀರ್ಮಾನಿಸಿಲ್ಲ ಎಂದು ಹೇಳಿದರು.












Click it and Unblock the Notifications