ವಿಜಯೇಂದ್ರ ಹೋದಲೆಲ್ಲಾ ಜಯ, ಅವರು ಬಿಜೆಪಿಯ ದೊಡ್ಡ 'ಬಾಹುಬಲಿ'
ಬೆಂಗಳೂರು, ನ 15: ಶಿರಾ ಕ್ಷೇತ್ರದ ಉಪಚುನಾವಣೆಯಲ್ಲೂ ಬಿಜೆಪಿ ಗೆದ್ದನಂತರ ಪಕ್ಷದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವರ್ಚಸ್ಸು ಇನ್ನಷ್ಟು ಹೆಚ್ಚಿದೆ. ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಉಪಚುನಾವಣೆಯಲ್ಲೂ ಪಕ್ಷ ಅವರಿಗೇ ಸಾರಥ್ಯ ನೀಡಲಿದೆಯಾ ಎಂದು ಕಾದು ನೋಡಬೇಕಿದೆ.
ಈ ನಡುವೆ ಸಚಿವ ಬಿ.ಶ್ರೀರಾಮುಲು, ವಿಜಯೇಂದ್ರ ಬಗ್ಗೆ ವಿಶ್ವಾಸದ ಮಾತನಾಡಿದ್ದು, ಅವರು ಬಿಜೆಪಿಯ ಬಹುದೊಡ್ಡ ಬಾಹುಬಲಿ ಎಂದು ಹೊಗಳಿದ್ದಾರೆ. "ಕೆಲವು ದಿನಗಳ ಹಿಂದೆ ಶಿರಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಒಂದು ಮಾತು ಹೇಳಿದ್ದೆ, ವಿಜಯೇಂದ್ರ ಹೋದಲೆಲ್ಲಾ ಪಕ್ಷಕ್ಕೆ ಜಯ ಎಂದು, ಅದು ನಿಜವಾಗಿದೆ"ಎಂದು ಶ್ರೀರಾಮುಲು ಹೇಳಿದ್ದಾರೆ.
"ಉಪಚುನಾವಣೆ ನಡೆಯುವ ಕ್ಷೇತ್ರದ ಸಾರಥ್ಯ ವಹಿಸಿಕೊಂಡು ವಿಜಯೇಂದ್ರ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಒಂದು ವಿಷನ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇದು ಕೂಡಾ ವರ್ಕೌಟ್ ಆಗುತ್ತಿದೆ"ಎಂದು ಶ್ರೀರಾಮುಲು ಹೇಳಿದ್ದಾರೆ.

"ಈ ಚುನಾವಣೆಯ ಫಲಿತಾಂಶದ ನಂತರ ಒಂದಂತೂ ಸ್ಪಷ್ಟವಾಗಿದೆ. ಜನರು ಅಭಿವೃದ್ದಿ ಮತ್ತು ಬಿಜೆಪಿ ಪರ ಇದ್ದಾರೆ. ನಾನು ಎರಡೂ ಕ್ಷೇತ್ರದ ಮತದಾರರಿಗೆ ಮತ್ತು ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ"ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
"ಬಿಹಾರದಲ್ಲಿ ಹದಿನೈದು ವರ್ಷಗಳಿಂದ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಇದ್ದಾರೆ. ಎನ್ದಿಎ ಸರಕಾರದ ಅಭಿವೃದ್ದಿ ಕೆಲಸದಿಂದಾಗಿ ನಮ್ಮ ಮೈತ್ರಿಕೂಟಕ್ಕೆ ಮತ್ತೆ ಜಯ ಸಿಕ್ಕಿದೆ. ಸಮೀಕ್ಷೆಯಲ್ಲಿ ಬಂದ ವರದಿಗಳು ಉಲ್ಟಾ ಹೊಡೆದಿದೆ"ಎಂದು ಶ್ರೀರಾಮುಲು ಈ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು.
"ನರೇಂದ್ರ ಮೋದಿ ಒಬ್ಬರು ಸಮರ್ಥ ನಾಯಕರು. ಹಾಗಾಗಿ, ಬಿಹಾರದ ಭಾಗದಲ್ಲಿ ಹೆಣ್ಣುಮಕ್ಕಳು ಹೆಚ್ಚು ಬಿಜೆಪಿ ಪರ ಒಲವು ತೋರಿಸಿದ್ದಾರೆ. ಉಪಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ಸಿನವರು ಆಡಬಾರದ ಮಾತೆನ್ನೆಲ್ಲಾ ಆಡಿದ್ದು , ಅವರಿಗೇ ರಿವರ್ಸ್ ಆಯಿತು"ಎಂದು ಶ್ರೀರಾಮುಲು, ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ.












Click it and Unblock the Notifications