BY Vijayendra: ದಾಖಲೆಗಳಿದ್ದರೆ ಕೂಡಲೇ ಬಿಡುಗಡೆ ಮಾಡಲು ಯತ್ನಾಳರಿಗೆ ವಿಜಯೇಂದ್ರ ಸವಾಲು
ಬೆಂಗಳೂರು, ಡಿಸೆಂಬರ್ 02: ನನ್ನ ವಿರುದ್ಧ ಏನೇ ದಾಖಲೆಗಳಿದ್ದರೂ ಒಂದು ಕ್ಷಣವೂ ತಡ ಮಾಡದೆ ಬಿಡುಗಡೆ ಮಾಡಿ ಎಂದು ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಸವಾಲು ಹಾಕಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರಿಗೆ ಅವಮಾನ ಆಗುವಂತೆ ಯಾರೂ ನಡೆದುಕೊಳ್ಳದಿರಿ. ಪಕ್ಷಕ್ಕೆ ಅಗೌರವ ಆಗುವಂತೆ ಯಾರೂ ಕೂಡ ಮಾಧ್ಯಮಗಳ ಮುಂದೆ ಮಾತನಾಡಬಾರದು. ನಮ್ಮ ನಡವಳಿಕೆ, ಹೇಳಿಕೆಗಳು ಸಂಘಟನೆಗೆ ಪೂರಕವಾಗಿ ಇರಬೇಕೇ ಹೊರತು ಸಂಘಟನೆಗೆ ತೊಂದರೆ ಕೊಡುವ ಕೆಲಸವನ್ನು ನಾನೂ ಮಾಡಬಾರದು, ಮತ್ತೊಬ್ಬನೂ ಮಾಡಬಾರದು ಎಂದು ತಿಳಿಸಿದರು.

ವಿಜಯೇಂದ್ರ ಬದಲಾವಣೆ ಪ್ರಯತ್ನ ಮಾಡಲಿ. ಇನ್ನೂ ಹೆಚ್ಚು ಜನರನ್ನು ಸೇರಿಸಿಕೊಳ್ಳಲಿ. ಅದರ ಬಗ್ಗೆ ಅಭ್ಯಂತರವಿಲ್ಲ. ರಾಜ್ಯದಲ್ಲಿ ಸಂಘಟನೆ ಯಾವ ದಿಕ್ಕಿನಲ್ಲಿ ಹೋಗಬೇಕೆಂಬ ಬಗ್ಗೆ ಪಕ್ಷದ ವರಿಷ್ಠರಿಗೆ ಸ್ಪಷ್ಟತೆ ಇದೆ. ಅವರ ಅಕ್ಕಪಕ್ಕ ಇರುವವರಿಗೆ ವಿಜಯೇಂದ್ರನ ಬಗ್ಗೆ ಬೇಸರ ಇಲ್ಲ ಎಂದು ಹೇಳಿದರು.
ಚಾಡಿ ಹೇಳುವುದಾಗಲೀ, ಯತ್ನಾಳರನ್ನು ಪಕ್ಷದಿಂದ ಹೊರಕ್ಕೆ ಕಳಿಸಬೇಕೆಂಬ ಒತ್ತಾಯ ಮಾಡಿಲ್ಲ. ಅದರ ಅವಶ್ಯಕತೆ ನನಗಿಲ್ಲ ಎಂದ ಬಿ.ವೈ.ವಿಜಯೇಂದ್ರ ಅವರು, ಕಳೆದ 3-4 ತಿಂಗಳುಗಳಲ್ಲಿ ನಾವು ಆಡಳಿತ ಪಕ್ಷವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದ ವಿರುದ್ಧ ಹೋರಾಟಗಳಲ್ಲಿ ಮುಖ್ಯಮಂತ್ರಿಗಳನ್ನು ಕಟ್ಟಿ ಹಾಕುವ ಕೆಲಸ ಯಶಸ್ವಿಯಾಗಿ ಮಾಡಿದ್ದೇವೆ.
ರಾಜ್ಯದ ಜನರು ಭ್ರಷ್ಟ ಕಾಂಗ್ರೆಸ್ ಸರಕಾರ ಎನ್ನುತ್ತಿದ್ದಾರೆ. ಇದರ ನಡುವೆ, ನಮ್ಮ ಕೆಲವು ಮುಖಂಡರು ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ರಾಜ್ಯ ಕಂಡ ಧೀಮಂತ ನಾಯಕ, ರೈತ ಮುಂದಾಳು ಯಡಿಯೂರಪ್ಪರ ಬಗ್ಗೆ ಮನಬಂದಂತೆ ಮಾತನಾಡುತ್ತಿದ್ದಾರೆ. ಇನ್ನೂ ಕೆಲವರು ಯತ್ನಾಳರ ಹೆಗಲ ಮೇಲೆ ಗನ್ ಇಟ್ಟು ಗುಂಡು ಹಾರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಒಳ್ಳೆಯದಾಗುವುದಿಲ್ಲ, ಉಪ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದ ಕಾರ್ಯಕರ್ತರು ಬಹಳಷ್ಟು ನೊಂದಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಆಡಳಿತ ಪಕ್ಷವನ್ನು ಒಗ್ಗಟ್ಟಾಗಿ ಎದುರಿಸಬೇಕಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು 3 ಉಪಚುನಾವಣೆಗಳಲ್ಲಿ ಗೆದ್ದಿದೆ. ವಕ್ಫ್ ವಿಚಾರದಲ್ಲಿ ಫ್ರೀಡಂ ಪಾರ್ಕಿನಲ್ಲಿ ಮೊನ್ನೆ ನಡೆದ ಹೋರಾಟದಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪರಮಪೂಜ್ಯ ಚಂದ್ರಶೇಖರನಾಥ ಮಹಾಸ್ವಾಮೀಜಿಗಳು ಮಾತನಾಡಿದ ಕೆಲವು ವಿಷಯಗಳ ಬಗ್ಗೆ ರಾಜ್ಯ ಸರಕಾರ ಎಫ್‍ಐಆರ್ ದಾಖಲು ಮಾಡಿಸಿದೆ. ಸ್ವಾಮೀಜಿಗಳು ಕ್ಷಮೆಯನ್ನೂ ಕೇಳಿದ್ದಾರೆ. ಆ ಹೋರಾಟದಲ್ಲಿ, ಸಭೆಯಲ್ಲಿ ನಾನೂ ಪಾಲ್ಗೊಂಡಿದ್ದೆ. ಮಠಮಾನ್ಯಗಳು, ರೈತರ ಜಮೀನನ್ನು ಕಸಿದುಕೊಳ್ಳುವ ಕೆಲಸದ ಓಲೈಕೆ ರಾಜಕಾರಣದ ಕುರಿತು ಬೇಸತ್ತು ಸ್ವಾಮೀಜಿಗಳು ಮಾತನಾಡಿದ್ದಾರೆ ಎಂದು ವಿವರಿಸಿದರು.
ಅದನ್ನು ಗಂಭೀರವಾಗಿ ಪರಿಗಣಿಸಿ ಸ್ವಾಮೀಜಿಗಳ ವಿರುದ್ಧ ಎಫ್‍ಐಆರ್ ದಾಖಲು ಮಾಡಿದ್ದು ಖಂಡಿತ ಸರಿಯಲ್ಲ. ಸ್ವಾಮೀಜಿಗಳ ಹೇಳಿಕೆಯ ಹಿನ್ನೆಲೆಯನ್ನೂ ಅರ್ಥೈಸಿಕೊಳ್ಳಬೇಕು. ರಾಜ್ಯ ಸರಕಾರವು ವಿಪಕ್ಷದವರಷ್ಟೇ ಅಲ್ಲದೆ, ಯಾರ್ಯಾರು ಈ ಸರಕಾರದ ವಿರುದ್ಧ ಮಾತನಾಡುತ್ತಾರೋ ಅವರ ವಿರುದ್ಧ, ಮಠಮಾನ್ಯಗಳ ವಿರುದ್ಧ ಎಫ್‍ಐಆರ್ ದಾಖಲಿಸಿ ತೊಂದರೆ ಕೊಡುತ್ತಿದೆ. ಈ ಸರಕಾರಕ್ಕೆ ಒಳ್ಳೆಯದಾಗುವುದಿಲ್ಲ ಎಂದು ತಿಳಿಸಿದರು.
ಹಾದಿಯಲ್ಲಿ ಬೀದಿಯಲ್ಲಿ ಮಾತನಾಡಿ ಪಕ್ಷ ಸಂಘಟನೆಗೆ ಅಡ್ಡಿ ಮಾಡುತ್ತಿರುವವರ ವಿರುದ್ಧ ಬಿಗಿಯಾದ ಕ್ರಮ ಕೈಗೊಳ್ಳಬೇಕೆಂಬ ಅಪೇಕ್ಷೆ ಕಾರ್ಯಕರ್ತರಲ್ಲಿದೆ ಎಂದರು. ನನ್ನ ನಾಯಕತ್ವ ಬದಲಾವಣೆಗೆ ಮನವಿ ಮಾಡಬಾರದೆಂದು ನಾನು ಹೇಳುವುದಿಲ್ಲ; ಆ ಮನವಿಯನ್ನು ಎಲ್ಲಿ, ಯಾರ ಮುಂದೆ ಮಾಡಬೇಕು? ಅಷ್ಟಾದರೂ ಸ್ಪಷ್ಟತೆ ಇರಬೇಕಲ್ಲವೇ ಎಂದು ಪ್ರಶ್ನಿಸಿದರು. ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಗುರಿ ನನ್ನ ಮುಂದಿದೆ. ಯಡಿಯೂರಪ್ಪ, ವಿಜಯೇಂದ್ರ ಹೊಂದಾಣಿಕೆ ರಾಜಕೀಯ ಮಾಡಿಕೊಂಡರೆಂದು ಹೇಳಿ ಸಂಘಟನೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಅವರನ್ನು ಕಾರ್ಯಕರ್ತರು ಮತ್ತು ಭಗವಂತನು ಒಳ್ಳೆಯದು ಮಾಡಲು ಸಾಧ್ಯವಿಲ್ಲ ಎಂದರು.












Click it and Unblock the Notifications