ಯಡಿಯೂರಪ್ಪ ಬದಲಾವಣೆ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ!
ಬೆಂಗಳೂರು, ಮಾ. 20: ರಾಜ್ಯದಲ್ಲಿ ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಕುರಿತು ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ಆರಂಭವಾಗಿದೆ.
ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಕೇಂದ್ರ ಬಿಜೆಪಿ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಾಗುವುದು. ಕೇಂದ್ರ ಸಮಿತಿಯು ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಿದೆ. ಇದೇ ವಿಚಾರದ ಕುರಿತು ಕೋರ್ ಕಮಿಟಿ ಸಭೆಗೂ ಮೊದಲು ಮಾತನಾಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು, ಇಂದು ಆಕಾಂಕ್ಷಿಗಳ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಲಾಗುವುದು ಎಂದಿದ್ದಾರೆ.

ಯತ್ನಾಳ್ ಹೇಳಿಕೆ ಕುರಿತು ಅರುಣ್ ಸಿಂಗ್ ಮಾತು
ಇದೇ ಸಂದರ್ಭದಲ್ಲಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳನ್ನು ನಾನಾಗಲೀ, ನಮ್ಮ ಕಾರ್ಯಕರ್ತರಾಗಲೀ ಗಂಭೀರವಾಗಿ ಪರಿಗಣಿಸುವುದಿಲ್ಲ. ಯತ್ನಾಳ್ ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ಅವರು ಮಾತನಾಡುತ್ತಲೇ ಇರುತ್ತಾರೆ ಎಂದು ಸಿಎಂ ಯಡಿಯೂರಪ್ಪ ಅವರ ವಿರುದ್ಧದ ಹೇಳಿಕೆಗಳ ಕುರಿತಂತೆ ಅರುಣ್ ಸಿಂಗ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜೊತೆಗೆ ನೀವೂ ಕೂಡ ಶಾಸಕ ಯತ್ನಾಳ್ ಅವರ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ?
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕರ್ನಾಟಕ ಭೇಟಿಯ ವೇಳೆ ಕಾಂಗ್ರೆಸ್ಸಿಗರು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾಯಿಸುವ ಕುರಿತು ಸುಳ್ಳು ಹೇಳಿದ್ದರು. ಯಡಿಯೂರಪ್ಪ ಅವರು ನಮ್ಮ ಪಕ್ಷದ ನಾಯಕರಾಗಿದ್ದು ಅಂತಹ ಬೆಳವಣಿಗೆಗಳು ಪಕ್ಷದಲ್ಲಿ ನಡೆದಿಲ್ಲ. ಪಕ್ಷದ ಕಾರ್ಯಕರ್ತರು ಅಂತಹ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ನಾಯಕತ್ವ ಬದಲಾವಣೆ ಕುರಿತು ಅರುಣ್ ಸಿಂಗ್ ಸ್ಪಷ್ಟವಾಗಿ ಹೇಳಿದ್ದಾರೆ.

'ಸಿಡಿ' ಕುರಿತು ತಕ್ಷಣ ಕ್ರಮಕೈಗೊಂಡಿದ್ದೇವೆ
ಇನ್ನು 'ಸಿಡಿ' ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅರುಣ್ ಸಿಂಗ್ ಅವರು, ನಿರಂತರ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಮುಖಂಡರು ಆ ವಿಚಾರದಲ್ಲಿ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ. ಪ್ರಕರಣದಲ್ಲಿ ಆರೋಪ ಕೇಳಿಬಂದ ಕೂಡಲೇ ರಮೇಶ್ ಜಾರಕಿಹೊಳಿ ಅವರಿಂದ ರಾಜೀನಾಮೆ ಪಡೆಯಲಾಗಿದೆ. ಆರೋಪ ಬಂದ ತಕ್ಷಣ ರಾಜೀನಾಮೆ ಪಡೆಯುವ ಕ್ರಮ ಬಿಜೆಪಿಯಲ್ಲಿ ಮಾತ್ರ ಇದೆ.
ಕಾಂಗ್ರೆಸ್ ಈ ರೀತಿ ಮಾಡುವುದಿಲ್ಲ. ಆದರೂ, ಕಾಂಗ್ರೆಸ್ ಪಕ್ಷದವರು ರಾಜಕೀಯವಾಗಿ ಸಿಡಿ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅರುಣ್ ಸಿಂಗ್ ಆರೋಪಿಸಿದ್ದಾರೆ. ಆರೋಪ ಬಂದೊಡನೆ ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಟ್ಟಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಷಡ್ಯಂತ್ರ ಹೆಣೆಯುವುದು, ಸುಳ್ಳು ಹೇಳುವುದು ಮತ್ತು ಭ್ರಷ್ಟಾಚಾರ ಮಾಡುವುದು ಕಾಂಗ್ರೆಸ್ಸಿಗರ ಜಾಯಮಾನವೇ ಆಗಿದೆ ಎಂದರು.
Recommended Video

ಕಾಂಗ್ರೆಸ್ ಪಕ್ಷಕ್ಕೆ ಸಮಸ್ಯೆ ಏನು?
ತಮ್ಮ ವಿಚಾರವನ್ನು ಟಿ.ವಿ.ಗಳಲ್ಲಿ ಪ್ರಸಾರ ಮಾಡದಂತೆ ಆರು ಸಚಿವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಕುರಿತು ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್ ಅವರು, ಆರು ಸಚಿವರು ಕೋರ್ಟ್‌ಗೆ ಹೋದರೆ ಕಾಂಗ್ರೆಸ್ ಪಕ್ಷಕ್ಕೆ ಏನು ಸಮಸ್ಯೆ ಇದೆ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದ ದೊಡ್ಡ ದೊಡ್ಡ ನಾಯಕರೇ ಸುಳ್ಳು ಹೇಳುತ್ತಿದ್ದಾರೆ. ಆರು ಸಚಿವರು ತಮ್ಮ ವಿರುದ್ಧ ತೇಜೋವಧೆ ಆಗುವ ಸಾಧ್ಯತೆಯನ್ನು ಗಮನಿಸಿ ಕೋರ್ಟ್ ಮೊರೆ ಹೋಗಿದ್ದಾರೆ. ಅವರ ವಿರುದ್ಧದ ಷಡ್ಯಂತ್ರ ತಡೆಯಲು ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ತಿಳಿಸಿದರು.












Click it and Unblock the Notifications