ಬೆಂಗಳೂರಿಂದ ಹುಬ್ಬಳ್ಳಿಗೆ ಬಸ್ ರೇಟ್ ಜಸ್ಟ್ 6000 ಸಾವಿರ ರೂಪಾಯಿ! ಖಾಸಗಿ ಬಸ್ ಮಾಲೀಕರ ಹಗಲು ದರೋಡೆಗೆ ಕೊನೆ ಇಲ್ವಾ?
ರಜೆ ಬಂದಿದೆ ಒಂದೆರಡು ದಿನ ನಮ್ಮ ಊರಿಗೆ ಹೋಗಿ ಅಪ್ಪ ಮತ್ತು ಅಮ್ಮನ ಯೋಗಕ್ಷೇಮ ವಿಚಾರಿಸಿಕೊಂಡು ಬರೋಣ ಅಂತಾ ಬೆಂಗಳೂರಿನ ಮಂದಿ ಬ್ಯಾಗ್ ರೆಡಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಸ್ ಬುಕ್ ಮಾಡಲು ಮುಂದಾದ ಅವರಿಗೆ ಒಂದು ಕ್ಷಣ ಹೃದಯವೇ ನಿಂತು ಹೋಗಿದೆ ಅಂತಾ ಕಾಣುತ್ತೆ. ಯಾಕಂದ್ರೆ ಖಾಸಗಿ ಬಸ್‌ನ ಮಾಲೀಕರು ಆ ರೀತಿ ದರೋಡೆ ಮಾಡ್ತಾ ಇದ್ದಾರೆ ಅನ್ನೋ ಆರೋಪ ಕೇಳಿಬರುತ್ತಿದೆ. ಎಷ್ಟಂದ್ರೆ ಬೆಂಗಳೂರಿಂದ ಹುಬ್ಬಳ್ಳಿಗೆ ಬಸ್ ರೇಟ್ ಜಸ್ಟ್ 6000 ಸಾವಿರ ರೂಪಾಯಿ ಇದೆ!
ಇನ್ನೇನು ಕ್ರಿಸ್‌ಮಸ್ ಬಂತು, ಹೇಗೋ ಮಂಗಳವಾರ ಒಂದು ರಜೆ ತಗೋಂಡು ಊರಿಗೆ ಹೋದ್ರೆ 3-4 ದಿನ ಊರಲ್ಲೇ ಹಾಯಾಗಿ ಇರಬಹುದು. ಅಪ್ಪ-ಅಮ್ಮ ಮತ್ತು ಕುಟುಂಬ ಸದಸ್ಯರ ಜೊತೆ ಕಾಲ ಕಳೆಯಬಹುದು ಅಂತಾ ಲೆಕ್ಕ ಹಾಕಿ ಊರಿಗೆ ಹೋಗಲು ಬ್ಯಾಗ್ ರೆಡಿ ಮಾಡಿಕೊಂಡಿರುವ ಕನ್ನಡಿಗರಿಗೆ ಬಸ್ ದರ ಆಘಾತ ನೀಡಿದೆ. ಸೋಮವಾರದಿಂದ ಗುರುವಾರದ ತನಕ ಅರ್ಧಕರ್ಧ ರೇಟ್ ಕಡಿಮೆ ಇದ್ದರೆ, ವಾರದ ಅಂತ್ಯಕ್ಕೆ ಡಬಲ್, ತ್ರಿಬಲ್ ರೇಟ್ ಮಾಡಿವೆ ಖಾಸಗಿ ಬಸ್‌ಗಳು! ಇದನ್ನ ನೋಡಿಯೇ ತಲೆ ಸುತ್ತಿಬಿಡುತ್ತೆ.

ಖಾಸಗಿ ಬಸ್‌ಗೆ ಕಡಿವಾಣ ಹಾಕಲ್ವಾ?
ಬಹುತೇಕರಿಗೆ ವರ್ಕ್ ಫ್ರಂ ಹೋಂ ಮುಗಿದ ಅಧ್ಯಾಯ. ಬಹುತೇಕ ಕಂಪನಿ ಆಡಳಿತ ಮಂಡಳಿ ನೌಕರರಿಗೆ ಕಚೇರಿಗೆ ಬರಲು ಆದೇಶ ನೀಡಿವೆ. ಹೀಗಾಗಿ ಬೆಂಗಳೂರಲ್ಲಿ ಬಾಡಿಗೆ ದರ & ಸಂಚಾರ ದಟ್ಟಣೆ ಹೆಚ್ಚಾಗಿದೆ. ಇದೇ ಹೊತ್ತಲ್ಲಿ ಬಸ್ ರೇಟ್‌ಗೆ ಕೂಡ ಕಡಿವಾಣ ಬೀಳುತ್ತಿಲ್ಲ. ವರ್ಕ್ ಫ್ರಂ ಹೋಂ ಇಲ್ಲದ ಕಾರಣ ರಜೆಯಲ್ಲೇ ಊರಿಗೆ ಹೋಗುವವರಿಗೆ ಆಘಾತ ಎದುರಾಗಿದೆ. ಅದರಲ್ಲೂ ಡಿಸೆಂಬರ್ 25ರಂದು ಕ್ರಿಸ್‌ಮಸ್ ಇರುವ ಹಿನ್ನೆಲೆಯಲ್ಲಿ ಊರಿಗೆ ಹೊರಟ್ಟಿದ್ದವರಿಗೆ ಇದೀಗ ಹಾರ್ಟ್ ಅಟ್ಯಾಕ್ ಒಂದು ಬಾಕಿ ಎನ್ನುವಂತಾಗಿದೆ. ಯಾಕಂದ್ರೆ ಒಂದು ಸಾವಿರ ರೂಪಾಯಿ ಇಲ್ಲ 500 ರೂಪಾಯಿ ಇರುತ್ತಿದ್ದ ಬಸ್ ರೇಟ್ ಈಗ 5000 ರೂಪಾಯಿಗೂ ಹೆಚ್ಚಾಗಿದೆ.
ಯಾವ ಯಾವ ಊರಿಗೆ ಎಷ್ಟು ರೇಟ್?
ಅಂದಹಾಗೆ ಸಾಮಾನ್ಯವಾಗಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಲು ಸುಮಾರು 600, 700 ಅಬ್ಬಬ್ಬಾ ಅಂದ್ರೂ 1000 ರೂಪಾಯಿ ತನಕ ರೇಟ್ ಇರುತ್ತಿತ್ತು. ಆದರೆ ಕ್ರಿಸ್‌ಮಸ್ ಕಾರಣ ಖಾಸಗಿ ಬಸ್ ಮಾಲೀಕರಿಂದ ರಾತ್ರಿ ದರೋಡೆ ಶುರುವಾಗಿದೆ ಅಂತಾ ಇದೀಗ ಕನ್ನಡಿಗರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶುಕ್ರವಾರ ಅಂದರೆ ಇಂದು ಬೆಂಗಳೂರಿಂದ ಹುಬ್ಬಳ್ಳಿ ಕಡೆ ಪ್ರಯಾಣ ಮಾಡಲು 5000ರಿಂದ 6000 ಸಾವಿರದ ತನಕ ಬಸ್ ರೇಟ್ ಫಿಕ್ಸ್ ಆಗಿದೆ. ಹೀಗೆ, ಬಸ್ ಟಿಕೆಟ್ ಏರಿಕೆ ಪರಿಣಾಮ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬೆಳಗಾವಿಗೆ ಬಸ್ ರೇಟ್ ಎಷ್ಟು?
ಬೆಂಗಳೂರಿನಿಂದ ಹುಬ್ಬಳ್ಳಿಗೆ ಮಾತ್ರವಲ್ಲ, ಬೆಂಗಳೂರಿನಿಂದ ಬೆಳಗಾವಿಗೆ ಹೋಗುವವರಿಗು ಇದೇ ರೀತಿ ಸಮಸ್ಯೆ ಎದುರಾಗಿದೆ. ಈ ಮೊದಲು ಒಂದು ಸಾವಿರ ರೂಪಾಯಿ ಒಳಗೆ ಬಸ್ ಟಿಕೆಟ್ ದರ ಇರುತ್ತಿತ್ತು. ಆದರೆ ಈಗ ಬೇಕು ಅಂತ 2500 ದಿಂದ 4500 ರೂಪಾಯಿ ತನಕ ಬಸ್ ಟಿಕೆಟ್ ಬೆಲೆ ಏರಿಕೆ ಮಾಡಿದ್ದಾರೆ ಅಂತಾ ಆರೋಪ ಮಾಡಲಾಗುತ್ತಿದೆ. ಈ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಹಾಗೇ ರಾಜ್ಯದ ವಿವಿಧಡೆ ಈ ರೀತಿ ಬಸ್ ಟಿಕೆಟ್ ದರ ಏರಿಕೆ ಕಂಡಿರುವುದು ಗ್ರಾಹಕರನ್ನು ರೊಚ್ಚಿಗೆಬ್ಬಿಸಿದೆ.
ಇದು ಬಸ್ ಪರಿಸ್ಥಿತಿಯಾದರೆ, ಇನ್ನು ರೈಲಿನಲ್ಲಿ ಹೋಗೋಣ ಅಂದರೆ ಮುಂಗಡವಾಗಿ ಬುಕ್ ಮಾಡಲು ಆಗಲ್ಲ ಅಂತಹ ಸ್ಥಿತಿ ಇದೆ. ಇನ್ನು ಟಿಕೆಟ್ ಪಡೆದು ನೇರವಾಗಿ ಹೋಗೋಣ ಅಂದ್ರೆ ಅಲ್ಲೂ ಜನಜಂಗುಳಿ. ಹೀಗಾಗಿ ಲಾಂಗ್ ವೀಕೆಂಡ್ ಬಂದಾಗ ಅಂದ್ರೆ ಸಾಲು ಸಾಲು ರಜೆ ಸಿಕ್ಕಾಗ ಸರ್ಕಾರಿ ಬಸ್ ಸಂಖ್ಯೆ ಹೆಚ್ಚಿಸಬೇಕು ಎಂಬ ಒತ್ತಾಯ ಪ್ರಯಾಣಿಕರದ್ದು. ಖಾಸಗಿ ಸಾರಿಗೆಗಳಿಗೆ ಸರ್ಕಾರ ಖಡಕ್ ಸೂಚನೆ ನೀಡಬೇಕು ಎನ್ನುವ ಆಗ್ರಹ ಕೂಡ ಕೇಳಿಬಂದಿದೆ.











Click it and Unblock the Notifications