Budget 2024; ಕರ್ನಾಟಕದಿಂದ 7 ಪ್ರಮುಖ ರೈಲುಗಳಿಗೆ ಬೇಡಿಕೆ
ಬೆಂಗಳೂರು, ಜನವರಿ 31: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರ ಗುರುವಾರ 2024-25ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ರೈಲ್ವೆ ಬಜೆಟ್ ಅನ್ನು ಸಹ ಸಾಮಾನ್ಯ ಬಜೆಟ್ ಜೊತೆಗೆ ವಿಲೀನ ಮಾಡಲಾಗಿದೆ. ಆದ್ದರಿಂದ ರೈಲ್ವೆ ಇಲಾಖೆಯ ಘೋಷಣೆಗಳನ್ನು ಈ ಬಜೆಟ್‌ನಲ್ಲಿಯೇ ಮಾಡಲಾಗುತ್ತದೆ.
ಲೋಕಸಭೆ ಚುನಾವಣೆ ಎದುರಾಗುವುದರಿಂದ ಮಧ್ಯಂತರ ಬಜೆಟ್ ಅನ್ನು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ. ಚುನಾವಣೆ ಇರುವುದರಿಂದ ಹಲವು ನಿರೀಕ್ಷೆಗಳನ್ನು ಮಾಡಲಾಗಿದೆ.

ಕರ್ನಾಟಕದ ಸಹ ರೈಲ್ವೆ ಯೋಜನೆಗಳ ಕುರಿತು ಹಲವು ನಿರೀಕ್ಷೆ ಹೊಂದಿದೆ. ಹೊಸ ಮಾರ್ಗಗಳು, ಹೊಸ ವಂದೇ ಭಾರತ್ ರೈಲುಗಳು, ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಅನುದಾನ ಹಂಚಿಕೆ, ಹೊಸ ಮಾರ್ಗಗಳ ಸಮೀಕ್ಷೆಗೆ ಒಪ್ಪಿಗೆ ಹೀಗೆ ಅನೇಕ ನಿರೀಕ್ಷೆಗಳನ್ನು ರಾಜ್ಯ ಇಟ್ಟುಕೊಂಡಿದೆ.
7 ಪ್ರಮುಖ ರೈಲುಗಳು; ಟೈಮ್ಸ್ ಆಫ್ ಇಂಡಿಯಾ ಕರ್ನಾಟಕ ರೈಲ್ವೆ ವೇದಿಕೆಯ ಕೆ. ಎಸ್. ಕೃಷ್ಣ ಪ್ರಸಾದ್ ಅವರನ್ನು ಮಾತನಾಡಿಸಿ ಬಜೆಟ್ ನಿರೀಕ್ಷೆಗಳು, ಹೊಸ ರೈಲುಗಳ ಕುರಿತು ವರದಿ ಮಾಡಿದೆ. ಇದರಲ್ಲಿ 7 ಪ್ರಮುಖ ರೈಲುಗಳನ್ನು ಪಟ್ಟಿ ಮಾಡಲಾಗಿದೆ. ಬಜೆಟ್‌ನಲ್ಲಿ ಇದಕ್ಕೆ ಒಪ್ಪಿಗೆ ಸಿಗಲಿದೆಯೇ? ಕಾದು ನೋಡಬೇಕಿದೆ.
1. ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ರೈಲು; ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಒಪ್ಪಿಗೆ ಸಿಕ್ಕಿದೆ. ಪ್ರಾಯೋಗಿಕ ಸಂಚಾರವೂ 2023ರ ನವೆಂಬರ್‌ನಲ್ಲಿ ಪೂರ್ಣಗೊಂಡಿದೆ. ಆದರೆ ರೈಲು ಸಂಚಾರದ ದಿನಾಂಕ ಮಾತ್ರ ಇನ್ನೂ ಘೋಷಣೆಯಾಗಬೇಕಿದೆ.
2. ಬೆಂಗಳೂರು-ಕಲಬುರಗಿ ನಡುವೆ ಪ್ರತಿದಿನ ರಾತ್ರಿ ರೈಲಿನ ನಿರೀಕ್ಷೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಬೆಂಗಳೂರು-ಕಲಬುರಗಿ ನಡುವೆ ಮತ್ತೊಂದು ರೈಲು ಬೇಕು ಎಂದು ಚರ್ಚೆಗಳು ನಡೆಯುತ್ತಿವೆ.
3. ಎಸ್‌ಎಂವಿಟಿ-ಅಯೋಧ್ಯೆ ವಯಾ ಹುಬ್ಬಳ್ಳಿ, ಬೆಳಗಾವಿ ವಾರದಲ್ಲಿ ಎರಡು ಬಾರಿ ಸಂಚಾರ ನಡೆಸುವ ರೈಲಿನ ನಿರೀಕ್ಷೆ ಇದೆ. ಶ್ರೀ ರಾಮಮಂದಿರಕ್ಕೆ ತೆರಳುವ ಭಕ್ತರಿಗೆ ಉಪಯೋಗವಾಗುವ ರೈಲು ಇದಾಗಿದೆ.
4. ಯಶವಂತಪುರ-ಪನ್‌ವೇಲ್ ವಯಾ ಅರಸೀಕೆರೆ, ಹುಬ್ಬಳ್ಳಿ, ಮಡಗಾಂವ್ ನಡುವೆ ವಾರದಲ್ಲಿ ಮೂರು ದಿನ ಸಂಚಾರ ನಡೆಸುವ ರೈಲುಗಳು ಬೇಕು ಎಂಬುದು ಬಜೆಟ್‌ನಲ್ಲಿನ ನಿರೀಕ್ಷೆಗಳಲ್ಲಿ ಒಂದಾಗಿದೆ.
5. ಮೈಸೂರು-ಅಯೋಧ್ಯೆ ವಯಾ ದಾವಣಗೆರೆ, ಕೊಟ್ಟೂರು, ಹೊಸಪೇಟೆ, ವಿಜಯಪುರ ನಡುವೆ ವಾರಕ್ಕೊಮ್ಮೆ ಸಂಚಾರ ನಡೆಸುವ ರೈಲು ಘೋಷಣೆಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
6. ಮಂಗಳೂರು-ಹುಬ್ಳಳ್ಳಿ ವಯಾ ದಾವಣಗೆರೆ-ಅರಸೀಕೆರೆ ವಾರಕ್ಕೆ ಮೂರು ದಿನ ಸಂಚಾರ ನಡೆಸುವ ರೈಲು ಓಡಿಸಬೇಕು ಎಂಬುದು ಬೇಡಿಕೆಯಾಗಿದೆ. ಕರಾವಳಿ-ಉತ್ತರ ಕರ್ನಾಟಕ ಸಂಪರ್ಕಿಸುವ ಈ ರೈಲು ಘೋಷಣೆಯಾಗಲಿದೆಯೇ? ಕಾದು ನೋಡಬೇಕಿದೆ.
7. ಹುಬ್ಬಳ್ಳಿ-ಮೈಸೂರು ವಯಾ ಹಾಸನ ಇಂಟರ್‌ಸಿಟಿ ಪ್ರತಿದಿನದ ರೈಲು ಬೇಕು ಎಂಬುದು ಬಜೆಟ್‌ನಲ್ಲಿನ ನಿರೀಕ್ಷೆಯಾಗಿದೆ. ಇದನ್ನು ಸಹ ಘೋಷಣೆ ಮಾಡಲಾಗುತ್ತೆಯೇ? ಕಾದು ನೋಡಬೇಕು.
ಉಳಿದಂತೆ ಬಜೆಟ್‌ನಲ್ಲಿ ರಾಜ್ಯಕ್ಕೆ ಹೊಸ ವಂದೇ ಭಾರತ್ ರೈಲುಗಳು ಘೋಷಣೆಯಾಗಲಿವೆಯೇ? ಕಾದು ನೋಡಬೇಕು. ರಾಜ್ಯದಲ್ಲಿ ಕೆಲವು ರೈಲುಗಳು ತತ್ಕಾಲ್ ಮಾದರಿಯಲ್ಲಿ ಸಂಚಾರ ನಡೆಸುತ್ತಿವೆ. ಈ ರೈಲುಗಳನ್ನು ಖಾಯಂಗೊಳಿಸಬೇಕು ಎಂಬ ಕೂಗು ಇದೆ. ಇದಕ್ಕೆ ಬಜೆಟ್‌ನಲ್ಲಿ ಒಪ್ಪಿಗೆ ಸಿಗಲಿದೆಯೇ? ಎಂದು ನೋಡಬೇಕಿದೆ.
ಬೆಂಗಳೂರು ನಗರದ ನಮ್ಮ ಮೆಟ್ರೋ ಯೋಜನೆ ಹಂತ-3ಕ್ಕೆ ಕರ್ನಾಟಕ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಈ ಪ್ರಸ್ತಾವನೆ ಒಪ್ಪಿಗೆಗಾಗಿ ಕೇಂದ್ರಕ್ಕೆ ಸಲ್ಲಿಕೆಯಾಗಿದೆ. ಇದಕ್ಕೆ ಸಹ ಒಪ್ಪಿಗೆ ನೀಡುವ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ.
ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಉಪ ನಗರ ರೈಲು ಯೋಜನೆ ಘೋಷಣೆ ಮಾಡಿ, ಕಾಮಗಾರಿಯನ್ನು ಆರಂಭಿಸಲಾಗಿದೆ. ಈ ಯೋಜನೆಗೆ ಬಜೆಟ್‌ನಲ್ಲಿ ಅನುದಾನವನ್ನು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications