Lingayat: ಯಡಿಯೂರಪ್ಪ ಲಿಂಗಾಯತರಲ್ಲ, ಆ ಸಮುದಾಯದವರು: ಯತ್ನಾಳ್ ಹೊಸ ಬಾಂಬ್
ಬಿಜೆಪಿಯಲ್ಲಿ ಬಣ ರಾಜಕೀಯ ಜೋರಾಗಿರುವ ನಡುವೆಯೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಬಿಎಸ್ ಯಡಿಯೂರಪ್ಪ ಹಾಗೂ ಪುತ್ರ ಬಿವೈ ವಿಜಯೇಂದ್ರ ವಿರುದ್ಧ ತೊಡೆ ತಟ್ಟುತ್ತಿರುವ ಯತ್ನಾಳ್ ಅವರು ಇದೀಗ ಅವರ ಮೇಲೆ ಗಂಭೀರ ಆರೋಪವನ್ನು ಮಾಡಿದ್ದಾರೆ. ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ಯತ್ನಾಳ್ ಅವರು ಯಡಿಯೂರಪ್ಪ ಲಿಂಗಾಯತರೇ ಅಲ್ಲ ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದಿಂದಲೇ ರಾಜಕೀಯವಾಗಿ ಗುರುತಿಸಿಕೊಂಡವರು. ಇದೇ ಕಾರಣಕ್ಕೆ ಪುತ್ರ ಬಿವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಒಲಿದಿದೆ ಎನ್ನುವ ಮಾತಿದೆ. ಈಗ ನಡೆಯುತ್ತಿರುವ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದಲ್ಲೂ ಲಿಂಗಾಯತ ನಾಯಕರ ಹೆಸರು ಮುನ್ನೆಲೆಯಲ್ಲಿವೆ. ಆದರೆ, ಯಡಿಯೂರಪ್ಪ ಅವರು ಲಿಂಗಾಯತರೇ ಅಲ್ಲ ಎನ್ನುವ ಮೂಲಕ ಯತ್ನಾಳ್ ಅವರು ಹೊಸ ಚರ್ಚೆಯನ್ನು ಮುಂದಿಟ್ಟಿದ್ದಾರೆ. ಈ ಬಗ್ಗೆ ಯತ್ನಾಳ್ ಹೇಳಿದ್ದೇನು ಗೊತ್ತಾ?

ಯಡಿಯೂರಪ್ಪ ಅವರು ಲಿಂಗಾಯತರೇ ಅಲ್ಲ, ಅವರು ಬಳೆಗಾರ ಶೆಟ್ಟರ ಸಮುದಾಯವರು ಎಂದು ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಬೇಕಾದರೆ ಯಡಿಯೂರಪ್ಪ ಅವರ ಹುಟ್ಟೂರು ಮಂಡ್ಯ ಜಿಲ್ಲೆಯ ಬೂಕನಕೆರೆಗೆ ಹೋಗಿ ಕೇಳಿದರೆ ನಿಜ ಏನು ಎನ್ನುವುದು ಗೊತ್ತಾಗುತ್ತೆ ಎಂದಿದ್ದಾರೆ. ಯಡಿಯೂರಪ್ಪ ಲಿಂಗಾಯತರ ಹೆಸರೇಳಿಕೊಂಡು ಬಿಜೆಪಿ ಪಕ್ಷವನ್ನ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಇದೇ ರೀತಿ ಕಾಂಗ್ರೆಸ್‌ನಲ್ಲಿ ಶಾಮನೂರು ಶಿವಶಂಕರಪ್ಪ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹಲವು ವರ್ಷಗಳ ಹಿಂದೆ ವೀರೇಂದ್ರ ಪಾಟೀಲ್ ಹಾಗೂ ಜೆ.ಎಚ್.ಪಟೇಲ್ ಅವರ ನಂತರದಲ್ಲಿ ಈ ಸಮುದಾಯದಲ್ಲಿ ಬೇರೆ ಯಾವ ನಾಯಕರೂ ಇರಲಿಲ್ಲ. ಆಗ ಅನಿವಾರ್ಯವಾಗಿ ಯಡಿಯೂರಪ್ಪ ಅವರನ್ನ ಜನ ಒಪ್ಪಿಕೊಂಡರು. ಆದರೂ ಯಡಿಯೂರಪ್ಪ ಅವರು ವೀರಶೈವ ಹಾಗೂ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡದೆ ಮೋಸ ಮಾಡಿದ್ದಾರೆ ಎಂದೂ ದೂರಿದ್ದಾರೆ. ವೀರಶೈವ ಲಿಂಗಾಯತರಿಗೆ 2ಎ ಮೀಸಲಾತಿ ತಪ್ಪಿಸಿದ್ದೇ ಈ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿವೈ ವಿಜಯೇಂದ್ರ. ಹಾಗಾಗಿ ಅವರ ನಾಯಕತ್ವವನ್ನು ವೀರಶೈವ ಲಿಂಗಾಯತ ಸಮುದಾಯ ಎಂದಿಗೂ ಒಪ್ಪುವುದಿಲ್ಲ ಎಂದಿದ್ದಾರೆ.

ಅವರೆಲ್ಲ ರೆಡಿಮೇಡ್ ಸ್ವಾಮೀಜಿಗಳು!
ಇತ್ತೀಚೆಗೆ ಬಿಎಸ್ ಯಡಿಯೂರಪ್ಪ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಅವರನ್ನು ಭೇಟಿದ್ದರು. ಈ ವಿಚಾರವಾಗಿಯೂ ವ್ಯಂಗ್ಯವಾಡಿರುವ ಯತ್ನಾಳ್, ರೇಣುಕಾಚಾರ್ಯ ಸಭೆಯಲ್ಲಿ ಇದ್ದವರೆಲ್ಲರೂ ದೊಡ್ಡ ನಾಯಕರಾ? ಆ ಸಭೆಗೆ ಬಂದಿದ್ದವರು ರೆಡಿಮೇಡ್ ಸ್ವಾಮೀಜಿಗಳು. ಅಲ್ಲಿ ಯಾರೂ ಪ್ರಮುಖ ಸ್ವಾಮೀಜಿ ಇರಲಿಲ್ಲ. ಆ ಸಭೆ ನಡೆದಿದ್ದು ವಿಜಯೇಂದ್ರನಿಗಾಗಿ ಎಂದು ಎಲ್ಲರಿಗೂ ಗೊತ್ತಿದೆ ಎಂದು ಯತ್ನಾಳ್ ಹೇಳಿದ್ದಾರೆ.
ಇನ್ನು ಯಡಿಯೂರಪ್ಪ ಶ್ಯಾಮನೂರು ಶಿವಶಂಕರಪ್ಪನವರ ಮನೆಗೆ ರಾತ್ರಿ ಯಾಕೆ ಹೋಗಿದ್ದರು. ಶ್ಯಾಮನೂರು ಅವರಿಂದ ವೀರಶೈವ ಮಹಸಭಾದ ಬೆಂಬಲ ಕೇಳಿದ್ದೀರಿ. ಹಾಗಾದ್ರೆ ಇಬ್ಬರೂ ಸೇರಿ ರಾಜ್ಯದಲ್ಲಿ ಎರಡೂ ಪಕ್ಷಗಳಿಗೆ ವೀರಶೈವ ಎಂಬ ಕಾರ್ಡ್ ಬಳಸುತ್ತಿದ್ದೀರಿ. ನಿಮ್ಮನ್ನ ವೀರಶೈವ ಸಮುದಾಯದವರು ಎಂದಿಗೂ ಮೆಚ್ಚುವುದಿಲ್ಲ. ವೀರಶೈವರಿಗೆ ಸಿಗುವಂತಹ ಮೀಸಲಾತಿ ತಪ್ಪಿಸಿದ್ದು ಯಡಿಯೂರಪ್ಪ ಹಾಗೂ ವಿಜಯೇಂದ್ರ ಮಾತ್ರ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.












Click it and Unblock the Notifications