ಸಿಎಂ ಪಟ್ಟಕ್ಕಾಗಿ ಕಾಂಗ್ರೆಸ್ ನಾಯಕರು ತಿರುಕನ ಕನಸು; ಕಾಂಗ್ರೆಸ್ 60-70 ಸೀಟ್ ಅಷ್ಟೇ ಗೆಲ್ಲುವುದು: ಬಿ.ಎಸ್.ಯಡಿಯೂರಪ್ಪ
ಬೆಂಗಳೂರು, ಮಾರ್ಚ್30: ಕಾಂಗ್ರೆಸ್ ಮುಖಂಡರು ತಮಗೇ ಬಹುಮತ, ಸಿಎಂ ಪಟ್ಟ ಎಂದು ಹಗಲು ಕನಸು ಕಾಣುತ್ತಿದ್ದಾರೆ. ಅದು ತಿರುಕನ ಕನಸಷ್ಟೇ, ಕಾಂಗ್ರೆಸ್ ಪಕ್ಷವು 60-70 ಸೀಟಿಗಿಂತ ಹೆಚ್ಚು ಗೆಲ್ಲಲು ಅಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಈ ಕುರಿತು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ಅಸೆಂಬ್ಲಿ ಚುನಾವಣೆ ಘೋಷಣೆ ಆಗಿದ್ದು, ಸದ್ಯದಲ್ಲೇ ಅಭ್ಯರ್ಥಿಗಳ ಕುರಿತು ಸಂಸದೀಯ ಮಂಡಳಿ ತೀರ್ಮಾನ ಮಾಡಲಿದೆ. ಅಭ್ಯರ್ಥಿಗಳ ಘೋಷಣೆ ಆದ ನಂತರ ಚುನಾವಣೆ ಮುಗಿಯುವ ವರೆಗೆ ರಾಜ್ಯದ ಎಲ್ಲ ಕ್ಷೇತ್ರಗಳಿಗೆ ನಾನು, ನಮ್ಮ ಸಂಸದರು ಪ್ರವಾಸ ಮಾಡಲಿದ್ದೇವೆ ಎಂದು ಹೇಳಿದರು.

ಈ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ನೂರು ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ, ಅಷ್ಟೇ ಖಚಿತವಾಗಿ ನಾವು ಸ್ಪಷ್ಟ ಬಹುಮತದೊಂದಿಗೆ ಸರಕಾರ ರಚಿಸುತ್ತೇವೆ. ನರೇಂದ್ರ ಮೋದಿಜಿ, ಅಮಿತ್ ಶಾಜಿ ಅವರಂಥ ನಾಯಕರು ಬಿಜೆಪಿಯಲ್ಲಿದ್ದು, ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಗಳಿಗೆ ದೇವದುರ್ಲಭ ಸ್ವಾಗತ ಲಭಿಸುತ್ತಿದೆ ಎಂದರು.
ಈಗಾಗಲೇ ಅಮಿತ್ ಶಾ ಜಿ ಜೊತೆ ಮಾತನಾಡಿದ್ದೇನೆ. ನಮ್ಮೆಲ್ಲ ಸಂಸದರು, ರಾಜ್ಯಸಭಾ ಸದಸ್ಯರು ಚುನಾವಣೆ ಮುಗಿಯುವವರೆಗೆ ಸ್ವಕ್ಷೇತ್ರದಲ್ಲಿದ್ದು ಹೆಚ್ಚು ಸಂಖ್ಯೆಯಲ್ಲಿ ಬಿಜೆಪಿ ಗೆಲುವಿಗೆ ಕೆಲಸ ಮಾಡಲು ತಿಳಿಸಿದ್ದಾರೆ. ಅದರಂತೆ ಕೆಲಸ ಪ್ರಾರಂಭ ಮಾಡಿದ್ದಾರೆ. ಮೊನ್ನೆ ಸಂಸದರ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲಾಗಿದೆ ಎಂದರು.

ರಾಜ್ಯ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ನಮ್ಮ ಮುಖ್ಯಮಂತ್ರಿಗಳು ಮಾಡಿದ ಮೀಸಲಾತಿ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಲಿಂಗಾಯತ- ಶೇ 7, ಒಕ್ಕಲಿಗರು-ಶೇ 6, ಎಸ್‍ಸಿ ಎಡ ಶೇ 6, ಎಸ್‍ಸಿ ರೈಟ್ 5.5, ಬೋವಿ ಬಂಜಾರ ಸಮಾಜದವರಿಗೆ ಶೇ 4.5, ಇತರರು ಶೇ 1 ಹೀಗೆ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ
ಲೋಕಸಭಾ ಚುನಾವಣೆಯ ಜನಬೆಂಬಲ ಮತ್ತೆ ಪುನರಾವರ್ತನೆಯಾಗಲಿದೆ. ಲೋಕಸಭೆ 25 ಸೀಟು ಗೆಲ್ಲುವುದಾಗಿ ಹೇಳಿದ್ದೆ. ಅದು ಸತ್ಯವಾಗಿದೆ. ಪಕ್ಷೇತರ ಸುಮಲತಾ ಅವರೂ ನಮ್ಮ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಒಬ್ಬರು ಕಾಂಗ್ರೆಸ್, ಒಬ್ಬರು ಜೆಡಿಎಸ್‍ನವರಿದ್ದಾರೆ. ಲೋಕಸಭಾ ಚುನಾವಣೆಯ ಜನಬೆಂಬಲ ಮತ್ತೆ ಪುನರಾವರ್ತನೆ ಆಗಲಿದೆ ಎಂದು ವಿಶ್ವಾಸ ಸೂಚಿಸಿದರು.
ನಾನು ಸಿಎಂ ಆಗಿದ್ದಾಗ ಲಂಬಾಣಿ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತನೆ ಮಾಡಿದ್ದೆ. ಭೂರಹಿತ ದಲಿತ ಸಮುದಾಯಕ್ಕೆ ಭೂಮಿ ವಿತರಣೆ ಮಾಡಿದ್ದೇನೆ. ಅಲ್ಲದೆ, ಭಾಗ್ಯಲಕ್ಷ್ಮಿ ಯೋಜನೆ ನನಗೆ ಅತ್ಯಂತ ತೃಪ್ತಿ ಕೊಟ್ಟಿದೆ. ಬೈಸಿಕಲ್ ಕೊಡುವ ಯೋಜನೆಯೂ ಖುಷಿ ಕೊಟ್ಟಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಿದ್ದೇನೆ ಎಂದು ವಿವರಿಸಿದರು.
ವಿಜಯ ಸಂಕಲ್ಪ ಯಾತ್ರೆ ಮೂಲಕ ಇಡೀ ರಾಜ್ಯದಲ್ಲಿ ಇಡೀ ರಾಜ್ಯದಲ್ಲಿ ಬಿಜೆಪಿ ಗಾಳಿ ಬೀಸುವಂತಾಗಿದೆ. ಸಭೆಗಳಲ್ಲಿ 15-20 ಸಾವಿರ ಜನರ ಸೇರಿದ್ದರು. ಜನರ ಒಲವು ಬಿಜೆಪಿ ಕಡೆ ಇರುವುದರ ಸ್ಪಷ್ಟತೆ ಗೋಚರಿಸಿದೆ. ಪ್ರಧಾನಿ ಮೋದಿಜಿ ಮತ್ತೆ 2-3 ಸುತ್ತು ಬರಲಿದ್ದಾರೆ. ಶಿವಮೊಗ್ಗ ವಿಮಾನನಿಲ್ದಾಣ 2 ಲಕ್ಷ ಜನರು ನಿಲ್ಲಲು ಜಾಗ ಇಲ್ಲದೆ ವಾಪಸ್ ಹೋಗಿದ್ದಾರೆ. ಬಿಜೆಪಿ ಸ್ಪಷ್ಟ ಬಹುಮತ ಪಡೆಯುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿಜಿ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ ಇದೆ. ಅದರ ಲಾಭ ಪಕ್ಷಕ್ಕೆ ಸಿಗಲಿದೆ. ಹೈವೇ ರಸ್ತೆಗಳು, ರೈಲ್ವೆ ಅಭಿವೃದ್ಧಿ, ಆಸ್ಪತ್ರೆಯ ಸೌಕರ್ಯಗಳು- ಸಾಮಾನ್ಯರಿಗೆ ಮನವರಿಕೆ ಮಾಡಿಕೊಡುತ್ತೇವೆ. ಆಯುಷ್ಮಾನ್, ಉಜ್ವಲ, ಶೌಚಾಲಯ, ಜಲಜೀವನ್ ಯೋಜನೆ, ಬೊಮ್ಮಾಯಿ ಸರಕಾರದ ವಿವಿಧ ಯೋಜನೆಗಳು ನಮ್ಮ ಗೆಲುವಿಗೆ ಕಾರಣ ಆಗಲಿದೆ. ಬಿಜೆಪಿ ಸ್ಪಷ್ಟ ಬಹುಮತದ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.
ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಕೇಂದ್ರ- ರಾಜ್ಯದ ಸಾಧನೆಯನ್ನು ತಿಳಿಸುತ್ತೇವೆ. ಬುಧವಾರ ಮಾಧ್ಯಮಗಳಲ್ಲಿ ಫಲಿತಾಂಶ ಕುರಿತು ಸರ್ವೇ ವರದಿ ನೋಡಿದ್ದೇನೆ. ಜನರ ನಾಡಿಮಿಡಿತ ನಮ್ಮ ಪರ ಇದೆ. ನಾವು ಕೂಡ 3 ಸರ್ವೇ ಮಾಡಿಸಿದ್ದೇವೆ. ಎಲ್ಲ ಸರ್ವೇಗಳಲ್ಲಿ ಸಂಪೂರ್ಣ ಬಹುಮತ ಪಡೆಯುವ ವರದಿ ಬಂದಿದೆ ಎಂದು ತಿಳಿಸಿದರು.
ಈ ಬಾರಿ ಕೇಂದ್ರ ಸಚಿವರು, ಸಂಸದರ ಬೆಂಬಲ- ಸಹಕಾರ ಮತ್ತು ಪ್ರಚಾರದಿಂದ ನಾವು ಮತ್ತೆ ಅಧಿಕಾರ ಪಡೆಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೀಸಲಾತಿ ವಿಚಾರದಲ್ಲಿ ಮುಸ್ಲಿಂ ಬಾಂಧವರಿಗೆ ಅನ್ಯಾಯ ಮಾಡಿಲ್ಲ. ಸಂವಿಧಾನಬಾಹಿರವಾಗಿ ಸೇರಿಸಿದ್ದ ಕಾರಣ ಇಲ್ಲಿ ರದ್ದು ಮಾಡಿ, ಅವರನ್ನು ಇಡಬ್ಲ್ಯುಎಸ್ ಅಡಿ ಸೇರಿಸಿದ್ದೇವೆ. ತಪ್ಪು ಗ್ರಹಿಕೆ ಬೇಡ ಎಂದು ಸ್ಪಷ್ಟಪಡಿಸಿದರು.












Click it and Unblock the Notifications