ಗುರುಗ್ರಾಮ ರೆಸಾರ್ಟ್ ನಿಂದ ಬೆಂಗಳೂರಿಗೆ ವಾಪಸ್ ಆಗುತ್ತಿರುವ ಬಿಜೆಪಿ ಶಾಸಕರು
ಗುರುಗ್ರಾಮ, ಜನವರಿ 19: ಗುರುಗ್ರಾಮದ ರೆಸಾರ್ಟ್ ವೊಂದರಲ್ಲಿ ತಂಗಿರುವ ಬಿಜೆಪಿ ಶಾಸಕರೆಲ್ಲರನ್ನೂ ವಾಪಸ್ ಬರುವಂತೆ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದು, ಶನಿವಾರ ಎಲ್ಲರೂ ವಾಪಸ್ಸಾಗುತ್ತಿದ್ದಾರೆ.
ರಾಜ್ಯ ರಾಜಕೀಯದಲ್ಲಿ ನಾಟಕೀಯ ಬದಲಾವಣೆಯಾಗುತ್ತಿದ್ದು, ಕಾಂಗ್ರೆಸ್ ಶಾಸಕರೆಲ್ಲ ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ ನಲ್ಲಿ ತಂಗಿದ್ದಾರೆ. ಈ ಬೆಳವಣಿಗೆಯ ನಂತರ ಯಡಿಯೂರಪ್ಪನವರು ಬಿಜೆಪಿ ಶಾಸಕರನ್ನು ವಾಪಸ್ ಕರೆಸಿಕೊಳ್ಳುತ್ತಿರುವುದು ಕುತೂಹಲ ಕೆರಳಿಸಿದೆ.
ಈಗಾಗಲೇ ಬಿಜೆಪಿ ಶಾಸಕರು ಗುರುಗ್ರಾಮ ರೆಸಾರ್ಟ್ ನಿಂದ ಏರ್ ಪೂರ್ಟ್ ನತ್ತ ಪ್ರಯಾಣ ಬೆಳೆಸಿದ್ದು, ಇಂದೇ ಬೆಂಗಳೂರಿಗೆ ವಾಪಸ್ಸಾಗುತ್ತಾರೆ.

ಜನವರಿ 19 ರಂದು ಕಾಂಗ್ರೆಸ್ ನ 19 ಶಾಸಕರನ್ನು ತನ್ನತ್ತ ಸೆಳೆದುಕೊಳ್ಳಲು ಬಿಜೆಪಿ ಕಾರ್ಯತಂತ್ರರೂಪಿಸಿದೆ. ಈ ಮಿಶನ್ ನ ಹೆಸರೇ 19-19-19! ಜನವರಿ 19 , 2019 ರಂದು 19 ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿರುವುದರಿಂದ ಇದಕ್ಕೆ ಈ ಹೆಸರು! ಜನವರಿ 19 ರಂದು ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಘಟನೆ ನಡೆಯಲಿದೆ ಎಂದು ಸ್ವತಃ ಬಿ ಎಸ್ ಯಡಿಯೂರಪ್ಪ ಅವರ ಸಿಕ್ತ್ ಸೆನ್ಸ್ ಹೇಳುತ್ತಿದೆ ಎಂದು ಅವರೇ ಹೇಳಿದ್ದಾರೆ! ಹಾಗಾದರೆ ಇಂದು ಶಾಸಕರು ವಾಪಸ್ಸಾದ ಮೇಲೆ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸುವ ಘಟನೆಯೇನಾದರೂ ನಡೆಯುತ್ತದಾ..?!
ಶುಕ್ರವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್ ನ ನಾಲ್ವರು ಶಾಸಕರು ಗೈರಾಗಿದ್ದರು. ಸಭೆಗೆ ಗೈರಾಗಿದ್ದ ಡಾ.ಉಮೇಶ್ ಜಾಧವ್, ಬಿ ನಾಗೇಂದ್ರ, ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಅವರಿಗೆ ಷೋಕಾಸ್ ನೋಟೀಸ್ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications