ಪ್ರತ್ಯೇಕ ಧರ್ಮ: ಬ್ರಾಹ್ಮಣರಿಗೆ ಎಂಥಾ ಸಲಹೆ ನೀಡಿದ್ರು ಗೊತ್ತಾ ಸಚಿವ ಪಾಟೀಲ್?
Recommended Video

ವಿಜಯಪುರ, ಮಾ 21: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಇನ್ನೂ ಹೊಗೆಯಾಡುತ್ತಲೇ ಇರುವಾಗ, ಹಿಂದೂ ಧರ್ಮಕ್ಕಿಂತ ಬ್ರಾಹ್ಮಣರು ಹೇಗೆ ಭಿನ್ನ ಎಂದು ಸಾಬೀತು ಪಡಿಸಲಿ ಎಂದು ರಾಜ್ಯ ಜನಸಂಪನ್ಮೂಲ ಖಾತೆಯ ಸಚಿವ ಎಂ ಬಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಬ್ರಾಹ್ಮಣರು ಒಂದು ವೇಳೆ ಪ್ರತ್ಯೇಕ ಧರ್ಮಕ್ಕೆ ಬೇಡಿಕೆಯಿಟ್ಟರೆ ಅದರಲ್ಲಿ ತಪ್ಪೇನಿದೆ. ಆದರೆ, ಅವರು ಹಿಂದೂ ಧರ್ಮಕ್ಕಿಂತ ಹೇಗೆ ಭಿನ್ನ ಎನ್ನುವುದನ್ನು ರುಜುವಾತು ಪಡಿಸಬೇಕಾಗುತ್ತದೆ ಎಂದು ಸಚಿವ ಪಾಟೀಲ್, ವಿಜಯಪುರದಲ್ಲಿ ಬುಧವಾರ (ಮಾ 21) ಹೇಳಿದ್ದಾರೆ.
ಸೂಕ್ತ ದಾಖಲೆಯೊಂದಿಗೆ ಬ್ರಾಹ್ಮಣರು ಸರಕಾರಕ್ಕೆ ಅರ್ಜಿ ಸಲ್ಲಿಸಲಿ, ಅದು ಸರಕಾರಕ್ಕೆ ಮನದಟ್ಟಾದರೆ, ಅವರಿಗೆ ಪ್ರತ್ಯೇಕ ಧರ್ಮ ಕೊಡುವುದರಲ್ಲಿ ಏನೂ ಅಭ್ಯಂತರವಿಲ್ಲ ಎಂದು ಎಂ ಬಿ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾವು ದಾಖಲೆಯೊಂದಿಗೆ ಲಿಂಗಾಯತ ಪ್ರತ್ಯೇಕ ಧರ್ಮ ಎನ್ನುವುದನ್ನು ಸಾಬೀತು ಪಡಿಸಿದ್ದೇವೆ. ಸರಕಾರ ಪ್ರತ್ಯೇಕ ಧರ್ಮದ ಕ್ಯಾಬಿನೆಟ್ ನಿರ್ಧಾರವನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟಿದೆ. ಒಂದು ವೇಳೆ ಕೇಂದ್ರ ಸರಕಾರ ಇದಕ್ಕೆ ಒಪ್ಪಿಗೆ ನೀಡದೇ ಇದ್ದಲ್ಲಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಪಾಟೀಲ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯನ್ನು ಕೇಂದ್ರ ಸರಕಾರ ಕೇವಲ ಕಾಂಗ್ರೆಸ್ ಮುಖಂಡರ ಮನೆ, ಕಚೇರಿ ಮೇಲೆ ದಾಳಿ ನಡೆಸಲು ಉಪಯೋಗಿಸಿಕೊಳ್ಳುತ್ತಿದೆ. ಕೆಲವೊಂದು ಮಾಹಿತಿಗಳ ಪ್ರಕಾರ, ನನ್ನ ಮನೆಯ ಮೇಲೂ, ಆದಾಯ ತೆರಿಗೆ ದಾಳಿ ನಡೆಯುವ ಸಾಧ್ಯತೆಯಿದೆ.
ಈ ರೀತಿಯ ದಾಳಿಯಿಂದ ನಾನು ವಿಚಲಿತನಾಗುವುದಿಲ್ಲ. ನನ್ನ ಇಲಾಖೆಯಲ್ಲಿ ಅಭಿವೃದ್ದಿ ಕೆಲಸ ಮಾಡಿ ತೋರಿಸಿದ್ದೇನೆ. ಮುಂದಿನ ಚುನಾವಣೆಯಲ್ಲಿ ಮತದಾರ ಮತ್ತೆ ನಮ್ಮನ್ನು ಆಶೀರ್ವದಿಸಲಿದ್ದಾನೆ ಎಂದು ಸಚಿವ ಎಂ ಬಿ ಪಾಟೀಲ್ ಭರವಸೆಯ ಮಾತನ್ನಾಡಿದ್ದಾರೆ.












Click it and Unblock the Notifications