BPL Card: ಬಿಪಿಎಲ್ ಕಾರ್ಡ್ ಬಗ್ಗೆ ಮತ್ತೊಂದು ಬಿಗ್ ಅಪ್ಡೇಟ್ ಕೊಟ್ಟ ಆಹಾರ ಸಚಿವ ಕೆ.ಎಚ್.ಮುನಿಯಪ್ಪ
BPL Ration Card: ರಾಜ್ಯದಲ್ಲಿನ ಪಡಿತರ ಚೀಟಿಗಳಲ್ಲಿ ಹಲವು ವಿಧಗಳಿವೆ. ಇವುಗಳಲ್ಲಿ ಬಿಪಿಎಲ್ ಕಾರ್ಡ್‌ಗೆ ಹೆಚ್ಚು ಸರ್ಕಾರಿ ಸೌಲಭ್ಯ ಸಿಗಲಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವವರಿಗಿಂತ ದುರುಪಯೋಗ ಮಾಡಿಕೊಳ್ಳುವವರೇ ಹೆಚ್ಚಿದ್ದಾರೆ ಎನ್ನುವ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಇದೀಗ ಈ ಕುರಿತು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ವಿಧಾನಸಭೆಯಲ್ಲಿ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಪಡೆದ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಅಂತಹವರನ್ನು ಎಪಿಎಲ್‌ಗೆ ವರ್ಗಾಹಿಸುವ ಕೆಲಸವನ್ನು ಸರ್ಕಾರ ಈ ಹಿಂದೆಯೇ ಮಾಡಿತ್ತು. ಆದರೆ, ಈ ವೇಳೆ ಬಡವರ ಬಳಿ ಇರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿದ್ದಾರೆ ಎಂದು ಆರೋಪಿಸಿ ಹಲವು ಜಿಲ್ಲೆಗಳಲ್ಲಿ ಜನರು ಪ್ರತಿಭಟನೆ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಬಳಿಕ ಎಚ್ಚೆತ್ತ ಸರ್ಕಾರ ಯಾರೆಲ್ಲಾ ಬಡವರ ಬಿಪಿಎಲ್ ರದ್ದಾಗಿದೆಯೋ ಅವರಿಗೆ ಮತ್ತೆ ಆ ಪಡಿತರ ಚೀಟಿಗಳನ್ನು ವಾಪಸ್ ಕೊಡಲಾಗುವುದು ಹಾಗೂ ಅವರಿಗೆ ಸಿಗಬೇಕಾದ ಪಡಿತರವನ್ನು ಕೂಡ ನೀಡಲಾಗುತ್ತದೆ ಎಂದು ಅಂತಲೂ ಭರವಸೆ ನೀಡಿತ್ತು.
ಅಲ್ಲದೆ, ಅನರ್ಹರಿಗೆ ಬಿಪಿಎಲ್ ಕಾರ್ಡ್‌ಗಳನ್ನು ಹಿಂತಿರುಗಿಸಿ. ಇದರಿಂದ ಬಡವರಿಗೆ ಅಹಾಯ ಆದಂತಾಗಲಿದೆ ಎಂದು ಸರ್ಕಾರ ಮನವಿ ಮಾಡಿತ್ತು. ಆದರೆ ಕ್ಯಾರೆ ಅನ್ನದ ಕೆಲ ಅನರ್ಹರು ಈಗಲೂ ಬಿಪಿಎಲ್ ಪಡಿತರ ಚೀಟಿ ಇಟ್ಟುಕೊಳ್ಳುವುದಲ್ಲದೆ, ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಇದನ್ನು ನಿಯಂತ್ರಣಕ್ಕೆ ತರಲು ಸರ್ಕಾರ ತೆಗೆದುಕೊಂಡ ನಿರ್ಧಾರ ಏನು ಎನ್ನುವ ವಿವರವನ್ನು ಸಚಿವರು ಬಿಚ್ಚಿಟ್ಟಿದ್ದಾರೆ.
ರಾಜ್ಯದಲ್ಲಿ 13,00,000ಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡ್‌ದಾರರು ಇದ್ದಾರೆ ಎಂದು ತಿಳಿದುಬಂದಿದ್ದು, ಅವುಗಳನ್ನ ಪರಿಷ್ಕರಣೆ ಮಾಡಲಾಗುವುದು. ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲು ಸೆಪ್ಟೆಂಬರ್ ತಿಂಗಳಿನಿಂದ ವೆಬ್‌ಸೈಟ್ ಮುಕ್ತ ಆಗಿಡುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ವಿಧಾನಸಭೆಯಲ್ಲಿ ತಿಳಿಸಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿ ಶಾಸಕ ಡಾ. ವೈ.ಭರತ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವೈದ್ಯಕೀಯ ಚಿಕಿತ್ಸೆಯ ತುರ್ತು ಸಂದರ್ಭಕ್ಕೆ ಅನುಕೂಲ ಆಗಲು ಪಡಿತರ ಕಾರ್ಡ್ ನೀಡುವ ಸಲುವಾಗಿ ಪ್ರತ್ಯೇಕ ಪೋರ್ಟಲ್ ಆರಂಭ ಮಾಡಲಾಗುತ್ತಿದೆ. ಇನ್ಮುಂದೆ 24 ಗಂಟೆಯ ಒಳಗೆ ವೈದ್ಯಕೀಯ ಚಿಕಿತ್ಸೆಗೆ ಪಡಿತರ ಚೀಟಿಗಳನ್ನು ನೀಡುವಂತೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ 25 ಲಕ್ಷ ಎಪಿಎಲ್ ಕಾರ್ಡ್‌ದಾರರಿದ್ದು, 1 ಲಕ್ಷ ಜನ ಅಕ್ಕಿ ಪಡೆಯುತ್ತಿರಲಿಲ್ಲ. ಆದ್ದರಿಂದ ಎಪಿಎಲ್ ಕಾರ್ಡ್‌ಗೆ ಅಕ್ಕಿ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಹೇಳಿದರು. ಇನ್ನು ರಾಜ್ಯದಲ್ಲಿ ಒಟ್ಟು ಕಾರ್ಡ್‌ದಾರರ ಪೈಕಿ ಶೇಕಡ 75ರಷ್ಟು ಬಿಪಿಎಲ್ ಕಾರ್ಡ್‌ಗಳಿವೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡಿನಲ್ಲಿ ಶೇಕಡ 50ರಷ್ಟು ಬಿಪಿಎಲ್ ಕಾರ್ಡ್‌ಗಳಿವೆ ಎಂದು ಹೇಳಿದರು.
ಅಲ್ಲದೆ, ಕಾರ್ಡ್‌ಗಳನ್ನಾಧರಿಸಿ ನೋಡೋದಾದ್ರೆ, ಮಹಾರಾಷ್ಟ್ರಕ್ಕಿಂತ ಹೆಚ್ಚು ಬಡತನದ ರಾಜ್ಯ ಕರ್ನಾಟಕ ಎಂದಂತಾಗಲಿದೆ. ಬಿಪಿಎಲ್ ಪಟ್ಟಿಯಲ್ಲಿ 13 ಲಕ್ಷ ಜನ ಅನರ್ಹರು ಇದ್ದಾರೆ. ಅಂತಹರ ಕಾರ್ಡ್‌ಗಳನ್ನು ರದ್ದುಪಡಿಸಲು ಪ್ರಯತ್ನಿಸಿದಾಗ ಗೊಂದಲಗಳು ಸೃಷ್ಟಿಯಾದವು. ಆದ್ದರಿಂದ ಇದೀಗ ಕೈಗೊಂಡಿರುವ ಈ ಮಹತ್ವದ ಕೆಲಸಕ್ಕೆ ಎಲ್ಲಾ ಪಕ್ಷಗಳು ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರನ್ನು ಎಪಿಎಲ್‌ಗೆ ವರ್ಗಾವಣೆ ಮಾಡಲಾಗುತ್ತದೆ. ಒಂದು ವೇಳೆ ಅರ್ಹರ ಕಾರ್ಡ್‌ಗಳು ರದ್ದುಗೊಂಡಿದ್ದರೆ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಕೆ ಮಾಡಿ. ಆಗ ತಕ್ಷಣವೇ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ ಎಂದು ತಿಳಿಸಿದರು. ಇನ್ನು ಅನರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಹೊಸದಾಗಿ ಎಪಿಎಲ್ ಪಡಿತರ ಚೀಟಿ ನೀಡಲು ಮತ್ತು ಪರಿಷ್ಕರಣೆ ಬಳಿಕ ಸೆಪ್ಟೆಂಬರ್‌ನಲ್ಲಿ ಹೊಸ ಬಿಪಿಎಲ್ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಶಾಸಕರಾದ ಕೆ.ಗೋಪಾಲಯ್ಯ ಸೇರಿದಂತೆ ಹಲವರು ವೈದ್ಯಕೀಯ ತುರ್ತು ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೇಳಿದಾಗ, ಪ್ರತ್ಯೇಕ ಪೋರ್ಟಲ್ ಮಾಡುವುದಾಗಿ ಸಚಿವ ಕೆ.ಎಚ್.ಮುನಿಯಪ್ಪ ಅವರು ಹೇಳಿದರು.












Click it and Unblock the Notifications