5,8 ತರಗತಿಗೆ ಬೋರ್ಡ್ ಪರೀಕ್ಷೆ; ಮತ್ತೆ ಹೈಕೋರ್ಟ್‌ಗೆ ಅರ್ಜಿ
5, 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ವಿವಾದ ಸದ್ಯಕ್ಕೆ ಬಗೆಹರಿಯಲ್ಲ. ಬೋರ್ಡ್ ಪರೀಕ್ಷೆ ರದ್ದುಗೊಳಿಸಿದ
ಬೆಂಗಳೂರು, ಮಾರ್ಚ್ 15; ಕರ್ನಾಟಕದ ಶಾಲೆಗಳಲ್ಲಿ 5, 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ವಿವಾದ ಸದ್ಯಕ್ಕೆ ಬಗೆಹರಿಯುವ ಸಾಧ್ಯತೆಗಳು ಕಾಣುತ್ತಿಲ್ಲ. ಇನ್ನೇನು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸನಿಹವಾಗುತ್ತಿದ್ದರೂ ಸಹ ಸರ್ಕಾರ 5 ಮತ್ತು 8ನೇ ತರಗತಿ ಪರೀಕ್ಷೆ ವಿವಾದದಲ್ಲಿ ನ್ಯಾಯಾಲಯದ ಅದೇಶದಂತೆ ನಡೆಯದೇ ಪ್ರತಿಷ್ಠೆಯನ್ನಾಗಿ ಮಾಡಿಕೊಂಡು ಹೋರಾಟ ನಡೆಸುತ್ತಿದೆ.
ಬೋರ್ಡ್ ಪರೀಕ್ಷೆ ನಡೆಸುವ ಸುತ್ತೋಲೆ ರದ್ದುಪಡಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಬುಧವಾರವೂ ವಿಚಾರಣೆ ಮುಂದುವರಿಯಲಿದೆ.

ಕೆಲ ಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಸದ್ಯ ಬೋರ್ಡ್ ಪರೀಕ್ಷೆಗೆ ಸಿದ್ಧಪಡಿಸಿರುವ ಪ್ರಶ್ನೆ ಪತ್ರಿಕೆಗಳಲ್ಲಿ ಪಠ್ಯಕ್ರಮದಿಂದ ಹೊರತಾದ ಯಾವುದಾದರೂ ಪ್ರಶ್ನೆಗಳು ಇವೆಯೇ?, ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಿ ಪ್ರಮಾಣಪತ್ರ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ನಿರ್ದೇಶನ ನೀಡಿದೆ. ಅರ್ಜಿದಾರರ ಪರ ವಾದಿಸಿದ ವಕೀಲರು, ಕಲಿಕಾ ಚೇತರಿಕೆ ಕೇವಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮಾತ್ರವೇ ಅನ್ವಯ ಆಗುತ್ತದೆ. ಇದು ಪಠ್ಯಕ್ರಮದ ಭಾಗವಲ್ಲ. ಇದರನ್ವಯ ಪ್ರಶ್ನೆಗಳನ್ನು ಉತ್ತರಿಸಲು ಮಕ್ಕಳಿಗೆ ಕಷ್ಟವಾಗುತ್ತದೆ ಎಂದು ವಿವರಿಸಿದರು.
ಆ ವಾದವನ್ನು ತಳ್ಳಿಹಾಕಿದ ಸರ್ಕಾರಿ ವಕೀಲರು, ಕಲಿಕಾ ಚೇತರಿಕೆ ಕೂಡಾ ಪಠ್ಯಕ್ರಮದ ಭಾಗವೇ ಆಗಿದೆ. ಮಕ್ಕಳ ಬುದ್ಧಿಮತ್ತೆ ಉತ್ತೇಜಿಸಲು ಅದನ್ನು ರೂಪಿಸಲಾಗಿದೆ. ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅದಕ್ಕೆ ನ್ಯಾಯಪೀಠ, ಆಯುಕ್ತರು ಈ ಸಂಬಂಧ ಪ್ರಮಾಣಪತ್ರ ಸಲ್ಲಿಸಲಿ ಎಂದು ಸೂಚಿಸಿ ವಿಚಾರಣೆಯನ್ನು ಮಾರ್ಚ್ 15ರ ಬುಧವಾರಕ್ಕೆ ಮುಂದೂಡಿತು.

ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಇದೇ ಮಾರ್ಚ್ 10ರಂದು ಪುರಸ್ಕರಿಸಿ, ಬೋರ್ಡ್ ಪರೀಕ್ಷೆ ನಡೆಸುವ ಆದೇಶವನ್ನು ರದ್ದುಗೊಳಿಸಿತ್ತು. ಆದರೆ ಸರ್ಕಾರ ಏಕಸದಸ್ಯ ಪೀಠ ನೀಡಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದೆ.
ಪ್ರಕರಣದ ಹಿನ್ನೆಲೆ: ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನಕ್ಕೆ ಬದಲಾಗಿ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ತೀರ್ಮಾನಿಸಿ ರಾಜ್ಯ ಸರ್ಕಾರವು 2022ರ ಡಿಸೆಂಬರ್ 12, 13 ಮತ್ತು 2023ರ ಜನವರಿ 4ರಂದು ಸುತ್ತೋಲೆ ಹೊರಡಿಸಿತ್ತು. ಇದನ್ನು ರದ್ದುಪಡಿಸುವಂತೆ ಕೋರಲಾಗಿತ್ತು. ಈ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿತ್ತು.
ಪರೀಕ್ಷೆ ಮುಂದೂಡಿಕೆ; ರಾಜ್ಯ ಪಠ್ಯಕ್ರಮದ 5 & 8ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 13 ರಿಂದ 18ರ ತನಕ ನಡೆಸಲು ಉದ್ದೇಶಿಸಿದ್ದ ಏಕರೂಪದ (ಮೌಲ್ಯಾಂಕನ) ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿತ್ತು. ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸ) ಹಾಗೂ ಇತರರು ಸಲ್ಲಿಕೆ ಮಾಡಿದ್ದ ರಿಟ್ ಅರ್ಜಿ ಪುರಸ್ಕರಿಸಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಈ ಆದೇಶದ ಬಳಿಕ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿತ್ತು.
ಈ ಹಿಂದೆ ಪ್ರಕಟಿಸಿದ್ದ ವೇಳಾಪಟ್ಟಿ ಪ್ರಕಾರ 5ನೇ ತರಗತಿಗೆ ಮಾರ್ಚ್ 15 ರಿಂದ 4 ದಿನಗಳ ಕಾಲ ಮತ್ತು 8ನೇ ತರಗತಿಗೆ ಮಾರ್ಚ್ 13 ರಿಂದ 6 ದಿನಗಳ ಕಾಲ ಪರೀಕ್ಷೆಗಳು ನಡೆಯಬೇಕಿತ್ತು. ಪ್ರತಿ ಪತ್ರಿಕೆಯು ತಲಾ 40 ಅಂಕಗಳ ಪ್ರಶ್ನೆಗಳನ್ನು ಒಳಗೊಂಡಿತ್ತು. ಒಂದು ಅಂಕದ 20 ಬಹು ಆಯ್ಕೆ ಪ್ರಶ್ನೆಗಳು, 20 ಅಂಕಗಳಿಗೆ ವಿವರಣಾತ್ಮಕ ಉತ್ತರ ಬರೆಯುವ ಪ್ರಶ್ನೆಗಳಿದ್ದು, ಅವುಗಳಲ್ಲಿ ಎರಡು ಅಂಕದ 5 ಪ್ರಶ್ನೆಗಳು, ಮೂರು ಅಂಕದ ಎರಡು ಪ್ರಶ್ನೆಗಳು, ನಾಲ್ಕು ಅಂಕದ ಒಂದು ಪ್ರಶ್ನೆಯನ್ನು ಪತ್ರಿಕೆ ಒಳಗೊಂಡಿತ್ತು.












Click it and Unblock the Notifications