ಬಿ.ಎಲ್.ಸಂತೋಷ್ - ಎಚ್.ಡಿ.ರೇವಣ್ಣ 3 ತಾಸು ಕ್ಲೋಸ್ ಡೋರ್ ಮೀಟಿಂಗ್?
ಯಡಿಯೂರಪ್ಪನವರ ಪದತ್ಯಾಗದ ನಂತರ ಕರ್ನಾಟಕ ಬಿಜೆಪಿಯಲ್ಲಿ ಹೀಗೇ ನಡೆಯುತ್ತದೆ ಎಂದು ಹೇಳುವ ಮನಸ್ಥಿತಿಯಲ್ಲಿ ಪಕ್ಷದ ಹೈಕಮಾಂಡ್ ಇಲ್ಲವೇ ಎನ್ನುವ ಪ್ರಶ್ನೆ ಎದುರಾಗುವಂತೆ ಮಾಡಿದೆ ಈ ಒಂದು ವಿದ್ಯಮಾನ.
ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮತ್ತು ಜೆಡಿಎಸ್ ಹಿರಿಯ ಮುಖಂಡ ಎಚ್.ಡಿ.ರೇವಣ್ಣ ಸುಮಾರು ಮೂರು ತಾಸು ದೆಹಲಿಯಲ್ಲಿ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ನಾಲ್ಕು ದಿನಗಳ ಹಿಂದೆ ಈ ರಹಸ್ಯ ಸಭೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಯಡಿಯೂರಪ್ಪನವರ ರಾಜೀನಾಮೆಯ ನಂತರ, ಒಂದು ವೇಳೆ ರಾಜಕೀಯ ಬಿಕ್ಕಟ್ಟ ಏನಾದರೂ ಎದುರಾದರೆ, ಅದನ್ನು ಸಂಭಾಳಿಸಲು ಪೂರ್ವಭಾವಿ ಮಾತುಕತೆ ನಡೆದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಬಿಎಸ್ವೈ ರಾಜೀನಾಮೆಯ ನಂತರ ಸಿಎಂ ರೇಸಿನಲ್ಲಿ ಮಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರು ಸಂತೋಷ್ ಅವರದ್ದು. ಈಗಾಗಲೇ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ಸಂತೋಷ್ ಅವರಿಗೆ ವರಿಷ್ಠರಿಂದ ಸ್ಪಷ್ಟ ಸಂದೇಶವಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಕುಮಾರಸ್ವಾಮಿಯವರು ಹಲವು ಬಾರಿ ಬಿಎಸ್ವೈ ಅವರನ್ನು ಭೇಟಿಯಾಗಿದ್ದರು
ಯಡಿಯೂರಪ್ಪನವರ ಅಧಿಕಾರದ ಅವಧಿಯಲ್ಲಿ ಅವರ ಮತ್ತು ದಳಪತಿಗಳ ಸಂಬಂಧೇ ಹಳಸದೇ ಇರುವುದು ಗೊತ್ತಿರುವ ವಿಚಾರ. ಜೊತೆಗೆ, ಕುಮಾರಸ್ವಾಮಿಯವರು ಹಲವು ಬಾರಿ ಬಿಎಸ್ವೈ ಅವರನ್ನು ಭೇಟಿಯಾಗಿಯೂ ಇದ್ದರು. ಈಗ, ರೇವಣ್ಣ ಅವರು ಸಂತೋಷ್ ಅವರನ್ನು ಭೇಟಿಯಾಗಿರುವುದು ಬಿಎಸ್ವೈ ರಾಜೀನಾಮೆಯ ನಂತರದ ರಾಜಕೀಯ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.

ರಾಜೀನಾಮೆ ನೀಡಲು ಯಡಿಯೂರಪ್ಪನವರು ಷರತ್ತನ್ನು ವಿಧಿಸಿದ್ದಾರೆ?
ರಾಜೀನಾಮೆ ನೀಡಲು ಯಡಿಯೂರಪ್ಪನವರು ಷರತ್ತನ್ನು ವಿಧಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ, ಅವರ ಬೇಡಿಕೆಯನ್ನು ವರಿಷ್ಠರು ಮುಂದೆ ಈಡೇರಿಸದಿದ್ದರೆ, ಬಿಎಸ್ವೈ ಸಿಟ್ಟಾಗಬಹುದು. ಇದರಿಂದ, ಸರಕಾರ ನಡೆಸಲು ಹಲವು ತೊಂದರೆಗಳು ಎದುರಾಗಬಹುದು ಎನ್ನುವುದು ವರಿಷ್ಠರ ಲೆಕ್ಕಾಚಾರ. ಹಾಗಾಗಿಯೇ, ರೇವಣ್ಣ ಅವರನ್ನು ಸಂತೋಷ್ ಭೇಟಿಯಾಗಿರುವುದು ಎನ್ನುವ ಸುದ್ದಿ ಹರಿದಾಡುತ್ತಿದೆ.

ಜೆಡಿಎಸ್ ಮುಖಂಡರ ಬೆಂಬಲಕ್ಕಾಗಿ ಸಂತೋಷ್ ಮಾತುಕತೆ
ಯಡಿಯೂರಪ್ಪನವರು ನನಗೆ ಯಾವ ಹುದ್ದೆಯೂ (ಪ್ರಮುಖವಾಗಿ ರಾಜ್ಯಪಾಲ) ಬೇಡವೆಂದು ವಿದಾಯ ದಿನದಂದು ಸಾರಿದ್ದಾರೆ. ಅವರ ಶಾಸಕರ ಅವಧಿ ಮುಗಿಯಲು ಇನ್ನೂ ಹೆಚ್ಚುಕಮ್ಮಿ ಎರಡು ವರ್ಷವಿದೆ. ಅವರನ್ನು ಎದುರು ಹಾಕಿಕೊಂಡು ಆಡಳಿತ ನಡೆಸುವುದು ಸವಾಲಿನ ಕೆಲಸ. ಹಾಗಾಗಿಯೇ, ಜೆಡಿಎಸ್ ಮುಖಂಡರ ಬೆಂಬಲಕ್ಕಾಗಿ ಸಂತೋಷ್ ಮಾತುಕತೆ ನಡೆಸಿರುವುದು ಎಂದು ಹೇಳಲಾಗುತ್ತಿದೆ.
Recommended Video

ಮುನಿಸಿಕೊಂಡು ಪಕ್ಷ ತೊರೆದು, ತಮ್ಮಾಪ್ತರನ್ನು ಬಿಜೆಪಿಯಿಂದ ಕರೆದುಕೊಂಡು ಹೋದರೆ?
ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಬಿಎಸೈ ಹೇಳಿದ್ದಾರೆ. ಆದರೂ, ಒಂದು ವೇಳೆ ಮುನಿಸಿಕೊಂಡು ಪಕ್ಷ ತೊರೆದು, ಜೊತೆಗೆ ತಮ್ಮಾಪ್ತರನ್ನು ಬಿಜೆಪಿಯಿಂದ ಕರೆದುಕೊಂಡು ಹೋದರೆ, ಸಂಖ್ಯಾಬಲದ ತೊಂದರೆ ಎದುರಾಗಬಹುದು. ಹಾಗಾಗಿ, ಜೆಡಿಎಸ್ ಪಕ್ಷದ ಬೆಂಬಲಕ್ಕಾಗಿ ಸಂತೋಷ್-ರೇವಣ್ಣ ಮಾತುಕತೆ ನಡೆದಿರುವುದು ಎನ್ನುವ ಗುಸುಗುಸು ಸುದ್ದಿ ಹರಿದಾಡುತ್ತಿದೆ.












Click it and Unblock the Notifications