ರಾಜ್ಯದಲ್ಲಿ ಜವಾಬ್ದಾರಿ ಮರೆತ ವಿಪಕ್ಷ ಬಿಜೆಪಿ ಮಾಡುತ್ತಿರುವುದೇನು?
ಬೆಂಗಳೂರು, ಫೆಬ್ರವರಿ 24: ರಾಜ್ಯದಲ್ಲಿ ಮತದಾರರಿಗೆ ಗ್ಯಾರಂಟಿ ಯೋಜನೆ ಜೊತೆಗೆ ಹತ್ತಾರು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ವಿಫಲತೆಯನ್ನು ಕಾಣುತ್ತಿದೆ. ಜೊತೆಗೆ ಬೆಲೆ ಏರಿಕೆಯನ್ನು ನಿಯಂತ್ರಿಸುವ ಬದಲು ಬೆಲೆ ಏರಿಕೆ ಮೂಲಕ ಬೊಕ್ಕಸ ತುಂಬುವ ಕಾರ್ಯಕ್ಕೆ ಮುಂದಾಗಿದೆ. ಇನ್ನೊಂದೆಡೆ ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರ ಎಡವುತ್ತಿದ್ದರೂ ಅದರ ವಿರುದ್ಧ ಹೋರಾಟ ಮಾಡಿ ಸರಿದಾರಿಗೆ ಕೊಂಡೊಯ್ಯಬೇಕಾದ ವಿಪಕ್ಷ ಬಿಜೆಪಿ ಎಲ್ಲಿದೆ? ಎಂದು ಜನ ಹುಡುಕಾಡುವಂತಾಗಿದೆ.
ರಾಜ್ಯದಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಜವಬ್ದಾರಿ ಇದೆಯೋ ಅದಕ್ಕಿಂತ ಹೆಚ್ಚಿನ ಜವಬ್ದಾರಿ ವಿಪಕ್ಷಗಳ ಮೇಲಿದೆ. ಈ ರಾಜ್ಯದಲ್ಲಿ ಅತಿಹೆಚ್ಚು ಬಾರಿ ವಿಪಕ್ಷ ಸ್ಥಾನದಲ್ಲಿ ಕುಳಿತು ಕೆಲಸ ಮಾಡಿರುವ ಬಿಜೆಪಿ ಈ ಬಾರಿ ವಿಪಕ್ಷ ಸ್ಥಾನದಲ್ಲಿ ಕುಳಿತು ಕೆಲಸ ಮಾಡುವಲ್ಲಿ ವಿಫಲವಾಗಿದೆ. ಹೀಗಾಗಿ ಆಡಳಿತ ಪಕ್ಷದ ಪಾಲಿಗೆ ಬಿಜೆಪಿ ಇದ್ದು ಇಲ್ಲದಂತಾಗಿದೆ. ದೇಶದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೂರನೇ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿದು ಮುನ್ನಡೆಯುತ್ತಿದೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸ್ಥಿತಿಗೆ ತಲುಪಿರುವುದು ಕೇಂದ್ರದ ನಾಯಕರಿಗೆ ಕಾಣಿಸುತ್ತಿಲ್ಲವೆ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ರಾಜ್ಯದಲ್ಲಿ ಬಿಜೆಪಿ ಪಕ್ಷವು ನಾಯಕರ ಪ್ರತಿಷ್ಠೆಗಳಿಗೆ ಬಲಿಯಾಗಿ ಬಣಗಳಾಗಿ ಒಡೆದು ಹೋಗುತ್ತಿದೆ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ನಾಯಕ ಸದ್ಯಕ್ಕೆ ಇಲ್ಲದಂತಾಗಿದೆ. 2023ರ ವಿಧಾನ ಸಭಾ ಚುನಾವಣೆ ನಂತರ ಬಿಜೆಪಿ ಪಕ್ಷದೊಳಗೆ ಎದ್ದಿರುವ ಭಿನ್ನಮತ ಮತ್ತು ನಾಯಕ ನಡುವಿನ ಅಸಮಾಧಾನಗಳು ಇಲ್ಲಿವರೆಗೆ ತಣ್ಣಗಾದಂತೆ ಕಾಣಿಸುತ್ತಿಲ್ಲ. ಸೋತು ಅಧಿಕಾರ ಕಳೆದು ಕೊಂಡ ಮೇಲಾದರೂ ಬುದ್ದಿ ಬರುತ್ತದೆ. ಮತ್ತೆ ರಾಜ್ಯದಲ್ಲಿ ಒಂದಾಗಿ ಹೋರಾಟ ಮಾಡಿ ಆಡಳಿತ ಪಕ್ಷಕ್ಕ ಛಾಟಿ ಬೀಸಬಹುದೆಂದು ಜನ ನಂಬಿದ್ದರು. ಆದರೆ ಬಿಜೆಪಿಯೊಳಗೆ ಇಲ್ಲಿವರೆಗೆ ಆಗಿದ್ದು, ಈಗ ಆಗುತ್ತಿರುವುದು ಎಲ್ಲವನ್ನು ಗಮನಿಸುತ್ತಾ ಹೋದರೆ ಕರ್ನಾಟಕದ ಮಟ್ಟಿಗೆ ಬಿಜೆಪಿ ಉದ್ಧಾರವಾಗುವುದು ಕಷ್ಟವೇ...
ತಮ್ಮ ವಿರುದ್ಧ ತಾವೇ ಹೋರಾಡುವ ನಾಯಕರು
ವಿಪಕ್ಷ ಸ್ಥಾನದಲ್ಲಿ ನಿಂತು ಬೀದಿಗಿಳಿದು ಜವಬ್ದಾರಿಯುತ ಹೋರಾಟ ಮಾಡಬೇಕಾಗಿದ್ದ ಬಿಜೆಪಿ ನಾಯಕರು ತಾವೇ ಬೀದಿಯಲ್ಲಿ ನಿಂತು ಒಬ್ಬರನೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ತಮ್ಮ ಪಕ್ಷದ ಮಾನವನ್ನು ತಾವೇ ಕಳೆಯುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ಪುತ್ರ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಆಕ್ರೋಶಗಳು ಪಕ್ಷದೊಳಗೆ ಕೇಳಿ ಬಂದಿತ್ತು. ತದ ನಂತರ ವಿಧಾನಸಭಾ ಚುನಾವಣೆ ನಡೆದು ಬಿಜೆಪಿ ಸೋಲು ಕಂಡು ವಿಪಕ್ಷದಲ್ಲಿ ಕುಳಿತುಕೊಳ್ಳಬೇಕಾಯಿತು. ತದ ನಂತರ ವಿಪಕ್ಷ ಸ್ಥಾನಕ್ಕಾಗಿ ಕಿತ್ತಾಟ ಆರಂಭವಾಗಿ, ಅಧಿವೇಶನ ಕೂಡ ವಿಪಕ್ಷ ನಾಯಕನಿಲ್ಲದೆ ನಡೆಯುವಂತಾಯಿತು.
ವಿಪಕ್ಷ ಸ್ಥಾನಕ್ಕೆ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಪೈಪೋಟಿ ನಡೆಸಿದರಾದರೂ ಅವರಿಗೆ ನೀಡದೆ ಆರ್.ಅಶೋಕ್ ಅವರಿಗೆ ನೀಡಲಾಯಿತು. ತದನಂತರ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟರು. ಆದರೆ ಅಲ್ಲೂ ಅವರಿಗೆ ನಿರಾಸೆಯಾಯಿತು. ಯಾವಾಗ ತಾನು ಅಂದುಕೊಂಡಿದ್ದು ಆಗಲಿಲ್ಲವೋ ಅವರು ಪಕ್ಷದ ನಾಯಕರ ವಿರುದ್ಧ ಸಿಡಿದೆದ್ದರು. ಪಕ್ಷದ ವಿರುದ್ಧವೇ ಹೇಳಿಕೆಗಳನ್ನು ನೀಡಲು ಆರಂಭಿಸಿದರಲ್ಲದೆ, ಒಂದಷ್ಟು ಅತೃಪ್ತ ನಾಯಕರನ್ನು ಒಟ್ಟು ಸೇರಿಸಿ ಪಕ್ಷದ ವಿರುದ್ಧವೇ ಹೋರಾಟಕ್ಕಿಳಿದರು. ವಿಪಕ್ಷ ಸ್ಥಾನದಲ್ಲಿ ಕುಳಿತು ಆಡಳಿತ ಪಕ್ಷದ ವಿರುದ್ಧ ಹೋರಾಡ ಬೇಕಾದವರು ತಮ್ಮ ವಿರುದ್ಧ ತಾವೇ ಹೋರಾಟ ಮಾಡಲು ನಿಂತು ಬಿಟ್ಟರು. ಇದು ನಮ್ಮ ರಾಜ್ಯದ ದುರಂತವೇ ಸರಿ.

ಶಿಸ್ತಿನ ಪಕ್ಷದಲ್ಲಿ ಅಂತ್ಯ ಕಾಣದ ಬಣಬಡಿದಾಟ
ಹೈಕಮಾಂಡ್ ಗಟ್ಟಿಯಾಗಿದೆ. ಹೀಗಾಗಿ ಏನೇ ಬಣಬಡಿದಾಟವಿದ್ದರೂ ತಕ್ಷಣವೇ ಕ್ರಮ ಕೈಗೊಳ್ಳುತ್ತಾರೆ ಎಂದು ಪಕ್ಷದ ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರು ನಂಬಿದ್ದರು. ಆದರೆ ಕಳೆದೊಂದು ವರ್ಷದ ಬೆಳವಣಿಗೆಯನ್ನು ಗಮನಿಸಿದರೆ ಹೈಕಮಾಂಡ್ ಗೆ ಬಡಬಡಿದಾಟವನ್ನು ತಹಬದಿಗೆ ತರಲು ಇನ್ನೂ ಕೂಡ ಸಾಧ್ಯವಾಗಿಲ್ಲ ಏಕೆ? ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಸೇರಿದಂತೆ ಘಟಾನುಘಟಿ ನಾಯಕರಿದ್ದರೂ ರಾಜ್ಯದಲ್ಲಿ ಉದ್ಭವಿಸಿರುವ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳದಿರುವುದು ಬಿಜೆಪಿ ಪಕ್ಷ ನಗೆಪಾಟಲಿಗೀಡಾಗುತ್ತಿದೆ.
ಇನ್ನು ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಒಂದೆಡೆ ಕುಳಿತು ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ಪ್ರಯತ್ನವನ್ನು ಇಲ್ಲಿವರೆಗೆ ಮಾಡಿಲ್ಲ. ಹೈಕಮಾಂಡ್ ಕೂಡ ಆ ಬಗ್ಗೆ ಪ್ರಯತ್ನ ಪಟ್ಟಿಲ್ಲ. ಹೀಗಾಗಿ ಒಬ್ಬರಿಗೊಬ್ಬರು ಪ್ರತಿಷ್ಠೆಗೆ ಬಿದ್ದಿದ್ದಾರೆ. ಈ ನಾಯಕರ ನಡುವೆ ಬೆಂಬಲಿಗರು ಕೂಡ ಪರಿಹಾರ ಕಾಣುವ ಬಗ್ಗೆ ಚಿಂತಿಸದೆ ಬೆಂಕಿ ಹಚ್ಚುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶಿಸ್ತಿನ ಪಕ್ಷ ಎಂದು ಬಡಾಯಿಕೊಚ್ಚಿಕೊಳ್ಳುವ ಪಕ್ಷದ ನಾಯಕರು ಬೀದಿಯಲ್ಲಿ ನಿಂತು ಅಸಭ್ಯವಾಗಿ ಬೈದಾಡಿಕೊಳ್ಳುತ್ತಾರೆ ಎಂದರೆ ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆ ಎಂಬುದು ಸುಲಭವಾಗಿ ಅರ್ಥವಾಗಿ ಬಿಡುತ್ತದೆ.

ಬಿಜೆಪಿಯಲ್ಲಿನ ಬಿರುಕು ಕಾಂಗ್ರೆಸ್‌ಗೆ ವರದಾನ
ಏನೇ ತಿಪ್ಪರಲಾಗ ಹಾಕಿದರೂ ರಾಜ್ಯದಲ್ಲಿ ಬಿಜೆಪಿ ನಾಯಕರು ಒಂದಾಗಿ ಹೋರಾಟ ಮಾಡಲ್ಲ ಎಂಬುದು ಆಡಳಿತರೂಢ ಕಾಂಗ್ರೆಸ್ ನಾಯಕರಿಗೆ ಗೊತ್ತಾಗಿದೆ. ಹೀಗಾಗಿ ಅವರು ವಿಪಕ್ಷ ಪಕ್ಷದ ನಾಯಕರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಒಗ್ಗಟ್ಟಾಗಿದ್ದಿದ್ದರೆ ಆಡಳಿತ ಪಕ್ಷದ ಯಡವಟ್ಟು, ಭ್ರಷ್ಟಾಚಾರ ಆರೋಪ, ಬೆಲೆ ಏರಿಕೆ ಹೀಗೆ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಿ ಜನರಿಗೆ ನ್ಯಾಯಕೊಡಿಸುವ ಕೆಲಸ ಮಾಡಬಹುದಿತ್ತು. ಆದರೆ ವಿಪಕ್ಷಗಳಲ್ಲಿನ ಬಿರುಕು ಆಡಳಿತ ಪಕ್ಷಕ್ಕೆ ವರದಾನವಾಗಿದೆ. ಹೀಗಾಗಿ ಜನ ಮಾತ್ರ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಬೆಲೆ ಏರಿಕೆ ತಪ್ಪಲ್ಲ ಎಂದು ಕೈಹಿಸುಕಿಕೊಳ್ಳುವಂತಾಗಿದೆ.












Click it and Unblock the Notifications