ರಾಜ್ಯದಲ್ಲಿ ಒಂದೇ ಒಂದು ಸಭೆ ಮಾಡಲು ಬಿಜೆಪಿಯವರಿಗೆ ಬಿಡಲ್ಲ: ಡಿ ಕೆ ಶಿವಕುಮಾರ್‌ ಎಚ್ಚರಿಕೆ ಕೊಟ್ಟಿದ್ಯಾಕೆ?

ಬೆಳಗಾವಿ, ಏಪ್ರಿಲ್‌ 28: ನಮ್ಮ ಪ್ರತಿಭಟನಾ ಕಾರ್ಯಕ್ರಮಕ್ಕೆ ಬಿಜೆಪಿಯು ತಮ್ಮ ಕಾರ್ಯಕರ್ತರನ್ನು ಕಳುಹಿಸಿ ಕಪ್ಪು ಬಾವುಟ ಪ್ರದರ್ಶಿಸಿ ಗದ್ದಲ ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿ ಹಾಗೂ ವಿರೋಧ ಪಕ್ಷದ ನಾಯಕರಿಗೆ ಹೇಳಲು ಬಯಸುತ್ತೇನೆ. ನಿಮ್ಮ ಪ್ರವೃತ್ತಿ ಹೀಗೆ ಮುಂದುವರೆದರೆ ರಾಜ್ಯದಲ್ಲಿ ನೀವು ಒಂದೇ ಒಂದು ಸಭೆ ಮಾಡಲು ನಾವು ಅವಕಾಶ ನೀಡುವುದಿಲ್ಲ. ಇದು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಸೋಮವಾರ ನಡೆದ ಬೆಲೆ ಏರಿಕೆ ವಿರೋಧಿಸಿ ಹಾಗೂ ಸಂವಿಧಾನ ರಕ್ಷಣೆಗೆ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ನಾನು ನಮ್ಮ ಕಾರ್ಯಕರ್ತರಿಗೆ ಸಂದೇಶ ನೀಡುತ್ತೇನೆ. ಪೆಟ್ರೋಲ್, ಡೀಸೆಲ್, ಚಿನ್ನ, ಕಬ್ಬಿಣ, ಸೀಮೆಂಟ್ ಬೆಲೆ ಏರಿಕೆ ಯಾಕೆ ಆಗಿದೆ ಎಂದು ಬಿಜೆಪಿಯವರನ್ನು ಪ್ರಶ್ನಿಸಿ ಎಂದು ಕರೆ ನೀಡಬೇಕಾಗುತ್ತದೆ. ನೀವು ನಮ್ಮ ವಿರುದ್ಧ ಹೋರಾಟ ಮಾಡುವುದಕ್ಕಿಂತ, ನಾವು ನಿಮ್ಮ ವಿರುದ್ಧ ಹೋರಾಟ ಮಾಡಲು ನನಗೆ ಹೆಚ್ಚಿನ ಕಾರ್ಯಕ್ಷಮತೆ ಇದೆ. ಬಿಜೆಪಿ ನಾಯಕರೇ ನೀವು ನಿಮ್ಮ ಕಾರ್ಯಕರ್ತರಿಗೆ ಬುದ್ದಿ ಹೇಳಿ ಸರಿ ಮಾಡಿಕೊಂಡರೆ ಇಲ್ಲವಾದರೆ, ಎಲ್ಲಾ ರೀತಿಯ ಪ್ರತಿ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ. ಇದು ಮನವಿಯಲ್ಲ ಎಚ್ಚರಿಕೆ ಎಂದು ಕಿಡಿಕಾರಿದರು.

BJP Will Not Be Allowed To Hold A Single Meeting In The State Said DK Shivakumar

ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲವಾಗಿದೆ. ಹೀಗಾಗಿ ಜನರ ಆಕ್ರೋಶ ಏನಿದ್ದರೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧವಿರಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ನಮ್ಮ ದೇಶದ ಸಂವಿಧಾನ, ಏಕತೆ, ಸಮಗ್ರತೆ, ಶಾಂತಿ ರಕ್ಷಿಸಿಕೊಂಡು ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರನ್ನು ಕಾಪಾಡಲು ನಾವು ಈ ಹೋರಾಟ ಮಾಡುತ್ತಿದ್ದೇವೆ.

ಬೆಳಗಾವಿ ಪುಣ್ಯಭೂಮಿ. ಇತ್ತೀಚೆಗಷ್ಟೇ ನಾವು ಮಹಾತ್ಮಾ ಗಾಂಧಿ ಅವರ ಎಐಸಿಸಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಆಚರಿಸಿದ್ದೆವು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ ಅವರು ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು. ಇದೇ ಮೈದಾನದಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಮಾಡಿದ್ದೆವು ಎಂದು ತಿಳಿಸಿದರು.

ಗಾಂಧಿಜಿ ಅವರು ಇದೇ ಭೂಮಿಯಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ ದೇಶಕ್ಕೆ ಸ್ವತಂತ್ರ ತಂದುಕೊಟ್ಟರು. ನಮ್ಮ ಎಲ್ಲಾ ನಾಯಕರು ಸೇರಿ ಇಲ್ಲಿನ ಗಾಂಧಿ ಬಾವಿಯಲ್ಲಿ ನೀರು ತೆಗೆದುಕೊಂಡು ರಸ್ತೆ ಸ್ವಚ್ಛ ಮಾಡಿ ನಮ್ಮ ರಾಜ್ಯದ ರಕ್ಷಣೆ ಮಾಡುವ ಹೋರಾಟ ಪ್ರಾರಂಭಿಸಿದೆವು. ನಮ್ಮ ಜನರ ಧ್ವನಿ ಕೇಳಲು ಹೋರಾಟ ಮಾಡಿದೆವು. ನಂತರ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆವು. ಚಿಕ್ಕೋಡಿಯಲ್ಲಿ ಮೊದಲ ಗ್ಯಾರಂಟಿಯಾಗಿ ಗೃಹಜ್ಯೋತಿಯನ್ನು ಘೋಷಿಸಿದೆವು. ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ, ಬೆಲೆ ಗಗನಕ್ಕೇರುತ್ತಿದೆ, ಆದಾಯ ಪಾತಾಳಕ್ಕೆ ಕುಸಿಯುತ್ತಿದೆ ಎಂದು ಗ್ಯಾರಂಟಿ ಯೋಜನೆ ಜಾರಿಗೆ ತಂದೆವು ಎಂದು ಹೇಳಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಹಾಲಿನ ಬೆಲೆ ಹೆಚ್ಚಾಗಿದೆ ಎಂದು ಬಿಜೆಪಿಯವರು ನಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ಜನಾಕ್ರೋಶ ಆರಂಭಿಸಿದ ದಿನವೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಅಡುಗೆ ಅನಿಲ ಬೆಲೆ ಏರಿಸಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿದಾಗ ಎಲ್ಲಾ ಪದಾರ್ಥಗಳ ಬೆಲೆ ಕೂಡ ಸಹಜವಾಗಿ ಏರಿಕೆಯಾಗುತ್ತದೆ. ರೈತರಿಗೆ ನೆರವಾಗಬೇಕು ಎಂದು ಹಾಲಿನ ಬೆಲೆಯನ್ನು 4 ರೂಪಾಯಿ ಏರಿಕೆ ಮಾಡಿದರೆ, ಬಿಜೆಪಿಯವರು ಪ್ರತಿಭಟನೆ ಮಾಡಿ ತಮ್ಮ ರೈತ ವಿರೋಧಿ ಮನಸ್ಥಿತಿ ಪ್ರದರ್ಶಿಸುತ್ತಿದ್ದಾರೆ. ಬಿಜೆಪಿಯವರು ತಮ್ಮ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಬೇಕು ಎಂದರು.

ನಮ್ಮ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಾಗಿ ಬಜೆಟ್ ನಲ್ಲಿ ರೂ.52 ಸಾವಿರ ಕೋಟಿ ಮೀಸಲಿಟ್ಟಾಗ ಸರ್ಕಾರ ದಿವಾಳಿಯಾಗಲಿದೆ ಎಂದು ಹೇಳುತ್ತಿದ್ದರು. ನಮ್ಮ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ರೂ.500 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ದೇವನಹಳ್ಳಿಯಲ್ಲಿ ಸುಮಾರು ರೂ.500 ಕೋಟಿ ರೂ., ಪಿರಿಯಾಪಟ್ಟಣದಲ್ಲಿ ರೂ,500 ಕೋಟಿ ರೂ., ಬೀದರ್ ಜಿಲ್ಲೆಯಲ್ಲಿ 2025 ಕೋಟಿ ರೂ. ನಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ ಎಂದರು.

ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಮಹಿಳೆಯರು ಮಾಂಗಲ್ಯ ಮಾಡಿಸಿಕೊಳ್ಳುವ ಚಿನ್ನದ ಬೆಲೆ 28 ಸಾವಿರ ರೂ. ಇತ್ತು. ಇಂದು ಅದು 1 ಲಕ್ಷಕ್ಕೆ ಏರಿಕೆಯಾಗಿದೆ. ಬೆಳ್ಳಿ 43 ಸಾವಿರದಿಂದ 94 ಸಾವಿರಕ್ಕೆ ಏರಿಕೆಯಾಗಿದೆ. ಡಾಲರ್ ಮೊತ್ತ 59 ರೂ. ನಿಂದ ಇಂದಬ 90 ರೂ. ಸನಿಹಕ್ಕೆ ಬಂದು ನಿಂತಿದೆ. ಸೀಮೆಂಟ್ 268ರಿಂದ 410ಕ್ಕೆ ಏರಿಕೆ, ಕಬ್ಬಿಣ 39 ಸಾವಿರದಿಂದ 73 ಸಾವಿರಕ್ಕೆ ಏರಿಕೆಯಾಗಿದೆ. ಸಕ್ಕರೆ 30ರಿಂದ 60ಕ್ಕೆ, ಅಕ್ಕಿ 30ರಿಂದ 60ಕ್ಕೆ, ಅಡುಗೆ ಎಣ್ಣೆ 60ರಿಂದ 200 ರೂ. ಆಗಿದೆ. ಈ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ನೀವೆಲ್ಲರೂ ಆಶೀರ್ವಾದ ಮಾಡಿ ನಮಗೆ ಅಧಿಕಾರ ಕೊಟ್ಟಿದ್ದೀರಿ. ಅಧಿಕಾರ ನಶ್ವರ, ನಮ್ಮ ಸರ್ಕಾರದ ಸಾಧನೆ ಅಜರಾಮರ, ಮತದಾರನೇ ನಮ್ಮ ಪಾಲಿನ ಈಶ್ವರ. ನೀವು ಕೊಟ್ಟ ಶಕ್ತಿಗೆ ನಿಮ್ಮ ಈಣ ತೀರಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಬಿಜೆಪಿಯ ಕೇಂದ್ರ ಸರ್ಕಾರ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುತ್ತಿದೆ. ಅಂಬೋಡ್ಕರ್ ಅವರ ಹೆಸರನ್ನು ಉಳಿಸಬೇಕು, ಸಂವಿಧಾನ ಕಾಪಾಡಬೇಕು ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಈ ಸಂವಿಧಾನದ ಮೂಲಕ ಎಲ್ಲಾ ವರ್ಗದ ಜನರನ್ನು ರಕ್ಷಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಸಾಧನೆ ಇಲ್ಲದೆ ಸತ್ತರೆ, ಸಾವಿಗೆ ಅಪಮಾನ. ಆದರ್ಶವಿಲ್ಲದೆ ಬದುಕಿದರೆ, ಬದುಕಿಗೆ ಅಪಮಾನ ಎಂದು ವಿವೇಕಾನಂದ ಅಂವರು ಹೇಳಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ಆದರ್ಶ ಇಟ್ಟುಕೊಂಡು ನಿಮ್ಮ ಬದುಕನ್ನು ಹಸನು ಮಾಡಲು ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಆದರೆ ನಂತರ ನಡೆದ ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ ಸೇರಿದಂತೆ ಎಲ್ಲಾ ರಾಜ್ಯಗಳ ಚುನಾವಣೆಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಅವರೇ ಘೋಷಣೆ ಮಾಡುತ್ತಿದ್ದಾರೆ. ಆಮೂಲಕ ನಮ್ಮ ಯೋಜನೆಗಳು ಕರ್ನಾಟಕ ಮಾಡೆಲ್ ಆಗಿ ದೇಶಕ್ಕೆ ಮಾದರಿಯಾಗಿವೆ ಎಂದರು.

ಸರ್ವರಿಗೂ ಸಮಬಾಳು, ಸಮಪಾಲಿನ ತತ್ವದ ಮೇಲೆ ನಮ್ಮ ಸರ್ಕಾರ ಕೆಲಸ ಮಾಡಿಕೊಂಡು ಬಂದಿದೆ. ಜನರಿಗಾಗಿ ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ಕಲುಬುರ್ಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 1000 ಕೋಟಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಭಾಗದ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಿದ್ದೇವೆ. ಲೋಕೋಪಯೋಗಿ ಇಲಾಖೆಯಿಂದ ಪ್ರತಿ ಕ್ಷೇತ್ರದಲ್ಲಿ 25-30 ಕೋಟಿಯಷ್ಟು ರಸ್ತೆ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ. ನೀರಾವರಿ ಇಲಾಖೆಯಗೆ 22 ಸಾವಿರ ಕೋಟಿ ನೀಡಲಾಗಿದ್ದು, ಈ ಜಿಲೆಯಲ್ಲೇ 2 ಸಾವಿರ ಕೋಟಿಯಷ್ಟು ನೀರಾವರಿ ಯೋಜನೆ ಹಮ್ಮಿಕೊಂಡಿದ್ದೇವೆ. ಇದೆಲ್ಲವೂ ಅಭಿವೃದ್ಧಿ ಕೆಲಸವಲ್ಲವೇ? ಬಿಜೆಪಿ ಸರ್ಕಾರ ಇಂತಹ ಕಾರ್ಯಕ್ರಮ ಮಾಡಿದ್ದರೇ? ಅವರು ಅಧಿಕಾರದಲ್ಲಿದ್ದಾಗ ಯಾವುದೇ ಸಾಕ್ಷಿ ಗುಡ್ಡೆ ಬಿಟ್ಟಿಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+