
ಸಿದ್ದರಾಮಯ್ಯ 'ಖಾನ್' ಆಗದೇ 'ಕೇಶವ'ನಾಗಲು ಸಾಧ್ಯವೇ?: ಬಿಜೆಪಿ ಕಿಡಿ
ಬೆಂಗಳೂರು, ಡಿಸೆಂಬರ್ 05: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲಾ ಖಾನ್ ಎಂದು ಕರೆದ ವಿಚಾರದ ಚರ್ಚೆ, ಆರೋಪ-ಪ್ರತ್ಯಾರೋಪಗಳು ನಿಲ್ಲುವಂತೆ ಕಾಣುತ್ತಿಲ್ಲ. ಇದೀಗ ಬಿಜೆಪಿ ಮತ್ತೆ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿ ತಮ್ಮ ನಾಯಕರ ಹೇಳಿಕೆ ಸಮರ್ಥಿಸಿಕೊಂಡಿದೆ.
ಕನ್ನಡಿಗರು ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ವಿನಾಕಾರಣ ಕರೆಯುತ್ತಿಲ್ಲ. ಸರ್ವಜನಾಂಗದ ಶಾಂತಿಯ ತೋಟಕ್ಕೆ ಮತಾಂಧನಾದ ಟಿಪ್ಪು ಸುಲ್ತಾನನನ್ನು ನುಗ್ಗಿಸಲಾಯಿತು. ನಮ್ಮ ನಾಡಿನ ಅಸ್ಮಿತೆಗೆ ಕೊಳ್ಳಿಯಿಟ್ಟ ಪೆಡಂಭೂತದ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ತಂದವರು ಸಿದ್ದರಾಮಯ್ಯನವರು. ಅವರು ಸಿದ್ರಾಮುಲ್ಲಾ ಖಾನ್ ಅಲ್ಲದೇ ಮತ್ತಿನ್ಯಾರು? ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಬ್ರಾಹ್ಮಣರ ಮೀಸಲಾತಿಯಿಂದ ಹಿಂದುಳಿದ ವರ್ಗಗಳಿಗೆ ಅನ್ಯಾಯ-ಯತೀಂದ್ರ ಸಿದ್ದರಾಮಯ್ಯ
ಸ್ವಪಕ್ಷದವರನ್ನು ತುಳಿಯುವ ಸಿದ್ದರಾಮಯ್ಯನವರ ಮನಸ್ಥಿತಿ ಕಂಡು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆವತ್ತೇ ಅವರನ್ನು ಜೆಡಿಎಸ್‌ನಿಂದ ಹೊರಹಾಕಿದ್ದರು. ಆಗ ಕಾಂಗ್ರೆಸ್ ಸೇರ್ಪಡೆಗೊಳ್ಳಲು ಸಿದ್ದರಾಮಯ್ಯಗೆ ಬಲ ಪ್ರದರ್ಶನದ ಅಗತ್ಯವತ್ತು. ಹಾಗಾಗಿ ಅಹಿಂದ ಎಂಬ ಏಣಿ ಕಟ್ಟಿದರು. ನಂತರ ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದುಳಿದವರು ಮತ್ತು ದಲಿತರ ಹೆಸರಲ್ಲಿ ಹತ್ತಿದ ಏಣಿಯನ್ನು ಎಡಗಾಲಲ್ಲಿ ತಳ್ಳಿದ್ದನ್ನು ಜನ ಮರೆತಿಲ್ಲ.

ತಲಾಖ್ ಹೇಳುವವರಿಗೆ ಶಾದಿ ಭಾಗ್ಯ
ಅರೇ ಕ್ಷಣವೂ ವಿವೇಚಿಸದೆ ತಲಾಖ್ ಎಂದು ಹೇಳುವ ಮೂಲಕ ಮಹಿಳೆಯರ ಬದುಕು ಬರ್ಬಾದ್ ಮಾಡುವ ಮನಸ್ಥಿತಿಯವರಿಗೆ ಬೆನ್ನುತಟ್ಟುವ ಶಾದಿ ಭಾಗ್ಯ ಕಲ್ಪಿಸಿದ್ದು ಸಿದ್ದರಾಮಯ್ಯನವರು. ಕೇವಲ ಒಂದು ಸಮುದಾಯದ ಓಲೈಕೆ ಮಾಡಲು ಸೆಕ್ಯುಲರಿಸಂ ಹೆಸರಿನಲ್ಲೇ ತುಷ್ಟೀಕರಣಕ್ಕೆ ಇಳಿದರು. ಇಂಥವರನ್ನು ಸಿದ್ರಾಮುಲ್ಲಾ ಖಾನ್ ಎನ್ನದೆ ಮತ್ತೇನೆಂದು ಕರೆದಾರು? ಎಂದು ಬಿಜೆಪಿ ವ್ಯಂಗ್ಯವಾಡಿದೆ.

ವಿಚಾರಣೆ ಇಲ್ಲದೇ ಕೇಸ್ ವಾಪಸ್
ದೇಶಾದ್ಯಂತ ಮತಾಂಧತೆಯನ್ನು ಪಸರಿಸುತ್ತಾ ಅಲ್ಲಲ್ಲಿ ಭಯೋತ್ಪಾದಕ ದಾಳಿ ನಡೆಸಲು ಹೊಂಚು ಹಾಕುತ್ತಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ 175 ಗೂಂಡಾಗಳ ಮೇಲಿದ್ದ ಕೇಸುಗಳನ್ನು ವಿಚಾರಣೆ ಇಲ್ಲದೆ ಹಿಂಪಡೆಯಲಾಯಿತು. ಇಂತಹ ವಿಚಾರವಾದಿ ಸಿದ್ದರಾಮಯ್ಯಗೆ ಸಿದ್ರಾಮುಲ್ಲಾ ಖಾನ್ ಎಂಬ ಬಿರುದನ್ನು ನಾವಲ್ಲ, ಜನರೇ ನೀಡಿದ್ದಾರೆ.
ರೈಲಿಗೆ 'ಟಿಪ್ಪು ಎಕ್ಸ್‌ಪ್ರೆಸ್' ಎಂಬ ಹೆಸರನ್ನು ಬದಲಾಯಿಸಿ ಜನ ಇಂದಿಗೂ ಸ್ಮರಿಸುವ ಆರಾಧಿಸುವ 'ಒಡೆಯರ್' ಎಕ್ಸ್‌ಪ್ರೆಸ್ ಎಂದು ಕರೆದಾಗ ನಿಮಗಾ ಅಸಹನೆಯನ್ನು ನಾಡಿನ ಜನ ಕಂಡಿದ್ದಾರೆ. ಟಿಪ್ಪುವಿನ ಆಸ್ಥಾನ ವಿದೂಷಕರಂತಾಗಿರುವ ತಮ್ಮನ್ನು ಸಿದ್ರಾಮುಲ್ಲಾ ಖಾನ್ ಎನ್ನದೇ ಮೋಸ ಮಾಡುವ ಮೀರ್ ಸಾದಿಕ್ ಎನ್ನಬಹುದೆ? ಎಂದು ಬಿಜೆಪಿ ಪ್ರಶ್ನಿಸಿದೆ.

'ಕರಾಳ ರಾತ್ರಿ' ಪಾಠ ಕೈಬಿಟ್ಟ ಸಿದ್ದು ಸರ್ಕಾರ
ನಳಂದಾ ವಿಶ್ವವಿದ್ಯಾಲಯವನ್ನು ಸುಟ್ಟು ಸರ್ವನಾಶ ಮಾಡಿದ್ದು ಇಸ್ಲಾಮಿಕ್ ಭಯೋತ್ಪಾದನೆ ಎಂಬುದನ್ನು ಒಪ್ಪದ ಸಿದ್ದರಾಮಯ್ಯ ಆ ಇತಿಹಾಸವನ್ನು ಮರೆಮಾಚಲು ಯತ್ನಿಸಿದರು. ಇಂದಿಗೂ ಇಸ್ಲಾಮಿಕ್ ಭಯೋತ್ಪಾದನೆಯ ಕ್ರೌರ್ಯವನ್ನು ಒಪ್ಪದೇ ಮುಘಲ್ ಆಕ್ರಮಣಕಾರರ ಮಾನಸಿಕತೆಯಲ್ಲಿರುವ ಕಾರಣಕ್ಕೆ ಜನರೇ ಸಿದ್ರಾಮುಲ್ಲಾ ಖಾನ್ ಎಂದು ಬ್ರಾಂಡ್ ಮಾಡಿದ್ದಾರೆ.
ಮುಂಬೈ ದಾಳಿಯಲ್ಲಿ ಸಾರ್ವಜನಿಕರ ಪ್ರಾಣ ಉಳಿಸಲು ಪ್ರಾಣ ತ್ಯಾಪ ಮಾಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ವೀರಗಾಥೆಯುಳ್ಳ 'ಕರಾಳ ರಾತ್ರಿ' ಪಾಠವನ್ನು ಪಠ್ಯದಿಂದ ಕೈಬಿಡಲಾಯಿತು. ರಾಷ್ಟ್ರೀಯತೆಯ ಪರಮ ವಿರೋಧಿ ಸಿದ್ದರಾಮಯ್ಯನವು ಹೀಗಿರುವಾಗ ತಮ್ಮನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆಯದೆ ಬೇರೆ ಬಿರುದು ಕೊಡಲಾದೀತೆ?.

ಸಿದ್ದು ಖಾನ್ ಆಗದೇ ಕೇಶವ ಆಗಲು ಸಾಧ್ಯವೇ?
ಹಿಜಾಬ್ ಸಮರ್ಥನೆಗೆ ಸ್ವಾಮೀಜಿಗಳು ಹಿಜಾಬ್ ಹಾಕುವುದಿಲ್ಲವಾ?, ಹಿಂದೂ ಮಹಿಳೆಯರು ದುಪಟ್ಟಾ ಹಾಕುವುದಿಲ್ಲವಾ? ಎಂದು ಎಲ್ಲದರಲ್ಲೂ ಹಿಜಾಬನ್ನೇ ಕಂಡ ಮೌಲ್ವಿ ನಮ್ಮ ಸಿದ್ರಾಮುಲ್ಲಾ ಖಾನ್. ಗೋ ಹತ್ಯೆಯಾದರೂ ಬೀಫ್ ಮಾರ್ಕೆಟ್ ನಿಲ್ಲಬಾರದು ಎಂದ ಹರಿಕಾರ. ಸಿದ್ದರಾಮಯ್ಯರಂಥವರು ಖಾನ್ ಆಗದೇ ಕೇಶವ ಆಗಲು ಸಾಧ್ಯವೇ? ಎಂದು ಬಿಜೆಪಿ ಕಿಡಿ ಕಾರಿದೆ.