ಕಾರ್ಯಕರ್ತರನ್ನ ಮೂರ್ಖರನ್ನಾಗಿ ಮಾಡಿತಾ ಬಿಜೆಪಿ? ಗಂಭೀರ ಆರೋಪ ಮಾಡಿದ ಪ್ರಿಯಾಂಕ್
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವು ರಾಜ್ಯದಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಗ್ದಾದ ನಡೆಯುತ್ತಿದೆ. ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೂಡ ಇದೇ ವಿಚಾರವಾಗಿ ಬಿಜೆಪಿಗೆ ಪ್ರಶ್ನೆ ಕೇಳಿದ್ದಾರೆ. ಅಲ್ಲದೆ ಬಿಜೆಪಿಯು ಕಾರ್ಯಕರ್ತರನ್ನು ಮೂರ್ಖರನ್ನಾಗಿ ಮಾಡಿದೆ ಎಂದು ಆರೋಪಿಸಿ, ಇದಕ್ಕೆ ಸಂಬಂಧಿಸಿದ ಕೆಲ ಮಾಹಿತಿಗಳನ್ನು ಅವರು ಉಲ್ಲೇಖಿಸಿದ್ದಾರೆ.
ಹೆಣ ಮತ್ತು ಹಣ ಇವು ಬಿಜೆಪಿಯವರ ಅತ್ಯಂತ ಪ್ರೀತಿಪಾತ್ರವಾದ ವಿಷಯಗಳು ಎಂದು ಪ್ರಿಯಾಂಕ್ ಕುಟುಕಿದ್ದಾರೆ. ಈ ಹಿಂದೆ ಬಿಜೆಪಿಯವರು ಹಲವು ಸಾವುಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದ್ದರು. ರಾಜ್ಯದ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸಿದ ಆ ಎಲ್ಲ ಪ್ರಕರಣಗಳ ಅಸಲಿ ಸತ್ಯ ಹೊರಬಂದು ಬಿಜೆಪಿ ಮುಖಭಂಗ ಅನುಭವಿಸಿದೆ ಎಂದು ವಾಗ್ದಾಳಿ ನಡೆಸಿದೆ.

ಶಿವಮೊಗ್ಗದ ಹರ್ಷ, ಮಂಗಳೂರಿನ ಪ್ರವೀಣ್ ನೆಟ್ಟಾರು, ಕಾರವಾರದ ಪರೇಶ್ ಮೆಸ್ತಾ, ತೀರ್ಥಹಳ್ಳಿಯ ನಂದಿತಾ, ಬೀದರ್‌ನ ಶಿವು ಉಪ್ಪಾರ, ಮೂಡಿಗೆರೆಯ ಧನ್ಯಶ್ರೀ, ಕರಾವಳಿಯ ಪ್ರಕಾಶ್ ಕುಳಾಯಿ, ಕೇಶವ್ ಶೆಟ್ಟಿ, ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ, ಪ್ರತಾಪ್ ಪೂಜಾರಿ ಅವರನ್ನು ಕೊಳಕು ರಾಜಕೀಯಕ್ಕೆ ಬಳಸಿಕೊಂಡ ಬಿಜೆಪಿಗೆ ಇವರೆಲ್ಲರ ನೆನಪಿದೆಯೇ? ಇವರೆಲ್ಲರ ಮನೆಗೆ ಬಿಜೆಪಿಗರು ಈಗಲೂ ಭೇಟಿ ನೀಡುತ್ತಾ ಕಷ್ಟ ಸುಖ ವಿಚಾರಿಸುತ್ತಿದ್ದಾರೆಯೇ? ಇವರೆಲ್ಲರ ಕುಟುಂಬಸ್ಥರ ಸ್ಥಿತಿಗತಿಗಳ ಬಗ್ಗೆ ಬಿಜೆಪಿಯವರು ಈಗಲೂ ಕಾಳಜಿ ವಹಿಸುತ್ತಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಈಗ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಯ ಪ್ರಕರಣದಲ್ಲೂ ಬಿಜೆಪಿ ತನ್ನ ಹಳೆಯ ಕುತಂತ್ರದ ರಾಜಕೀಯವನ್ನು ಮುಂದುವರೆಸಿದೆ. ಈ ಪ್ರಕರಣದಲ್ಲೂ ಸತ್ಯ ಹೊರಬಂದು ಬಿಜೆಪಿಯ ಸದಾರಮೆ ನಾಟಕ ಬಯಲಾಗುವುದು ನಿಶ್ಚಿತ. ಬಿಜೆಪಿ ಕಾರ್ಯಕರ್ತರ ನೆರವಿಗಾಗಿ ಆರಂಭಿಸಿದ್ದ ಹೆಲ್ಪ್‌ಲೈನ್ ಕತೆ ಏನಾಯಿತು? ಬಿಜೆಪಿ ಕಾರ್ಯಕರ್ತರ ನೆರವಿಗಾಗಿ ನೇಮಿಸಿದ್ದ ನೂರು ಜನರ ವಕೀಲರ ತಂಡ ಎಲ್ಲಿ ಹೋಯ್ತು? ಬಿಜೆಪಿಯೇ ಆರಂಭಿಸಿದ್ದ ಈ 18003091907 ಹೆಲ್‌ಲೈನ್ ನಂಬರ್‌ಗೆ ಕರೆ ಮಾಡಿದರೆ, ತನ್ನ ಕಾರ್ಯಕರ್ತರನ್ನು ಬಿಜೆಪಿ ಹೇಗೆ ಮೂರ್ಖರನ್ನಾಗಿಸುತ್ತದೆ ಎನ್ನುವುದು ತಿಳಿಯುತ್ತದೆ. ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುತ್ತಿರುವಂತೆಯೇ ಈ ನಂಬರ್ ಕೂಡ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದು ದೂರಿದ್ದಾರೆ.

ಸಾವಿನ ಮನೆಯ ಸೂತಕದ ಬೆಂಕಿಯಲ್ಲಿ ಹೋಳಿಗೆ ಬೇಯಿಸಲು ಹೊರಡುವ ಬಿಜೆಪಿಯವರು, ಮೊದಲು ತಮ್ಮ ಹಿಂದಿನ ನಾಚಿಕೆಗೇಡಿನ ವಿಷಯಗಳನ್ನು ನೆನಪು ಮಾಡಿಕೊಂಡರೆ ಒಳಿತು. ಸಾವಿನ ಮನೆಯಲ್ಲಿ ಸಂಭ್ರಮದ ರಾಜಕೀಯ ಮಾಡುವ ಬಿಜೆಪಿ ಮೊದಲು ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಕಾರ್ಯಕರ್ತರಿಗೆ ಅಭಯ ನೀಡಿದ ವಿಜಯೇಂದ್ರ
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್ ಸಂಬಂಧ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕಾರ್ಯಕರ್ತರಿಗೆ ಪತ್ರವೊಂದನ್ನು ಬರೆದಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತನೂ ಬಿಜೆಪಿಯ ಆಧಾರಸ್ತಂಭ ಎಂದು ನಂಬಿರುವ ಪಕ್ಷ ನಮ್ಮದು. ಯಾವೊಬ್ಬ ಕಾರ್ಯಕರ್ತನ ಮೇಲೂ ಕಿಂಚಿತ್ತು ಉಪಟಳವಾಗಲು ಪಕ್ಷ ಸಹಿಸಿಕೊಂಡು ಕೂರುವ ಮಾತೇ ಇಲ್ಲ. ಈ ನಿಟ್ಟಿನಲ್ಲಿ ಕಾರ್ಯಕರ್ತರ ಬೆಂಬಲಕ್ಕೆ ನಿಲ್ಲುವುದು ನಮ್ಮ ಪ್ರಥಮ ಆದ್ಯತೆ ಎಂದಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುವ ಪದಾಧಿಕಾರಿಗಳು, ಕಾರ್ಯಕರ್ತರಿಗೆ ಸರ್ಕಾರ ಹಾಗೂ ಇತರ ಶಕ್ತಿಗಳಿಂದ ಯಾವುದೇ ರೀತಿಯ ತೊಂದರೆ, ಒತ್ತಡಗಳು ಬರುತ್ತಿದ್ದಲ್ಲಿ ತಕ್ಷಣವೇ ನಮ್ಮನ್ನು ನೇರವಾಗಿ ಸಂಪರ್ಕಿಸಿ. ಪಕ್ಷದ ರಾಜ್ಯ ಕಾರ್ಯಾಲಯದ ಕಾರ್ಯದರ್ಶಿಯನ್ನ ಸಂಪರ್ಕಿಸಿ ಈ ಸಂಬಂಧ ಮಾಹಿತಿ ಹಂಚಿಕೊಂಡು ಒತ್ತಡ ಹಾಗೂ ಕಷ್ಟಕ್ಕೆ ಸಿಲುಕಿರುವ ಕಾರ್ಯಕರ್ತರಿಗೆ ಕಾನೂನಿನ ನೆರವು ಹಾಗೂ ನೈತಿಕ ಬಲ ನೀಡುವಂತೆ ಸೂಚಿಸಿದ್ದಾರೆ.












Click it and Unblock the Notifications