ಬಿಜೆಪಿ ಟಿಕೆಟ್ ಹಗರಣ: ಚೈತ್ರಾ ಕುಂದಾಪುರ ಆಡಿಯೋದಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಹೆಸರು- ಕಾಂಗ್ರೆಸ್ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 16: ಹಿಂದುತ್ವ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಈ ಪ್ರಕರಣಕ್ಕೆ ಮೂರನೇ ಆರೋಪಿ ಸ್ವಾಮೀಜಿ ಬಂಧನವಾದರೆ ದೊಡ್ಡವರ ಹೆಸರುಗಳು ಬಯಲಿಗೆ ಬರಲಿವೆ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಇದು ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಬಿಜೆಪಿಯ ಟಿಕೆಟ್ ಹಗರಣದಲ್ಲಿ ದಿನಕ್ಕೊಂದೊಂದು ಹೆಸರು ಹೊರಬರುತ್ತಿವೆ. ಚೈನ್ ಚೈತ್ರಳ ಆಡಿಯೋದಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಅವರ ಹೆಸರು ಪ್ರಸ್ತಾಪವಾಗಿದೆ' ಎಂದು ಕೆಪಿಸಿಸಿ ಆರೋಪಿಸಿದೆ.
'ಸುನಿಲ್ ಕುಮಾರ್ ಅವರಿಗೂ ಚೈತ್ರಳಿಗೂ ಈ ಹಗರಣದಲ್ಲಿ ಇರುವ ಸಂಬಂಧವೇನು ಎಂಬುದು ಇನ್ನೂ ನಿಗೂಢ. ಬಿಜೆಪಿ ನಾಯಕರ ಹೆಸರುಗಳು ಕೇಳಿಬಂದರೂ ಬಿಜೆಪಿ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುತ್ತಿರುವುದೇಕೆ ? ಪಕ್ಷದ ಹೆಸರಲ್ಲೇ ವಂಚನೆ ನಡೆದಿದ್ದರೂ ಬಿಜೆಪಿ ದೂರು ದಾಖಲಿಸದೆ ಸುಮ್ಮನಿರುವುದೇಕೆ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

'ಟಿಕೆಟ್ ವಂಚನೆ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದಿದ್ದಾರೆ ಬಸವರಾಜ ಬೊಮ್ಮಾಯಿ, ಯಾವುದಾದ್ರೂ ಹೆಣ ಕಂಡರೆ ಹಿಂದೂ ಕಾರ್ಯಕರ್ತರು ಎಂದು ಬೊಬ್ಬೆ ಹೊಡೆಯುವ ಬಿಜೆಪಿ ತನ್ನ ಕಾರ್ಯಕರ್ತರು ಅಕ್ರಮ, ಅನಾಚಾರ ನಡೆಸಿದಾಗ ಜಾರಿಕೊಳ್ಳುವುದೇಕೆ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
'ಆರೋಪಿ ಚೈನ್ ಚೈತ್ರ ಎಬಿವಿಪಿ ಕಾರ್ಯಕರ್ತೆಯಾಗಿದ್ದಾಳೆ. ಮತ್ತೊಬ್ಬ ಆರೋಪಿ ಗಗನ್ ಕಡೂರು ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದ. ವಂಚನೆ ನಡೆಸಿದ್ದು ಬಿಜೆಪಿ ಟಿಕೆಟ್ ಹೆಸರಲ್ಲಿ. ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಡೀಲ್ ನಡೆಸಲು ಬಳಸಿಕೊಳ್ಳಲಾಗಿತ್ತು. ಹೀಗಿದ್ದೂ ಸಂಬಂಧವಿಲ್ಲ ಎಂದು ಕೈತೊಳೆದುಕೊಳ್ಳುವುದು ಆತ್ಮವಂಚನೆ ಅಲ್ಲವೇ' ಎಂದು ಕಾಂಗ್ರೆಸ್ ಕೇಳಿದ್ದಾರೆ.
'ಬಿಜೆಪಿಯಲ್ಲಿ ಸಿಎಂ ಹುದ್ದೆಗೆ 2,500 ಕೋಟಿ ನೀಡಬೇಕು ಎಂಬ ಸತ್ಯ ಬಹಿರಂಗಪಡಿಸಿದ್ದ ಬಸನಗೌಡ ಪಾಟೀಲ ಅವರು ಬಿಜೆಪಿ ಟಿಕೆಟ್ ಗೆ 7 ಕೋಟಿ ಕೊಡಬೇಕು ಎಂದು ವಂಚಿಸಿದ ಆರೋಪಿಯೊಂದಿಗೆ. ಸ್ಯಾಂಟ್ರೋ ರವಿಯೂ ಬಿಜೆಪಿಗರಿಗೆ ಆಪ್ತ. ಪಿಎಸ್‌ಐ ಹಗರಣದ ಆರೋಪಿಗಳೂ ಬಿಜೆಪಿಗರಿಗೆ ಆಪ್ತರು. ರೌಡಿ ಶೀಟರ್ ಗಳೂ ಬಿಜೆಪಿಗರಿಗೆ ಆಪ್ತರು. ಟಿಕೆಟ್ ಹಗರಣದ ವಂಚಕರೂ ಬಿಜೆಪಿಗರಿಗೆ ಆಪ್ತರು. ಕಳ್ಳರು, ಸುಳ್ಳರು, ವಂಚಕರು ಬಿಜೆಪಿ ನಾಯಕರಿಗೇ ಆಪ್ತವಾಗುವುದೇಕೆ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
'ಕರ್ನಾಟಕದ ಬಿಜೆಪಿಯನ್ನು ಸಂತೋಷ 'ಜಿ' ಮುಳುಗಿಸಿದರು. ಕರ್ನಾಟಕದ ಬಿಜೆಪಿಯನ್ನು ಮೋದಿ 'ಜಿ' ಕೈಬಿಟ್ಟರು. ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅದ್ಯಾರೋ ವಿಶ್ವನಾಥ್ 'ಜಿ' ಅವರ ಸಹಾಯವನ್ನದರೂ ಪಡೆಯಿರಿ' ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.












Click it and Unblock the Notifications