"ಮಜಾವಾದಿ ಸಿದ್ದರಾಮಯ್ಯ ಕೈಯಲ್ಲಿ ಅಂದು ₹70 ಲಕ್ಷದ ವಾಚ್, ಇಂದು ₹43 ಲಕ್ಷದ್ದು"
ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಂದು ಮತ್ತೊಮ್ಮೆ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಸಿದ್ದಾರೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಕೈಗಡಿಯಾರದ ವಿಚಾರವಾಗಿ ಬಿಜೆಪಿ ವಾಗ್ದಾಳಿ ನಡೆಸಿದೆ. ಅಂದು ₹70 ಲಕ್ಷ, ಇಂದು ₹43 ಲಕ್ಷ, ಕೈ ಗಡಿಯಾರ ಬದಲಾಗಿದೆ ಹೊರತು, ಮಜಾವಾದಿಯ ಮನಸ್ಥಿತಿ ಬದಲಾಗಿಲ್ಲ. ಸಮಾಜವಾದದ ಮುಖವಾಡ ಧರಿಸಿ ಮಜಾವಾದದ ಜೀವನ ನಡೆಸುತ್ತಿರುವ ಸಿದ್ದರಾಮಯ್ಯನವರೇ, ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ಎಂದು ಕೇಳಿದೆ.
ಸಿದ್ದರಾಮಯ್ಯ ಅವರ ಸಮಾಜವಾದದ ನಿಮ್ಮ ವ್ಯಾಖ್ಯಾನವು ತುಂಬಾ ದುಬಾರಿಯಾಗಿರುವಂತೆ ತೋರುತ್ತಿದೆ. ಕರ್ನಾಟಕದ ಜನರು ಬರ ಮತ್ತು ಕುಸಿಯುತ್ತಿರುವ ಮೂಲಸೌಕರ್ಯಗಳೊಂದಿಗೆ ಹೋರಾಡುತ್ತಿರುವಾಗ, ನಮ್ಮ "ಸರಳ ಸಮಾಜವಾದಿ" ಮುಖ್ಯಮಂತ್ರಿ ಸ್ಯಾಂಟೋಸ್ ಡಿ ಕಾರ್ಟಿಯರ್ ವಾಚ್ ಅನ್ನು ಪ್ರದರ್ಶಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.

ರೈತರು ನ್ಯಾಯಯುತ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಉದ್ಯೋಗಾಕಾಂಕ್ಷಿಗಳು ಖಾಲಿ ಹುದ್ದೆಗಳ ಭರ್ತಿ ಮಾಡುವಂತೆ ಬೀದಿಗೆ ಇಳಿದಿದ್ದಾರೆ. ಸಂಬಳ ಸಿಗದ ಸರ್ಕಾರಿ ನೌಕರರು ಹೋರಾಟದ ಹಾದಿ ಹಿಡಿದಿದ್ದಾರೆ. ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಜನಸಾಮಾನ್ಯರು ಬಲಿಯಾಗುತ್ತಿದ್ದಾರೆ. ಜನರ ಸಮಸ್ಯೆಗಳ ಆಲಿಸಿ ಪರಿಹಾರ ನೀಡಬೇಕಾದ ಸರ್ಕಾರದ ನಾಯಕರು ತಮ್ಮ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿರುವುದು, ಉಪಹಾರ ಕೂಟದಲ್ಲಿ ಕಾಲ ಕಳೆಯುತ್ತಿರುವುದು ನಾಡಿನ ದೌರ್ಭಾಗ್ಯವೇ ಸರಿ ಎಂದು ಟೀಕಿಸಿದೆ.
ವಚನಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಕಾರ್ಯಕರ್ತೆಯರು ನಡುಗುವ ಚಳಿಯನ್ನೂ ಲೆಕ್ಕಿಸದೆ ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದರೂ ಸಿದ್ದರಾಮಯ್ಯ ನವರು ಅತ್ತ ಗಮನ ಹರಿಸುತ್ತಿಲ್ಲ. ಚುನಾವಣಾ ಸಂದರ್ಭದಲ್ಲಿ ವೇತನ ಹೆಚ್ಚಳ ಮಾಡುವ ಭರವಸೆ ನೀಡಿ ಮತ ಹಾಕಿಸಿಕೊಂಡು 2.5 ವರ್ಷಗಳು ಕಳೆದರೂ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರು ಕರ್ನಾಟಕದತ್ತ ಸುಳಿದಿಲ್ಲ ಎಂದು ಆರೋಪಿಸಿದೆ.
ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳವಾಗಿಲ್ಲ. ಸಂವೇದನೆ ಇಲ್ಲದ ಕಾಂಗ್ರೆಸ್ ಸರ್ಕಾರದ ನಡೆಯಿಂದ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಬದುಕು ಸಾಗಿಸುವುದು ದುಸ್ತರವಾಗಿದೆ. ಸಿಎಂ ಸಿದ್ದರಾಮಯ್ಯನವರೇ ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಇಲ್ಲವೇ ಜಾಗ ಖಾಲಿ ಮಾಡಿ. ಆಡಳಿತದ ಶಕ್ತಿ ಕೇಂದ್ರವಾದ ವಿಧಾನಸೌಧದ ಮುಂಭಾಗದಲ್ಲಿಯೇ ಸ್ವಚ್ಛತೆ ಕಾಪಾಡದ ಕಾಂಗ್ರೆಸ್ ಸರ್ಕಾರ ಇನ್ನು ಇಡೀ ರಾಜ್ಯವನ್ನು ಹೇಗೆ ತಾನೇ ಸ್ವಚ್ಛವಾಗಿಡುವುದು? ಸಿಎಂ ಸಿದ್ದರಾಮಯ್ಯನವರೇ, ತ್ಯಾಜ್ಯ ವಿಲೇವಾರಿಯನ್ನೂ ಮಾಡಲಾಗದಿದ್ದರೆ, ನಿಮ್ಮ ಸರ್ಕಾರ ಇದ್ದಾದರೂ ಏನು ಪ್ರಯೋಜನ? ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ರಾಜ್ಯದ ಜನತೆ ನಿಮ್ಮ ಕಾಂಗ್ರೆಸ್ ಪಕ್ಷವನ್ನು ಕಸದ ಬುಟ್ಟಿಗೆ ಎಸೆಯುವ ದಿನ ಬಹಳ ದೂರವಿಲ್ಲ ಎಂದು ಎಚ್ಚರಿಕೆ ನೀಡಿದೆ.












Click it and Unblock the Notifications