Troll Minister ಖರ್ಗೆ ನೇರ ಹೊಣೆ: ಉಮೇಶ್ ಜಾಧವ್ ಆಪ್ತನ ಹತ್ಯೆಗೆ ಬಿಜೆಪಿ ಖಂಡನೆ
ಬೆಂಗಳೂರು, ಮಾರ್ಚ್ 01: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರು ಗ್ರಾಮದಲ್ಲಿ ಸಂಸದ ಡಾ. ಉಮೇಶ್ ಜಾಧವ್ ಆಪ್ತ ಹಾಗೂ ಬಿಜೆಪಿ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪಕ್ಷದ ಮುಖಂಡನ ಕೊಲೆಯನ್ನು ಖಂಡಿಸಿ ಬಿಜೆಪಿ, ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದೆ.
ಟ್ರೋಲ್ ಮಿನಿಸ್ಟರ್ (Troll Minister) ಪ್ರಿಯಾಂಕ್ ಖರ್ಗೆಯವರ ಉಸ್ತುವಾರಿ ಅವಧಿಯಲ್ಲಿ ಕಲಬುರಗಿಯಲ್ಲಿ ಕೇವಲ ಕೊಲೆ-ಸುಲಿಗೆಗಳದ್ದೇ ದರ್ಬಾರು ಎಂದು ಬಿಜೆಪಿ ಗುಡುಗಿದೆ.

ಪ್ರಿಯಾಂಕ್ ಉಸ್ತುವಾರಿ ಸಚಿವರಾದ ಈ 10 ತಿಂಗಳಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಸಾಲು ಸಾಲಾಗಿ ಹತ್ಯೆಗೀಡಾಗುತ್ತಿದ್ದಾರೆ. ಇದಕ್ಕೆ ಕಲಬುರಗಿಯನ್ನು ತಮ್ಮ ಪುಂಡ ಪೋಕರಿ ಪಟಾಲಂಗೆ ಒಪ್ಪಿಸಿರುವ ಸಚಿವ ಪ್ರಿಯಾಂಕ್ ಖರ್ಗೆಯವರೇ ನೇರ ಹೊಣೆ. ಮಹಾಂತಪ್ಪ ಆಲೂರೆಯವರ ಹತ್ಯೆ ಬೆನ್ನಲ್ಲೇ ಮತ್ತೊಬ್ಬ ಬಿಜೆಪಿ ಮುಖಂಡ ಗಿರೀಶ್ ಚಕ್ರರವರನ್ನು ಸಹ ಹತ್ಯೆಗೈಯಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಕಲಬುರಗಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣ ಹಳ್ಳ ಹಿಡಿಸಿರುವ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಮೊದಲು ಸಂಪುಟದಿಂದ ವಜಾ ಮಾಡಿ ಎಂದು ಬಿಜೆಪಿ ಆಗ್ರಹಿಸಿದೆ.
ಇನ್ನು ಈ ಘಟನೆಯ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕೂಡ ಪ್ರತಿಕ್ರಯಿಸಿದ್ದು, ಕಲಬುರಗಿ ಜಿಲ್ಲೆಯಲ್ಲಿ ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷರಾದ ಮಹಾಂತಪ್ಪಾ ಆಲೂರೆ ಹಾಗೂ ಯುವಮೋರ್ಚಾ ಕಾರ್ಯಕರ್ತ ಗಿರೀಶ್ ಚಕ್ರ ಅವರ ಬರ್ಬರ ಹತ್ಯೆಗಳ ಅತ್ಯಂತ ಹೇಯ ಘಟನೆ ಖಂಡನೀಯ ಎಂದಿದ್ದಾರೆ.
ಗೂಂಡಾಗಳು, ಮಾಫಿಯಾಗಳಿಗೆ ಕರ್ನಾಟಕವನ್ನು ಸುರಕ್ಷಿತ ತಾಣವನ್ನಾಗಿಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ದುಷ್ಕೃತ್ಯ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸುವುದು ನಿರರ್ಥಕವಾಗುತ್ತಿದೆ. ಏಕೆಂದರೆ ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ಕಾನೂನು ಸುವ್ಯವಸ್ಥೆಯನ್ನು ಆಕ್ರಮಿಸಿಕೊಂಡಿದೆ.
ಕಾಂಗ್ರೆಸ್ ತನ್ನ ಬಳಿ ಹೊಂದಿರುವ ಅಂಗಸಂಸ್ಥೆಗಳ ಜೊತೆಗೇ ಮಾಫಿಯಾಗಳು, ವಿದ್ರೋಹಿಗಳು ಹಾಗೂ ಗೂಂಡಾಗಳ ಘಟಕಗಳನ್ನೂ ಅಸ್ತಿತ್ವಕ್ಕೆ ತರುವುದು ಬಾಕಿ ಇದ್ದಂತೆ ಕಂಡುಬರುತ್ತಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ, ಹತ್ಯೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಕಲಬುರಗಿಯ ಘಟನೆಗೆ ಸಂಬಂಧಿಸಿದಂತೆ ಕ್ರೌರ್ಯವೆಸಗಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ.












Click it and Unblock the Notifications